ಚೊಚ್ಚಲ ಬಜೆಟ್
News

ಚೊಚ್ಚಲ ಬಜೆಟ್

March 4, 2022

ಬೆಂಗಳೂರು, ಮಾ.3(ಕೆಎಂಶಿ)-ಚುನಾವಣಾ ವರ್ಷದಲ್ಲಿ ಪಕ್ಷದ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 60-75 ಸಾವಿರ ಕೋಟಿ ರೂ. ಸಾಲ ಪಡೆಯಲು ಮುಂದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಮಧ್ಯಾಹ್ನ ವಿಧಾನಸಭೆಯಲ್ಲಿ ತಮ್ಮ ಚೊಚ್ಚಲ ಮುಂಗಡ ಪತ್ರ ಮಂಡಿಸುತ್ತಿದ್ದಾರೆ. ಜನಪರ ಯೋಜನೆ ಹಾಗೂ ಪಕ್ಷದ ಶಾಸಕರ ತೃಪ್ತಿಪಡಿಸಲು ಯೋಜನಾ ಗಾತ್ರವನ್ನು 2.47 ಲಕ್ಷ ಕೋಟಿ ರೂ.ನಿಂದ 2.53 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ತೀರ್ಮಾನಕ್ಕೆ ಬರಲಾಗಿದೆ. ಈ ಗಾತ್ರದ ಪ್ರಮಾಣ ಹೆಚ್ಚಿಸಿದ್ದರಿಂದ 2022-23ನೇ ಸಾಲಿನಲ್ಲಿ 75 ಸಾವಿರ ಕೋಟಿ ರೂ. ಸಾಲ ಪಡೆಯಲು ಅವಕಾಶ ದೊರೆಯುತ್ತದೆ. ಕಳೆದ ಎರಡು ವರ್ಷಗಳಿಂದ ಕೋವಿಡ್-19ರಿಂದಾಗಿ ರಾಜ್ಯದ ಸಂಪನ್ಮೂಲ ಸಂಗ್ರಹದಲ್ಲಿ ಹಿನ್ನಡೆ ಯಾಗಿದೆ. ಸಂಪನ್ಮೂಲ ಕೊರತೆ ನೀಗಿಸಿ ಕೆಲವು ಯೋಜನೆ ನೀಡುವುದು, ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲ ಮಾಡಿಕೊಡಲು ಶಾಸಕರ ಕ್ಷೇತ್ರಾಭಿವೃದ್ಧಿಗಾಗಿ ಹಣ ನೀಡಲು ಈ ದೊಡ್ಡ ಮೊತ್ತ ಸಾಲ ಮಾಡಲು ಮುಂದಾಗಿದೆ. ಮುಖ್ಯಮಂತ್ರಿಯಾಗಿ ಮೊದಲ ಮುಂಗಡ ಪತ್ರ ಮಂಡಿಸುವ ಸಂದರ್ಭದಲ್ಲಿ ಜನಮಾನಸದಲ್ಲಿ ಉಳಿಯುವಂತಹ ಕೆಲವು ಕಾರ್ಯಕ್ರಮಗಳನ್ನು ನೀಡಬೇಕಾಗಿದೆ. ಇದಕ್ಕೆ ಸಂಪನ್ಮೂಲದ ಕೊರತೆ ಇದೆ. ಇದಕ್ಕೆ ಕೇಂದ್ರದ ನೆರವು ಅಷ್ಟಕಷ್ಟೇ. ಇಂತಹ ಸಂದರ್ಭದಲ್ಲಿ ತಮ್ಮ ಗುರು ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗವನ್ನೇ ಅನುಸರಿಸಲು ಹೊರಟಿದ್ದಾರೆ. ಮುಂಬರುವ ಚುನಾವಣೆ ಎದುರಿಸಲು ತಮ್ಮ ಕ್ಷೇತ್ರಗಳ ಅಭಿವೃದ್ಧಿ ಮಾಡಬೇಕಾಗಿದೆ. ಕಳೆದ ಎರಡು ವರ್ಷಗಳಿಂದ ನಮಗೆ ಅನುದಾನವೇ ದೊರೆತಿಲ್ಲ. ಈ ವರ್ಷವೂ ನೀಡದಿದ್ದರೆ, ಪಕ್ಷವೂ ಕೆಲವು ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ತಮ್ಮ ಶಾಸಕರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಕೆಲವು ಶಾಸಕರಂತೂ ಕ್ಷೇತ್ರದಲ್ಲಿ ಯಾವ ಕಾರ್ಯಕ್ರಮ ಕೈಗೊಳ್ಳಬೇಕು, ಎಷ್ಟು ಖರ್ಚಾಗಲಿದೆ ಎಂಬ ಮಾಹಿತಿ ನೀಡಿ 500-1500 ಕೋಟಿ ರೂ. ಅನುದಾನ ಕೋರಿದ್ದಾರೆ. ತಮ್ಮ ಮಾತಿಗೆ ಮುಖ್ಯಮಂತ್ರಿ ಮನ್ನಣೆ ನೀಡದಿದ್ದರೆ ಏನು ಮಾಡುವುದು ಎಂಬ ಭಯದಿಂದ ಯಡಿಯೂರಪ್ಪ ಅವರಿಂದ ಶಿಫಾರಸ್ಸು ಪತ್ರಗಳನ್ನು ಹಾಕಿಸಿದ್ದಾರೆ. ಅವರು ಎಲ್ಲ ಶಾಸಕರ ಬೇಡಿಕೆಗೆ ಸ್ಪಂದಿಸಿ, ಇಂತಹ ಕ್ಷೇತ್ರಗಳ ಶಾಸಕರ ಕ್ಷೇತ್ರಗಳಿಗೆ ಇಂತಿಷ್ಟು ಹಣ ನೀಡಿ ಎಂದು ಪತ್ರವನ್ನು ಮುಖ್ಯಮಂತ್ರಿಗೆ ಬರೆದಿದ್ದಾರೆ. ಇದು ಬೊಮ್ಮಾಯಿ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಚುನಾವಣಾ ವರ್ಷದಲ್ಲಿ ಪಕ್ಷದ ಹಿತದೃಷ್ಟಿಯಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಆಂತರಿಕ ಸಂಪನ್ಮೂಲದಲ್ಲಿ ಇವುಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ.

Translate »