ಉಕ್ರೇನ್ ಪ್ರಮುಖ ನಗರಗಳು ಬಹುತೇಕ ರಷ್ಯಾ ನಿಯಂತ್ರಣಕ್ಕೆ
News

ಉಕ್ರೇನ್ ಪ್ರಮುಖ ನಗರಗಳು ಬಹುತೇಕ ರಷ್ಯಾ ನಿಯಂತ್ರಣಕ್ಕೆ

March 4, 2022

ಕೀವ್, ಮಾ.3- ಎಂಟನೇ ದಿನವಾದ ಇಂದು ರಷ್ಯಾ ಪಡೆಗಳು ಉಕ್ರೇನ್ ಮೇಲೆ ದಾಳಿಯನ್ನು ತೀವ್ರಗೊಳಿಸಿವೆ. ಬಂದರು ನಗರ ಮರಿಯೂಪೋಲ್ ಬಹುತೇಕ ರಷ್ಯಾ ವಶವಾಗಿದ್ದರೆ, ಖೇರ್ಸಸ್ ನಗರದ ಮೇಲೆ ರಷ್ಯಾ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಉಕ್ರೇನ್ ರಾಜಧಾನಿ ಕೀವ್ ಮತ್ತು ಎರಡನೇ ದೊಡ್ಡ ನಗರ ಖಾರ್ಕಿವ್‍ನಲ್ಲಿ ರಷ್ಯಾ ಮತ್ತು ಉಕ್ರೇನ್ ಪಡೆಗಳ ನಡುವೆ ಭೀಕರ ಕಾಳಗ ನಡೆಯುತ್ತಿದೆ.

ಬಲಿಷ್ಠ ರಷ್ಯಾ ವಿರುದ್ಧ ವೀರಾವೇಶವಾಗಿ ಹೋರಾಟ ನಡೆಸುತ್ತಿ ರುವ ಉಕ್ರೇನ್ ಸೈನಿಕರು ಇರ್ಪಿನ್ ನಗರದ ಸಮೀಪ ರಷ್ಯಾದ ಎಸ್‍ಯು-30 ಫೈಟರ್ ಜೆಟ್ ಸುಕೋಯ್ ವಿಮಾನವನ್ನು ಹೊಡೆದುರುಳಿಸಿದ್ದಾರೆ. ಅಲ್ಲದೆ, ಉಕ್ರೇನ್‍ನಲ್ಲಿ ರಷ್ಯಾ ಸೇನೆಯನ್ನು ಮುನ್ನಡೆಸುತ್ತಿರುವ ಮೇಜರ್ ಜನರಲ್ ಆಂಡ್ರೋ ಅವರನ್ನು ಹತ್ಯೆ ಮಾಡಿರುವುದಾಗಿ ಉಕ್ರೇನ್ ಘೋಷಿಸಿದೆ. ಖಾರ್ಕಿವ್‍ನಲ್ಲಿ ನೂರಾರು ರಷ್ಯನ್ ಸೈನಿಕರನ್ನು ಸೆರೆಹಿಡಿದಿರುವುದಾಗಿಯೂ ಉಕ್ರೇನ್ ಹೇಳಿಕೊಂಡಿದೆ. ಅಲ್ಲದೆ ರಷ್ಯನ್ ಸೈನಿಕರ ಕೈಗಳನ್ನು ಕಟ್ಟಿ ನಿಲ್ಲಿಸಿರುವ ವೀಡಿಯೋವನ್ನು ಬಿಡುಗಡೆ ಮಾಡಿದೆ. ಮತ್ತೊಂದೆಡೆ ರಷ್ಯಾ ಪಡೆಗಳು ಹಲವಾರು ಉಕ್ರೇನ್ ಸೈನಿಕರನ್ನು ವಶಕ್ಕೆ ಪಡೆದುಕೊಂಡು ರಷ್ಯಾ ಪರ ಹೋರಾಟ ನಡೆಸುವಂತೆ ಅವರಿಗೆ ತಾಕೀತು ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಬಂದರು ನಗರಿ ರಷ್ಯಾ ಪಡೆ ವಶಕ್ಕೆ: ಖೇರ್ಸಸ್ ನಗರದ ಮೇಲೆ ರಷ್ಯಾ ಪಡೆಗಳು ನಿಯಂತ್ರಣ ಸಾಧಿಸಿರುವುದನ್ನು ಉಕ್ರೇನ್ ಒಪ್ಪಿಕೊಂಡಿದೆ. ಬಂದರು ನಗರ ಮರಿಯೂಪೋಲ್ ಅನ್ನು ಸುತ್ತುವರೆದು ರಷ್ಯಾ ಪಡೆಗಳು ತೀವ್ರ ದಾಳಿ ನಡೆಸುತ್ತಿದ್ದು, ಬಹುತೇಕ ಈ ನಗರವನ್ನು ವಶಕ್ಕೆ ಪಡೆದಿವೆ ಎಂದು ಹೇಳಲಾಗುತ್ತಿದೆ. ಈ ನಗರದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ರಷ್ಯಾ ಸೇನೆ ಧ್ವಂಸಗೊಳಿಸಿದೆ. ವಸತಿ ಪ್ರದೇಶದಲ್ಲೂ ಕ್ಷಿಪಣಿ ದಾಳಿ ನಡೆಸಿರುವುದರಿಂದ ಹಲವಾರು ಕಟ್ಟಡಗಳು ನೆಲಸಮಗೊಂಡಿವೆ. ಪೊಲೀಸ್ ಠಾಣೆಗಳು, ಆಸ್ಪತ್ರೆಗಳು, ಶಾಲೆಗಳನ್ನೂ ಬಿಡದೆ ದಾಳಿ ನಡೆಸಲಾಗುತ್ತಿದೆ. ಮರಿಯೂಪೋಲ್ ನಗರದಲ್ಲಿ ವಿದ್ಯುತ್ ಹಾಗೂ ಇಂಟರ್‍ನೆಟ್ ಸಂಪರ್ಕ ಕಡಿತಗೊಂಡಿದೆ. ನೀರು ಪೂರೈಕೆ ಸ್ಥಗಿತಗೊಂಡಿದೆ. ರಸ್ತೆಗಳಲ್ಲಿ ಹೆಣಗಳ ರಾಶಿ ಬಿದ್ದಿದೆ ಎಂದು ವರದಿಗಳು ತಿಳಿಸಿವೆ. ಇದಕ್ಕೆ ಪೂರಕವೆಂಬಂತೆ ‘ನಮ್ಮ ನಗರವನ್ನು ರಷ್ಯಾ ಸರ್ವನಾಶ ಮಾಡುತ್ತಿದೆ. ರಷ್ಯಾ ಸೈನಿಕರು ಆಹಾರ ಸರಬರಾಜನ್ನು ತಡೆಯುತ್ತಿದ್ದಾರೆ. ಮೈನಸ್ ಡಿಗ್ರಿ ತಾಪಮಾನವಿದ್ದು, ಕೊರೆಯುವ ಚಳಿಯಲ್ಲಿ ನರಕಯಾತನೆ ಅನುಭವಿಸುತ್ತಿದ್ದೇವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ ಹೀಟರ್ ಬಳಸಲು ಸಾಧ್ಯವಾಗುತ್ತಿಲ್ಲ’ ಎಂದು ಮರಿಯೂಪೋಲ್ ಸಿಟಿ ಕೌನ್ಸಿಲ್ ಅಳಲು ತೋಡಿಕೊಂಡಿದೆ. ಈ ನಗರದಲ್ಲಿ ಉಕ್ರೇನ್ ಸೈನಿಕರಿಂದ ಯಾವುದೇ ರೀತಿಯ ಪ್ರತಿರೋಧ ವ್ಯಕ್ತವಾಗದೇ ರಷ್ಯಾ ಸೈನಿಕರು ನಿಯಂತ್ರಣ ಸಾಧಿಸಿದ್ದಾರೆ.

Translate »