ಕಂದಾಯ ಕಡತ ವಿಲೇವಾರಿಗೆ 2 ವಾರದ ಗಡುವು
ಮೈಸೂರು

ಕಂದಾಯ ಕಡತ ವಿಲೇವಾರಿಗೆ 2 ವಾರದ ಗಡುವು

March 4, 2022

ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಸಚಿವ ಆರ್.ಅಶೋಕ್ `ಕಡತ ವಿಲೇವಾರಿ ಅಭಿಯಾನ’ಕ್ಕೆ ಗುರುವಾರ ಚಾಲನೆ ನೀಡಿದರು. ಶಾಸಕ ಎಲ್.ನಾಗೇಂದ್ರ, ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥ ಸ್ವಾಮಿ ಮತ್ತಿತರರಿದ್ದರು.

ಮೈಸೂರು, ಮಾ.3(ಎಸ್‍ಬಿಡಿ)- ಇನ್ನೆರಡು ವಾರದಲ್ಲಿ ಬಾಕಿ ಇರುವ ಕಡತ ವಿಲೇವಾರಿ ಪೂರ್ಣಗೊಳಿಸುವಂತೆ ಕಂದಾಯ ಸಚಿವ ಆರ್.ಅಶೋಕ್ ಕಟ್ಟಾಜ್ಞೆ ಹೊರಡಿಸಿದ್ದಾರೆ.

`ಕಂದಾಯ ಸ್ಪಂದನ’ ಶೀರ್ಷಿಕೆಯಡಿ ಆಯೋಜಿಸಿರುವ `ಕಡತ ವಿಲೇವಾರಿ ಅಭಿಯಾನ’ಕ್ಕೆ ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಚಾಲನೆ ನೀಡಿದ ಅವರು, ರಾಜ್ಯದ ಪ್ರತಿ ಜಿಲ್ಲೆಯಲ್ಲೂ 30-40 ಸಾವಿರ ಕಡತಗಳ ವಿಲೇವಾರಿ ಬಾಕಿ ಇದೆ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಬಡವರು, ರೈತರಿಗೆ ತೀವ್ರ ತೊಂದರೆಯಾಗಿದೆ. ಮೈಸೂರು ಜಿಲ್ಲೆಯಲ್ಲಿ 28,564 ಕಡತ ವಿಲೇವಾರಿ ಬಾಕಿಯಿದ್ದು, ಇಂದಿನಿಂದ ಮಾ.17ರ ವರೆಗೆ ನಿತ್ಯ ಬೆಳಗ್ಗೆ 10ರಿಂದ ಸಂಜೆ 7ರವರೆಗೆ ವಿಲೇವಾರಿ ಕಾರ್ಯ ನಿರ್ವಹಿಸಬೇಕು. ಈ ಅವಧಿಯಲ್ಲಿ ಶನಿವಾರ, ಭಾನುವಾರ ಸೇರಿದಂತೆ ರಜಾ ದಿನಗಳಲ್ಲೂ ಕೆಲಸ ಮಾಡ ಬೇಕು ಎಂದರು. ಈಗಾಗಲೇ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಡತ ವಿಲೇವಾರಿ ಅಭಿಯಾನ ಯಶಸ್ವಿಯಾಗಿದೆ. ಮೈಸೂರು ಜಿಲ್ಲೆ ಅಧಿಕಾರಿಗಳೂ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ, ನಿಗದಿತ ಅವಧಿ ಯೊಳಗೆ ಕಡತ ವಿಲೇವಾರಿ ಪೂರ್ಣ ಗೊಳಿಸುವ ವಿಶ್ವಾಸವಿದೆ. ಜನರಿಗೆ ಅನು ಕೂಲವಾಗಲಿ ಎಂಬ ಉದ್ದೇಶದಿಂದ ಬಾಕಿ ಕಡತಗಳಿಗೆ ಮುಕ್ತಿ ಕೊಡಿಸುವ ಅಭಿಯಾನ ನಡೆಸಲಾಗುತ್ತಿದೆ. ಈ ಸಂಬಂಧ ವರದಿ ತರಿಸಿಕೊಂಡು, ಪರಿಶೀಲನೆ ನಡೆಸಲಾಗುವುದು. ಯಾರಾದರೂ ಅಧಿಕಾರಿ ನಿರ್ಲಕ್ಷ್ಯ ತೋರಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಮಗ್ರ ಬದಲಾವಣೆ: ಅತ್ಯಾಧುನಿಕ ಸೌಲಭ್ಯಗಳಿದ್ದರೂ ಕಂದಾಯ ಇಲಾಖೆಯಲ್ಲಿ ಜನರಿಗೆ ತ್ವರಿತ ಸೇವೆ ಸಾಧ್ಯವಾಗಿಲ್ಲ. ನಾನು ಇಲಾಖೆ ಸಚಿವನಾದ ಬಳಿಕ ಸಾಕಷ್ಟು ಸುಧಾರಣೆ, ಬದಲಾವಣೆಗೆ ಕ್ರಮ ವಹಿಸಲಾಗಿದೆ. ವಯಸ್ಸಿನ ದಾಖಲೆ ಆಧಾರದಲ್ಲಿ ಫಲಾನುಭವಿಗಳ ಮನೆ ಬಾಗಿಲಿಗೆ ಸಾಮಾಜಿಕ ಭದ್ರತೆ ಪಿಂಚಣಿ ತಲುಪಿಸುವ ಯೋಜನೆ ಜಾರಿಗೊಳಿಸಲಾಗಿದೆ. ಕಳೆದ 6 ತಿಂಗಳಲ್ಲಿ 32 ಸಾವಿರ ಜನರಿಗೆ ಈ ಸವಲತ್ತು ನೀಡಲಾಗಿದೆ. `ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮ ರೂಪಿಸಿ, ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಮಾತ್ರವಲ್ಲ, ಕಂದಾಯ ಸಚಿವ, ಉಪ ವಿಭಾಗಾಧಿಕಾರಿಗಳು, ತಹಸಿಲ್ದಾರ್ ಎಲ್ಲರೂ ಹಳ್ಳಿಗಳಿಗೆ ತೆರಳಿ 26-32 ಗಂಟೆ ಕಾಲ ವಾಸ್ತವ್ಯವಿದ್ದು, ಕುಂದು ಕೊರತೆ ಆಲಿಸಲಾಗುತ್ತಿದೆ. ಹಾಸ್ಟೆಲ್‍ಗಳ ಸುಧಾರಣೆಗೂ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಸಬ್ ರಿಜಿಸ್ಟ್ರಾರ್ ಕಚೇರಿ ಕೆಲಸದ ವೇಳೆಯನ್ನೂ ವಿಸ್ತರಿಸಲಾಗಿದೆ. ಕೋವಿಡ್‍ನಿಂದ ಮೃತಪಟ್ಟವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಗಿದೆ. ಅಗತ್ಯಕ್ಕಿಂತ ಹೆಚ್ಚಿನ ಸರ್ವೆಯರ್ ನೇಮಿಸಿಕೊಳ್ಳಲಾಗಿದ್ದು, ಇನ್ನು 6 ತಿಂಗಳಲ್ಲಿ ಬಾಕಿ ಕೆಲಸ ಮುಕ್ತಾಯಗೊಳಿಸಲು ಮುಂದಾಗಿದ್ದೇವೆ. ಒಟ್ಟಾರೆ ಕಂದಾಯ ಇಲಾಖೆಯ ಸಮಗ್ರ ಬದಲಾವಣೆ ಮೂಲಕ ಜನರಿಗೆ ತಕ್ಷಣವೇ ಉತ್ತಮ ಸೇವೆ ಕಲ್ಪಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ, ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥ ಸ್ವಾಮಿ, ಉಪ ವಿಭಾಗಾಧಿಕಾರಿಗಳು, ತಹಸಿಲ್ದಾರ್‍ಗಳು ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Translate »