ಮೈಸೂರಲ್ಲಿ ಮಾ.11ರಿಂದ ಬಹುರೂಪಿರಂಗೋತ್ಸವ
ಮೈಸೂರು

ಮೈಸೂರಲ್ಲಿ ಮಾ.11ರಿಂದ ಬಹುರೂಪಿರಂಗೋತ್ಸವ

March 3, 2022

ಮೈಸೂರು,ಮಾ.2(ಪಿಎಂ)-`ತಾಯಿ’ ಶೀರ್ಷಿಕೆಯಡಿ ಮಾ.11ರಿಂದ 20ರವರೆಗೆ ನಡೆಯುವ ರಂಗಾಯಣ `ಬಹುರೂಪಿ’ ರಾಷ್ಟ್ರೀಯ ರಂಗೋತ್ಸವದಲ್ಲಿ ಕನ್ನಡ ಸೇರಿದಂತೆ ಇನ್ನಿತರ ಭಾಷೆಗಳ ಒಟ್ಟು 35 ನಾಟಕಗಳು ಪ್ರದರ್ಶನಗೊಳ್ಳಲಿವೆ. ಈ ಪೈಕಿ ಕನ್ನಡದ 24 ನಾಟಕಗಳಿದ್ದು, ಜೊತೆಗೆ ಜನಪದೋತ್ಸವ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ವಿಚಾರ ಸಂಕಿರಣ ಸೇರಿದಂತೆ ಕರಕುಶಲ ವಸ್ತುಗಳು, ಪುಸ್ತಕ ಹಾಗೂ ಆಹಾರ ಮಳಿಗೆಗಳು ತಲೆ ಎತ್ತುವುದರೊಂದಿಗೆ ರಂಗಾಯಣದ ಅಂಗಳವು ರಂಗುರಂಗಿನ ತಾಣವಾಗಿ ಮಾರ್ಪಡಲಿದೆ.

ರಂಗಾಯಣದ ಭೂಮಿಗೀತ, ವನರಂಗ, ಬಿ.ವಿ.ಕಾರಂತ ರಂಗಚಾವಡಿ, ಸಂಪತ್ ರಂಗಮಂದಿರ (ಕಿರುರಂಗ ಮಂದಿರ) ಮತ್ತು ಕಲಾಮಂದಿರ ಸೇರಿದಂತೆ ಐದು ವೇದಿಕೆಗಳಲ್ಲಿ ನಾಟಕಗಳು ಪ್ರದರ್ಶನಗೊಳ್ಳಲಿವೆ. ನಾಟಕ ಪ್ರದರ್ಶನಕ್ಕೆ 100 ರೂ. ಟಿಕೆಟ್ ದರ ನಿಗದಿ ಮಾಡಿದ್ದು, ಉಳಿದೆಲ್ಲದಕ್ಕೂ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ. ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಬುಧವಾರ ರಂಗಾಯಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಅತ್ಯಂತ ಗಂಭೀರವಾಗಿ ಚರ್ಚಿಸಿ ಈ ಬಾರಿ `ತಾಯಿ’ ಶೀರ್ಷಿಕೆ ಆಯ್ಕೆ ಮಾಡಲಾಗಿದೆ. ಇಲ್ಲಿ ತಾಯಿಯನ್ನು ಅನೇಕ ಸ್ತರದಲ್ಲಿ ನೋಡಲಾಗಿದೆ. ಭೂಮಿ, ಜಲ, ಪ್ರಕೃತಿ, ಗೋವು-ಜಾನುವಾರು ಸೇರಿದಂತೆ ಮಾತೃ ಸ್ವರೂಪಿಯಾಗಿ ಸಮಾಜಕ್ಕೆ ಸೇವೆ ನೀಡಿದವರು ಮತ್ತು ನಮ್ಮ ಹೊತ್ತ ತಾಯಿ ಒಳಗೊಂಡ ಸ್ತರದಲ್ಲಿ ಇಲ್ಲಿ ತಾಯಿಯನ್ನು ನೋಡಲಾಗಿದೆ ಎಂದು ಹೇಳಿದರು. 10 ದಿನಗಳ ನಾಟಕೋತ್ಸವದೊಂದಿಗೆ ಅನೇಕ ರಂಗು ರಂಗಿನ ಕಾರ್ಯಕ್ರಮಗಳು ಜರುಗಲಿವೆ. ಹವ್ಯಾಸಿ ರಂಗ ವೇದಿಕೆ ಅಧ್ಯಕ್ಷ ಸುರೇಶ್‍ಬಾಬು ನೇತೃತ್ವದ ತಂಡವು ನಾಟಕಗಳನ್ನು ಆಯ್ಕೆ ಮಾಡಿದೆ. ತಾಯಿ ಕುರಿತಂತೆ 24 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಪರಿಸರವಾದಿ ಮನು ಈ ಸಿನಿಮಾಗಳನ್ನು ಆಯ್ಕೆ ಮಾಡಿದ್ದಾರೆ. ರಾಷ್ಟ್ರದಲ್ಲಿ ಹೆಸರು ಮಾಡಿರುವ ಮಂಗಳಮುಖಿಯರಿಂದ ಪ್ರದರ್ಶನಗೊಳ್ಳುವ ತಮಿಳಿನ `ನೂರಮ್ಮ-ಬಿರಿಯಾನಿ ದರ್ಬಾರ್’ ನಾಟಕವು ರಂಗೋತ್ಸವದ ವಿಶಿಷ್ಟಗಳಲ್ಲಿ ಒಂದು. ಹೆಸರಾಂತ ಹಿರಿಯ ನಟರಾದ ಎಸ್.ಎನ್.ಸೇತೂರಾಂ ಮತ್ತು ಮುಖ್ಯಮಂತ್ರಿ ಚಂದ್ರು ಅವರ ಅಭಿನಯದ ನಾಟಕಗಳೂ ಪ್ರದರ್ಶನಗೊಳ್ಳಲಿವೆ.

ಜನಪದೋತ್ಸವ: ಮಾ.11ರಂದು ಸಂಜೆ 4.30ಕ್ಕೆ ರಂಗಾಯಣದ ಕಿಂದರಿಜೋಗಿ ಜನಪದ ರಂಗದಲ್ಲಿ ಉದ್ಘಾಟನೆಗೊಳ್ಳುವ ಜನಪದೋತ್ಸವದಲ್ಲಿ ರಾಜ್ಯ ಮತ್ತು ರಾಷ್ಟ್ರದ ವಿವಿಧೆಡೆಗಳಿಂದ 30ಕ್ಕೂ ಹೆಚ್ಚು ಶ್ರೇಷ್ಠ ಜನಪದ ತಂಡಗಳಿಂದ 600ಕ್ಕೂ ಹೆಚ್ಚು ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಜನಪದೋತ್ಸವ ಉದ್ಘಾಟಿಸಲಿದ್ದು, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಿ.ಎಲ್.ಹೆಗಡೆ, ಜಾನಪದ ತಜ್ಞೆ ಡಾ.ವಿಜಯಲಕ್ಷ್ಮೀ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಚಲನಚಿತ್ರೋತ್ಸವ: ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಮಾ.12ರಂದು ಬೆಳಗ್ಗೆ 11ಕ್ಕೆ ಕೊಡವ ಭಾಷೆಯ `ದ ಸ್ಟೋರಿ ಆಫ್ ಕಾವೇರಿ’ ಕಿರುಚಿತ್ರ ಪ್ರದರ್ಶನದ ಮೂಲಕ ಚಲನಚಿತ್ರೋತ್ಸವ ಉದ್ಘಾಟನೆಗೊಳ್ಳಲಿದೆ. ಕಿರುಚಿತ್ರಗಳು ಸೇರಿದಂತೆ 24 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಜೊತೆಗೆ ದಿ.ಪುನೀತ್ ರಾಜ್‍ಕುಮಾರ್ ಅಭಿನಯದ `ರಾಜಕುಮಾರ’ ಮತ್ತು ಡಾ.ರಾಜ್‍ಕುಮಾರ್ ಅಭಿನಯದ `ಬಬ್ರುವಾಹನ’ ಚಿತ್ರಗಳೂ ಪ್ರದರ್ಶನಗೊಳ್ಳಿವೆ. ನಟಿ ತಾರಾ ಅನುರಾಧ ಚಲನಚಿತ್ರೋತ್ಸವ ಉದ್ಘಾಟಿಸಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ಮೈಸೂರು ವಿವಿ ಪತ್ರಿಕೋದ್ಯಮ ವಿದ್ಯಾರ್ಥಿಗಳು `ಬಹುರೂಪಿ ಬುಲೆಟಿನ್’ ಪತ್ರಿಕೆ ಹೊರತರಲಿದ್ದಾರೆ. ಈಗಾಗಲೇ ಕಾವಾ ವಿದ್ಯಾರ್ಥಿಗಳು ಕಲಾಕೃತಿಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಬಹುರೂಪಿಗಿಂತ ಈ ಬಾರಿ ಹೆಚ್ಚು ಕಾರ್ಯಕ್ರಮಗಳು ಇರಲಿವೆ ಎಂದು ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.

Translate »