ಕರ್ನಾಟಕದ ಪ್ರತಿಭಾನ್ವಿತ ವಿದ್ಯಾರ್ಥಿ ನವೀನ್ ಸೇರಿ ಭಾರತದ ಇಬ್ಬರ ಬಲಿ ಪಡೆದ ಉಕ್ರೇನ್ ಯುದ್ಧ
News

ಕರ್ನಾಟಕದ ಪ್ರತಿಭಾನ್ವಿತ ವಿದ್ಯಾರ್ಥಿ ನವೀನ್ ಸೇರಿ ಭಾರತದ ಇಬ್ಬರ ಬಲಿ ಪಡೆದ ಉಕ್ರೇನ್ ಯುದ್ಧ

March 3, 2022

ಕೀವ್, ಮಾ.2-ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ದಲ್ಲಿ ಮಂಗಳವಾರ ಉಕ್ರೇನ್‍ನ 2ನೇ ದೊಡ್ಡ ನಗರ ಖಾರ್ಕಿವ್‍ನಲ್ಲಿ ರಾಜ್ಯದ ಹಾವೇರಿ ಜಿಲ್ಲೆ ಚಳಗೆರೆ ಗ್ರಾಮದ ಶೇಖಪ್ಪ ಗ್ಯಾನಗೌಡರ್ ಪುತ್ರ ನವೀನ್ ಗ್ಯಾನಗೌಡರ್ ರಷ್ಯಾ ಶೆಲ್ ದಾಳಿಯಿಂದ ಮಂಗಳ ವಾರ ಬೆಳಗ್ಗೆ ಮೃತಪಟ್ಟರೆ, ಬುಧವಾರ ಪಂಜಾಬ್‍ನ ಬರ್ನಾಲ್ ಗ್ರಾಮದ ಚಂದನ್ ಜಿಂದಾಲ್ ಬ್ರೇನ್ ಸ್ಟೋಕ್‍ನಿಂದ ಮೃತ ಪಟ್ಟಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿ ಏಳು ದಿನಗಳಾಗಿದೆ. ಘನ ಘೋರ ಯುದ್ಧ ಮುಂದುವರೆದಿದೆ.

ಖಾರ್ಕಿವ್‍ನ ಹಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿ ವರ್ಸಿಟಿಯಲ್ಲಿ ನಾಲ್ಕನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಮಂಗಳವಾರ ಉಕ್ರೇನ್ ಕಾಲಮಾನ 9 ಗಂಟೆ ನಂತರ ತಾನಿದ್ದ ಕಾಲೇಜಿನ ಬಂಕರ್‍ನಿಂದ ಕೆಲ ಸಹಪಾಠಿ ಗಳೊಂದಿಗೆ ನಾಲ್ಕು ಕಿ.ಮೀ. ಅಂತರದಲ್ಲಿರುವ ರೈಲ್ವೆ ನಿಲ್ದಾಣಕ್ಕೆ ತೆರಳಿ, ನಂತರ ಭಾರತೀಯ ರಾಯಭಾರಿ ಸ್ಥಾಪಿಸಿರುವ ಸೆಟಲ್ಮೆಂಟ್‍ಗೆ ತಲುಪಬೇಕು ಎಂದು ಯೋಜನೆ ರೂಪಿಸಿಕೊಂಡಿದ್ದ. ಅದಕ್ಕೂ ಮುನ್ನ ಸಹಪಾಠಿಗಳೊಂದಿಗೆ ಆಹಾರ ಸೇವಿಸಿ ನಂತರ ಹೊರಡೋಣ ಎಂದು ತಿಳಿಸಿ ಬಂಕರ್‍ನಿಂದ ಕೇವಲ 50 ಮೀಟರ್ ಅಂತರದಲ್ಲಿದ್ದ ಮಳಿಗೆಗೆ ತೆರಳಿದ್ದಾನೆ. ಅಲ್ಲಿಗೆ ತೆರಳಿದ ನಂತರ ತನ್ನ ಸಹಪಾಠಿ ಶ್ರೀಕಾಂತ್ ಎಂಬಾತನಿಗೆ ಕರೆ ಮಾಡಿ ತನ್ನ ಬಳಿ ಹಣವಿಲ್ಲ, ಖಾತೆಗೆ ಹಣ ಜಮೆ ಮಾಡುವಂತೆ ಕೇಳಿಕೊಂಡಿ ದ್ದಾನೆ. ಹಣ ಜಮೆಯಾದ ನಂತರ ಎಟಿಎಂನಲ್ಲಿ ಹಣ ಡ್ರಾ ಮಾಡಲು ಸಾಲಿನಲ್ಲಿ ನಿಂತಿದ್ದ ವೇಳೆ ಶೆಲ್ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಕರ್ನಾಟಕದ ಮಾಧ್ಯಮಗಳೊಂದಿಗೆ ವೀಡಿಯೋ ಕಾಲ್ ಮೂಲಕ ಮಾತನಾಡಿದ ನವೀನ್ ಸ್ನೇಹಿತ ಯಶವಂತ್, ಆಹಾರ ತರಬೇಕೆಂದು ನಮ್ಮ ಬಂಕರ್‍ನಿಂದ ಕೇವಲ 50 ಮೀಟರ್ ದೂರವಿರುವ ಮಳಿಗೆಗೆ ಬೆಳಗ್ಗೆ 7.30ಕ್ಕೆ ನಾವಿಬ್ಬರೂ ಹೋಗಿದ್ದೆವು. ಚಳಿ ಹೆಚ್ಚಾಗಿದ್ದರಿಂದ ಜರ್ಕಿನ್ ತರಲು ನಾನು ವಾಪಸ್ ಬಂದೆ. ಅಷ್ಟರಲ್ಲಿ ಬಾಂಬ್ ಶಬ್ದ ಕೇಳಿಸಿತು. ಸ್ವಲ್ಪ ಸಮಯವಾದ ನಂತರ ನವೀನ್‍ನ ಮೊಬೈಲ್‍ಗೆ ಕರೆ ಮಾಡಿದಾಗ ಬೇರೆ ಯಾರೋ ಸ್ವೀಕರಿಸಿದರು. ನನಗೆ ಅವರ ಭಾಷೆ ಅರ್ಥವಾಗದ ಕಾರಣ ನಮ್ಮ ಜೊತೆ ಇದ್ದ ವಿದ್ಯಾರ್ಥಿನಿಗೆ ಮಾತನಾಡುವಂತೆ ತಿಳಿಸಿದರು. ನಂತರ ಮಾತನಾಡಿದ ವಿದ್ಯಾರ್ಥಿನಿ ಅಳುತ್ತಾ ನವೀನ್ ಮೃತಪಟ್ಟಿದ್ದಾನೆ ಎಂದು ಹೇಳಿದರು. ಭಯಭೀತರಾಗಿದ್ದ ನಾವು, ಸ್ವಲ್ಪ ಸಮಯದ ನಂತರ ಧೈರ್ಯ ಮಾಡಿ ಆ ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ನವೀನ್‍ನ ಮೃತದೇಹ ಕಾಣಿಸಲಿಲ್ಲ. ನಮ್ಮಿಂದ ಆತನ ಮೃತದೇಹವನ್ನೂ ಕೂಡ ನೋಡಲಾಗಿಲ್ಲ ಎಂದು ದುಃಖಿಸಿದರು.

ನಮ್ಮ ಸಹಪಾಠಿಗಳಲ್ಲಿ ಜೂನಿಯರ್‍ಗಳನ್ನು ಮೊದಲು ಕಳುಹಿಸಿ ಆನಂತರ ನಾವು ಸೀನಿಯರ್‍ಗಳು ಹೋಗೋಣ. ನಾವೇ ಮೊದಲು ಹೋಗಿಬಿಟ್ಟರೆ ಜೂನಿಯರ್‍ಗಳಿಗೆ ತೊಂದರೆಯಾಗುತ್ತದೆ ಎಂದು ಈ ಹಿಂದೆ ಜೂನಿಯರ್‍ಗಳನ್ನು ಕಳುಹಿಸಿದ್ದೆವು. ಇಂದು ನಾವೆಲ್ಲಾ ಕಾಲ್ನಡಿಗೆಯಲ್ಲಿ ರೈಲ್ವೆ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ರುಮೇನಿಯಾ ಗಡಿಗೆ ಹೋಗೋಣ ಎಂದು ಯೋಜನೆ ರೂಪಿಸಿದ್ದೆವು. ಆದರೆ ದುರಂತ ನಡೆದು ಹೋಯಿತು. ನಮಗೆ ರಷ್ಯಾ ಗಡಿ ಕೇವಲ 40 ರಿಂದ 50 ಕಿ.ಮೀ. ಆಗುತ್ತದೆ. ರುಮೇನಿಯಾ ಗಡಿಗೆ ಹೋಗಬೇಕಾದರೆ 15 ರಿಂದ 18 ಗಂಟೆ ಕಾಲ ಪ್ರಯಾಣ ಮಾಡಬೇಕಾಗುತ್ತದೆ. ಭಾರತ ಸರ್ಕಾರ ರಷ್ಯಾ ಜೊತೆ ಮಾತನಾಡಿ, ಕೀವ್ ಮತ್ತು ಖಾರ್ಕಿವ್‍ನಲ್ಲಿರುವ ವಿದ್ಯಾರ್ಥಿಗಳನ್ನು ರಷ್ಯಾ ಗಡಿ ಮೂಲಕ ರಕ್ಷಿಸಲು ಕ್ರಮ ಕೈಗೊಂಡರೆ ಒಳ್ಳೆಯದು ಎಂದು ಹೇಳಿದರು. ಮಂಗಳವಾರ ಶೆಲ್ ದಾಳಿಯಿಂದ ಮೃತಪಟ್ಟ ನವೀನ್ ಗ್ಯಾನಗೌಡರ್ ಮೃತದೇಹವನ್ನು ಸ್ವಗ್ರಾಮಕ್ಕೆ ತರುವ ಬಗ್ಗೆ ರಾಜ್ಯ ಸರ್ಕಾರ ವಿದೇಶಾಂಗ ಇಲಾಖೆಯಿಂದ ಮಾತುಕತೆ ನಡೆಸುತ್ತಿದೆ. ಭೀಕರ ಯುದ್ಧ ನಡೆಯುತ್ತಿರುವ ಖಾರ್ಕಿವ್‍ನಲ್ಲಿರುವ ನವೀನ್ ಅವರ ಮೃತದೇಹವನ್ನು ಈವರೆಗೂ ಉಕ್ರೇನ್ ರಾಜಧಾನಿ ಕೀವ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳೂ ಕೂಡ ದರ್ಶನ ಮಾಡಲಾಗಲಿಲ್ಲ. ಈ ಪರಿಸ್ಥಿತಿಯಲ್ಲಿ ನವೀನ್ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಎಷ್ಟು ದಿನ ಬೇಕಾಗುತ್ತದೆ ಎಂಬುದನ್ನು ಹೇಳಲು ಅಸಾಧ್ಯ ಎಂದು ಮೂಲಗಳು ತಿಳಿಸಿವೆ. ಇಂದು ರಷ್ಯಾ ಶೆಲ್ ದಾಳಿಯಿಂದ ಆಘಾತಕ್ಕೀಡಾಗಿ ಪಂಜಾಬ್‍ನ ಬರ್ನಾಲ್ ಗ್ರಾಮದ ವಿದ್ಯಾರ್ಥಿ ಚಂದನ್ ಜಿಂದಾಲ್ ಬ್ರೈನ್ ಸ್ಟೋಕ್‍ಗೆ ಒಳಗಾದರು. ಅವರನ್ನು ಆಸ್ಪತ್ರೆಗೆ ಸೇರಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಅಧಿಕೃತವಾಗಿ ತಿಳಿಸಿವೆ.

Translate »