ತಿಂಗಳೊಳಗೆ ನಗರಪಾಲಿಕೆ ವ್ಯಾಪ್ತಿಗೆ ಮುಡಾ ಬಡಾವಣೆಗಳ ಹಸ್ತಾಂತರ
ಮೈಸೂರು

ತಿಂಗಳೊಳಗೆ ನಗರಪಾಲಿಕೆ ವ್ಯಾಪ್ತಿಗೆ ಮುಡಾ ಬಡಾವಣೆಗಳ ಹಸ್ತಾಂತರ

March 3, 2022

ಮೈಸೂರು, ಮಾ.2(ಆರ್‍ಕೆಬಿ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅನುಮೋದಿಸಿರುವ ಬಡಾವಣೆ ಗಳ ನಿರ್ವಹಣೆ ಹೊಣೆಯನ್ನು ತಿಂಗಳಲ್ಲಿ ನಗರಪಾಲಿಕೆಗೆ ಹಸ್ತಾಂತರಿಸುವುದಾಗಿ ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ತಿಳಿಸಿದರು.

ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗ ಣದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮಾಹಿತಿ ನೀಡಿದರು. ಮುಡಾ ಬಡಾವಣೆಗಳಲ್ಲಿ ಬೀದಿ ದೀಪಗಳ ಬಿಲ್ ಕಟ್ಟದೆ ತೊಂದರೆಯಾಗಿದ್ದು, ಶೇ.100ರಷ್ಟು ಸೈಟ್ ಬಿಡುಗಡೆಯಾಗಿರುವ ಬಡಾವಣೆ ಗಳಲ್ಲೂ ಸಮಸ್ಯೆ ಉಂಟಾಗಿರುವ ಬಗ್ಗೆ ಶಾಸಕ ರಾದ ಜಿ.ಟಿ.ದೇವೇಗೌಡ ಮತ್ತು ಸಾ.ರಾ. ಮಹೇಶ್ ಬೇಸರ ವ್ಯಕ್ತಪಡಿಸಿದಾಗ ಮುಡಾ ಆಯುಕ್ತರು ಇದಕ್ಕೆ ಉತ್ತರಿಸಿ, ಮುಡಾ ಅನುಮೋದಿತ ಬಡಾವಣೆ ಗಳನ್ನು ಒಂದು ತಿಂಗಳಲ್ಲಿ ನಗರಪಾಲಿಕೆಗೆ ಹಸ್ತಾಂರಿಸುವ ವಿಶ್ವಾಸ ವ್ಯಕ್ತಪಡಿಸಿದರು. ಗುರುತಿಸಲಾಗಿರುವ 120 ಬಡಾವಣೆಗಳನ್ನು ತಿಂಗಳೊಳಗೆ ನಗರಪಾಲಿಕೆಗೆ ಹಸ್ತಾಂತರಿಸ ಲಾಗುವುದು. ಅದಕ್ಕೆ ಸಂಬಂಧಿಸಿದ ಅಗತ್ಯ ಪ್ರಕ್ರಿಯೆ ಆರಂಭವಾಗಿದೆ ಎಂದು ಅವರು ಸ್ಪಷ್ಪಪಡಿಸಿದರು. ಲಿಂಗಾಂಬುದಿ ಕೆರೆಯ ತೂಬು ಮುಚ್ಚಿರುವುದರಿಂದ ಭಾರೀ ಮಳೆ ಬಂದಾಗ ಕೆರೆಯ ನೀರು ಕೋಡಿ ಬಿದ್ದು ತಗ್ಗು ಪ್ರದೇಶಗಳಿಗೆ ನುಗ್ಗಿ ತೊಂದರೆಯಾಗಿದೆ. ನನ್ನ ತೋಟದಲ್ಲಿಯೂ 300ಕ್ಕೂ ಹೆಚ್ಚು ಮರಗಳು, ಗಂಧದ ಮರಗಳು ನಾಶವಾಗಿವೆ ಎಂದ ಶಾಸಕ ಸಾ.ರಾ.ಮಹೇಶ್, ಇದಕ್ಕೆ ತೂಬು ಮುಚ್ಚಲು ಅನುಮತಿ ನೀಡಿದವರು ಯಾರು ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಿಸಿಎಫ್ ಕಮಲಾ ಕರಿಕಾಳನ್ ಅವರು, ಯಾವುದೇ ರೀತಿಯ ಕಾಮಗಾರಿ ಕೈಗೊಳ್ಳಲು ಅರಣ್ಯ ಕಾಯ್ದೆ 1980ರ ಪ್ರಕಾರ ಅವಕಾಶವಿಲ್ಲ. ಕೆರೆಯಲ್ಲಿ ನೀರು ಇರುವ ಜೊತೆಗೆ ಪಕ್ಷಿಗಳಿಗೆ ಅನುಕೂಲ ಮಾಡಿಕೊಡಬೇಕು. ಕೆರೆಯ ವ್ಯಾಪ್ತಿಯಲ್ಲಿ ಯಾವ ಚಟುವಟಿಕೆಗಳು ನಡೆಯುವುದಿಲ್ಲ. ಬೇಕಾದರೆ ಹೊರಗೆ ಏನೇ ಕಾಮಗಾರಿಗಳನ್ನು ನಡೆಸಲು ಮುಡಾ, ನಗರಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಲಾಗಿದೆ ಎಂದರು. ಈ ಉತ್ತರದಿಂದ ಸಿಟ್ಟಿಗೆದ್ದ ಶಾಸಕ ಸಾ.ರಾ.ಮಹೇಶ್, ತೂಬು ಮುಚ್ಚಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ? ನೀರು ಕೋಡಿ ಬಿದ್ದರೆ ಅಗುವ ನಷ್ಟವನ್ನು ತುಂಬಿಕೊಡುವವರು ಯಾರು? ಅರಣ್ಯ ಇಲಾಖೆ ಕಾಯಿದೆಯೇನು ಆಕಾಶದಿಂದ ಉದುರಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸಿಟ್ಟು ಪ್ರದರ್ಶಿಸಿದರು.

ಕೋವಿಡ್‍ನಿಂದ ಮೃತಪಟ್ಟವರಿಗೆ ಪರಿಹಾರ ತಲುಪಿಸಿ: ಕೋವಿಡ್‍ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ದೂರುಗಳಿವೆ. ಕೋವಿಡ್ ಮೊದಲ, 2ನೇ ಅಲೆಯಲ್ಲಿ ಮೃತಪಟ್ಟವರ ಕುಟುಂಬ ಗಳಿಗೆ 15 ದಿನದೊಳಗೆ ಪರಿಹಾರದ ಹಣವನ್ನು ಪ್ರಾಮಾಣಿಕವಾಗಿ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಜಿಲ್ಲೆಯ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

Translate »