ಮೈಸೂರು, ಆ.18(ಎಂಟಿವೈ)- ರಾಜ್ಯದಲ್ಲಿ ಅತಿವೃಷ್ಟಿ, ಕೊರೊನಾ ಹಾವಳಿಯಿಂದ ರೈತಾಪಿ ವರ್ಗ ತತ್ತರಿಸಿದೆ. ಸರ್ಕಾರ ರೈತರ ಹಿತಕಾಯುವಲ್ಲಿ ವಿಫಲವಾಗಿದೆ. ಭರವಸೆ ಈಡೇರಿಸಿಲ್ಲ. ಹಾಗಾಗಿ, ಆ.21ರಂದು ಕೆಆರ್‍ಎಸ್, ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ವಿವಿಧ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳ ವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಸ್ವರಾಜ್ ಇಂಡಿಯಾ ಪಕ್ಷ, ಜನಾಂದೋಲನ ಮಹಾಮೈತ್ರಿ ಜತೆಗೂಡಿ ಸುದ್ದಿಗೋಷ್ಠಿ ನಡೆಸಿದವು. ಅತಿವೃಷ್ಟಿಯಿಂದಾಗಿ 3 ವರ್ಷದಿಂದ ರೈತರು, ಜನತೆ ಕಷ್ಟಕ್ಕೀಡಾಗಿದ್ದಾರೆ. ಈಗ ಕೊರೊನಾ ಹಾವಳಿಯೂ ಜೋರಾಗಿದೆ. ಕಳೆದ ವರ್ಷ ಪ್ರವಾಹದಲ್ಲಿ ಮನೆ-ಆಸ್ತಿ ಎಲ್ಲವನ್ನೂ ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರ ಇನ್ನೂ ಪರಿಹಾರ ಒದಗಿಸಿಲ್ಲ. ಈ ವರ್ಷ ಮತ್ತೊಂದು ಹೊಡೆತ ಬಿದ್ದಿದೆ. ಇಂಥ ಸ್ಥಿತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಾಗಿನ ಅರ್ಪಿಸು ವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಕಷ್ಟದಲ್ಲಿರುವ ಜನರಿಗೆ ನೆರವಾಗದೇ ಜಲಾಶಯಗಳಿಗೆ ಬಾಗಿನ ಅರ್ಪಣೆ ಮಾಡುವುದು ಸೂತಕದ ಮನೆಯಲ್ಲಿ ಹಬ್ಬ ಮಾಡಿದಂತೆ. ಮುಖ್ಯಮಂತ್ರಿಗಳು ಸೂಕ್ಷ್ಮ ಪ್ರಜ್ಞೆ ಇದ್ದರೆ ಕಾರ್ಯಕ್ರಮ ರದ್ದುಪಡಿಸಿ, ಮೊದಲು ಜನರ ಸಮಸ್ಯೆಗೆ ಸ್ಪಂದಿಸಲಿ ಎಂದು ಆಗ್ರಹಿಸಿದರು.
ಆ.21ರಂದು ಕೆಆರ್‍ಎಸ್‍ನಲ್ಲಿ ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶನ ವೇಳೆ ರೈತ ಸಂಘ, ದಸಂಸ ಪ್ರಗತಿಪರ ಸಂಘಟನೆಗಳು, ಸ್ವರಾಜ್ ಇಂಡಿಯಾ ಪಕ್ಷ, ಜನಾಂದೋಲನ ಮಹಾಮೈತ್ರಿಯ ರಾಜ್ಯಮಟ್ಟದ ನಾಯಕರು ಪಾಲ್ಗೊಳ್ಳಲಿದ್ದಾರೆ. ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವಾಗಲೂ ಕಪ್ಪು ಬಾವುಟ ಪ್ರದರ್ಶಿ ಸಲಾಗುವುದು ಎಂದರು. ದಲಿತ ಸಂಘರ್ಷ ಸಮಿತಿ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿದರು. ಸುದ್ದಿ ಗೋಷ್ಠಿಯಲ್ಲಿ ಸ್ವರಾಜ್ ಇಂಡಿಯಾದ ಉಗ್ರನರಸಿಂಹೇ ಗೌಡ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ, ದಲಿತ ಸಂಘರ್ಷ ಸಮಿತಿ ಸಂಚಾಲಕ ಆಲಗೂಡು ಶಿವಕುಮಾರ್, ಎನ್.ಪುನೀತ್ ಇದ್ದರು.