ಮೈಸೂರು,ಆ.18(ವೈಡಿಎಸ್)-`ಕೊರೊನಾದಿಂದ ಕೆಲಸ ಹೋಯ್ತು. ಆದರೆ, ಸಂಬಂಧಿಕರೊಂದಿಗೆ ಹೇಗೆ ಇರಬೇಕೆಂಬ ದೊಡ್ಡ ಪಾಠ ಕಲಿಸಿದೆ’…
`ನಾನು ಮನೆ-ಮನೆಗೆ ಗ್ಯಾಸ್ ಸಿಲಿಂಡರ್ ವಿತರಿಸುವ ಕೆಲಸ ಮಾಡಿ ಕೊಂಡಿದ್ದೆ. ನನಗೆ ಕೊರೊನಾ ಬಂದಿದ್ರಿಂದ ಇದ್ದ ಕೆಲಸವೂ ಹೋಯ್ತು. ಜೀವನ ನಡೆಸೋಕೆ ತುಂಬಾ ಕಷ್ಟ ಆಗ್ತೈತೆ. ನಾವು ಆರ್ಥಿಕವಾಗಿ ಚೆನ್ನಾ ಗಿದ್ರೆ ಸಂಬಂಧಿಕರು ನಮ್ಮೊಂದಿಗಿ ರ್ತಾರೆ. ಕಷ್ಟಕಾಲದಲ್ಲಿ ಯಾರೂ ಬರಲ್ಲ’ ಎಂದು ರಾಮನಹಳ್ಳಿಯ ಕೊರೊನಾ ಗುಣಮುಖರಾದ ವ್ಯಕ್ತಿ (ರೋಗಿ ಸಂಖ್ಯೆ ಎಂವೈಎಸ್ 2534) ನೋವು ತೋಡಿಕೊಂಡರು.
ಕೊರೊನಾ ಲಕ್ಷಣ ಇರ್ಲಿಲ್ಲ. ಆದರೆ, ಜು.18ರಂದು ಸ್ವಲ್ಪ ಮೈಕೈ ನೋವಿತ್ತು. ಆರೋಗ್ಯವಾಗಿದ್ದೆ. ಆದರೆ ಪತ್ನಿ, ಜು.20ರಂದು ರಾಜೀವ್ ನಗರದಲ್ಲಿ ಕೊರೊನಾ ಪರೀಕ್ಷಾ ಶಿಬಿರ ವಿದ್ದು, ಅಲ್ಲಿ ಪರೀಕ್ಷಿಸಿ ಎಂದು ಸಲಹೆ ನೀಡಿದಳು. ಆ ಶಿಬಿರಕ್ಕೆ ಹೋಗಿ ಪರೀಕ್ಷೆ ಮಾಡಿಸಿದೆ. ಪಾಸಿ ಟಿವ್ ಬಂತು. ನಂತರ ಮನೆಯಿಂದ ಸ್ವಲ್ಪದೂರ ನಡ್ಕೊಂಡು ಹೋಗಿ ಆಂಬುಲೆನ್ಸ್ ಹತ್ತಿದೆ. ಕರ್ಕೊಂಡೋಗಿ ಹೊಸಕೋಟೆಯ ಕೋವಿಡ್ ಕೇಂದ್ರಕ್ಕೆ ಬಿಟ್ಟರು. ಆದ್ರೆ, ನಮ್ಮ ಮನೆಯನ್ನು ಸೀಲ್ಡೌನ್ ಮಾಡಿ ಪೋಷಕರನ್ನು ಕ್ವಾರಂಟೈನ್ ಮಾಡಿದ್ರು. ಪೋಷಕರು ಹೇಗಿದ್ದಾರೋ ಎಂದು ಭಯವಾಗ್ತಿತ್ತು. ಕೋವಿಡ್ ಕೇಂದ್ರದಲ್ಲಿ 10 ದಿನ ಪೂರೈಸಿದೆ. ಜು.29ರಂದು ಡಿಸ್ಚಾರ್ಜ್ ಮಾಡಿ ಮನೆಗೆ ಕಳಿಸಿದ್ರು. ಮನೆಯಲ್ಲಿ 14 ದಿನ ಕ್ವಾರಂಟೈನ್‍ನಲ್ಲಿದ್ದೆ. ಆ.15ಕ್ಕೆ ಆ ಅವಧಿಯೂ ಮುಕ್ತಾಯವಾಯ್ತು. ಮೂರು ದಿನದಿಂದ ಹೊರಗಡೆ ಓಡಾಡುತ್ತಿದ್ದೇನೆ.
ಸ್ನೇಹಿತರೇ ದಿನಸಿ ನೀಡಿದರು: ನನಗೆ ಪಾಸಿಟಿವ್ ಬಂದಿದ್ದು, ಮನೆ ಸೀಲ್‍ಡೌನ್ ಮಾಡಿದ್ದರೂ ಸಂಬಂಧಿಕರ್ಯಾರು ದಿನಸಿ ಪದಾರ್ಥಗಳನ್ನು ತಂದುಕೊಡ್ಲಿಲ್ಲ. ಆದರೆ, ಸ್ನೇಹಿತರು ಪ್ರತಿದಿನ ದಿನಸಿ, ಹಾಲು, ತರಕಾರಿ ತಂದುಕೊಡ್ತಿದ್ರು. ಕಷ್ಟಕಾಲಕ್ಕೆ ಆಗೋರು ಸ್ನೇಹಿತರೇ ಹೊರತು ಸಂಬಂಧಿಕರಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜೀವನವೇ ಹಾಳಾಯ್ತು: ಕೊರೊನಾದಿಂದಾಗಿ 24 ದಿನ ಕೆಲಸಕ್ಕೆ ಹೋಗದಿದ್ದರಿಂದ ಇದ್ದ ಕೆಲಸವೂ ಹೋಯ್ತು. ಇದರಿಂದ ಜೀವನವೇ ಹಾಳಾಯ್ತು. ಖರ್ಚಿಗೂ ಹಣವಿಲ್ಲದೆ ಜೀವನ ನಡೆಸುವುದೇ ದುಸ್ತರ ವಾಗಿದೆ ಎಂದು ಅವರು ಕಣ್ಣೀರಾದರು.