ಇಂದಿನಿಂದ ಸ್ವಚ್ಛತೆಯಲ್ಲಿ ಪಾಲ್ಗೊಳ್ಳದೇ ಪ್ರತಿಭಟನೆ ತೀವ್ರಗೊಳಿಸಲು ನಿರ್ಧಾರ
ಮೈಸೂರು

ಇಂದಿನಿಂದ ಸ್ವಚ್ಛತೆಯಲ್ಲಿ ಪಾಲ್ಗೊಳ್ಳದೇ ಪ್ರತಿಭಟನೆ ತೀವ್ರಗೊಳಿಸಲು ನಿರ್ಧಾರ

October 9, 2020

ಮೈಸೂರು, ಅ.8 (ಆರ್‍ಕೆಬಿ)- ತಮಗೂ ವೇತನವನ್ನು ನೇರವಾಗಿ ಪಾವತಿ ಮಾಡು ವಂತೆ ಆಗ್ರಹಿಸಿ ಮೈಸೂರು ಮಹಾನಗರ ಪಾಲಿಕೆ ಗುತ್ತಿಗೆ ಪೌರಕಾರ್ಮಿಕರು ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪಾಲಿಕೆಯ ಖಾಯಂ ಮತ್ತು ಗುತ್ತಿಗೆ ಪೌರಕಾರ್ಮಿಕರ ಮಹಾಸಂಘದ ಆಶ್ರಯ ದಲ್ಲಿ ಪ್ರತಿಭಟನೆ ನಡೆಸಿದ ಗುತ್ತಿಗೆ ಪೌರ ಕಾರ್ಮಿಕರು, ಬೇಡಿಕೆ ಈಡೇರದೇ ಇದ್ದಲ್ಲಿ ಹೋರಾಟವನ್ನು ಶುಕ್ರವಾರದಿಂದ ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಬುಧವಾರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನೇರ ವೇತನ ಪಾವತಿ ವಿಚಾರ ಚರ್ಚೆಗೆ ಬಂದು ಅನುಮೋದನೆ ಸಿಗುತ್ತದೆ ಎಂಬ ನಿರೀಕ್ಷೆ ಯಲ್ಲಿದ್ದ ಗುತ್ತಿಗೆ ಪೌರಕಾರ್ಮಿಕರ ನಿರೀಕ್ಷೆ ಹುಸಿಯಾಯಿತು. ಆಯುಕ್ತರು ಸಭೆಯಲ್ಲಿ ಈ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳದೇ ಮುಂದೂಡಿದರು ಎಂಬ ವಿಚಾರ ತಿಳಿದ ಪ್ರತಿ ಭಟನಾಕಾರರು, ಪಾಲಿಕೆ ಅಧಿಕಾರಿಗಳು ಮತ್ತು ಸದಸ್ಯರ ವಿರುದ್ಧ ಕಿಡಿಕಾರಿದರು. ಶುಕ್ರವಾರದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳದೇ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವ ತೀರ್ಮಾನ ಕೈಗೊಂಡರು.

ಮಾಜಿ ಮೇಯರ್ ನಾರಾಯಣ್, ಉನ್ನತ ಸಮಿತಿ ಅಧ್ಯಕ್ಷ ಎನ್.ಮಾರ, ಪಾಲಿಕೆ ಖಾಯಂ ಹಾಗೂ ಗುತ್ತಿಗೆ ಪೌರಕಾರ್ಮಿ ಕರ ಮಹಾಸಂಘದ ಅಧ್ಯಕ್ಷ ಜಿ.ಮಹದೇವ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನೇತೃತ್ವ ದಲ್ಲಿ ನೂರಾರು ಗುತ್ತಿಗೆ ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ ಎನ್.ಮಾರ, ಪಾಲಿಕೆಯಲ್ಲಿ 1563 ಗುತ್ತಿಗೆ ಪೌರ ಕಾರ್ಮಿಕರಿದ್ದಾರೆ. ಕೌನ್ಸಿಲ್ ಅನು ಮೋದನೆ ಪಡೆದು ಎಲ್ಲಾ ಕಾರ್ಮಿಕರಿಗೂ ವೇತನವನ್ನು ನೇರ ಪಾವತಿ ಮಾಡುವಂತೆ ಜಿಲ್ಲಾಧಿಕಾರಿ ಗಳು ಆದೇಶಿಸಿದ್ದರೂ, ಪಾಲಿಕೆ ಅಧಿಕಾರಿಗಳು ಈ ವಿಷಯದಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆದು ನೇರವಾಗಿ ವೇತನ ಪಾವತಿ ಮಾಡು ವಂತೆ ಒತ್ತಾಯಿಸಿದರು. ಇಲ್ಲವಾದರೆ ಎಲ್ಲಾ ಪೌರಕಾರ್ಮಿಕರು, ಒಳಚರಂಡಿ ಸಹಾಯಕ ಕಾರ್ಮಿಕರು, ಮನೆ ಮನೆ ಕಸ ಸಂಗ್ರಹಣೆ ಮಾಡುವ ಸ್ವಚ್ಛತಾ ಆಟೋ ಟಿಪ್ಪರ್ ವಾಹನ ಚಾಲಕರು ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಸಭೆಯಲ್ಲಿ ಈ ಕುರಿತ ಅನು ಮೋದನೆ ಆಗದ ಹಿನ್ನೆಲೆಯಲ್ಲಿ ಗುತ್ತಿಗೆ ಪೌರಕಾರ್ಮಿಕರು ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ತಿಳಿಸಿದರು. ಸಂಘದ ಅಧ್ಯಕ್ಷ ಆರ್.ಶಿವಣ್ಣ, ಮಾಜಿ ಅಧ್ಯಕ್ಷ ಆರ್ಮುಗಂ, ಜಿಲ್ಲಾಧ್ಯಕ್ಷ ಪಳನಿಸ್ವಾಮಿ, ಮುಖಂಡರಾದ ಆರ್.ಆರ್. ರಮೇಶ್, ಅರುಣ್‍ಕುಮಾರ್, ಸ್ವಾಮಿ, ಎಂ.ರಾಜೀವ್ ದೊರೆ, ಚಲುವರಾಜ, ಶಂಕರ್, ಗಣಪತಿ, ಕಮಲ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

 

 

Translate »