ಮೈಸೂರು ನಗರ ಪಾಲಿಕೆ 724 ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಸಂಬಂಧ ಕೌನ್ಸಿಲ್‍ನಲ್ಲಿ ಸುದೀರ್ಘ ಚರ್ಚೆ
ಮೈಸೂರು

ಮೈಸೂರು ನಗರ ಪಾಲಿಕೆ 724 ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಸಂಬಂಧ ಕೌನ್ಸಿಲ್‍ನಲ್ಲಿ ಸುದೀರ್ಘ ಚರ್ಚೆ

October 9, 2020

ಮೈಸೂರು,ಅ.8(ಎಸ್‍ಬಿಡಿ)-ಮೈಸೂರು ನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 724 ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಸಂಬಂಧ ಕೌನ್ಸಿಲ್‍ನಲ್ಲಿ ಸುದೀರ್ಘ ಚರ್ಚೆ ನಡೆಯಿತಾದರೂ ಅಂತಿಮ ನಿರ್ಧಾರಕ್ಕೆ ಬರಲಾಗಲಿಲ್ಲ.

ನೇರ ನೇಮಕಾತಿ ಹಾಗೂ ನೇರ ವೇತನ ಪಾವತಿ ಪೌರಕಾರ್ಮಿಕರ ಹೊರತು ಪಡಿಸಿ, ಉಳಿದಂತೆ 724 ಹೆಚ್ಚುವರಿ ಪೌರಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಪೌರಕಾರ್ಮಿಕರ ಹಿತದೃಷ್ಟಿಯಿಂದ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ, ಪಾಲಿಕೆ ಯಿಂದಲೇ ನೇರವಾಗಿ ಅವರಿಗೆ ವೇತನ ಪಾವತಿಸುವಂತೆ ಸರ್ಕಾರ ಆದೇಶಿಸಿದೆ. ಇದನ್ನು ಜಿಲ್ಲಾಧಿಕಾರಿಗಳೂ ಅನು ಮೋದಿಸಿರುವ ಹಿನ್ನೆಲೆಯಲ್ಲಿ ಗುರುವಾರ ನಡೆದ ಕೌನ್ಸಿಲ್ ನಲ್ಲಿ ಈ ವಿಷಯ ಮಂಡಿಸಲಾಯಿತು. ಮಧ್ಯಾಹ್ನ 12ರಿಂದ ಸಂಜೆವರೆಗೂ ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಿತಾದರೂ ಕೆಲ ಗೊಂದಲಗಳಿಂದಾಗಿ ಕಾರ್ಯಸೂಚಿಯನ್ನು ಮೇಯರ್ ತಸ್ನೀಂ ಮುಂದೂಡಿದರು.

ಸಿದ್ಧತೆ ಮಾಡಿಕೊಂಡಿಲ್ಲ: ಪೌರಕಾರ್ಮಿಕರಿಗೆ ವೇತನವನ್ನು ನೇರವಾಗಿ ಪಾವತಿ ಸುವ ಕ್ರಮಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಗುತ್ತಿಗೆ ಪದ್ಧತಿ ರದ್ದಾದ ಕ್ಷಣದಿಂದ ಸ್ವಚ್ಛತೆ ನಿರ್ವಹಣೆಗೆ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳುವಲ್ಲಿ ಅಧಿಕಾರಿಗಳು ವಿಫಲ ರಾಗಿದ್ದಾರೆ. ಗುತ್ತಿಗೆ ರದ್ದಾದರೆ ಗುತ್ತಿಗೆದಾರ ತಾನು ಒದಗಿಸಿದ್ದ ವಾಹನಗಳನ್ನು ವಾಪಸ್ಸು ಪಡೆದುಕೊಳ್ಳುತ್ತಾನೆ. ಇಂತಹ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಯೋಚಿ ಸಿಯೇ ಇಲ್ಲ. ಪೌರಕಾರ್ಮಿಕರ ಕಣ್ಣೊರೆಸಲು ಈ ವಿಷಯವನ್ನು ಕೌನ್ಸಿಲ್‍ಗೆ ತಂದಿದ್ದಾರೆ. ಯುಜಿಡಿ ಕಾರ್ಮಿಕರು, ವಾಹನ ಚಾಲಕರು, ಗ್ಯಾಂಗ್‍ಮನ್‍ಗಳೂ ನೇರ ಪಾವತಿಗೆ ಒತ್ತಾಯಿಸಬಹುದು. ಹಾಗಾದರೆ ಯಾವ ರೀತಿಯ ಕ್ರಮ ವಹಿಸ ಬೇಕು ಎಂಬುದಕ್ಕೆ ಅಧಿಕಾರಿಗಳಲ್ಲಿ ಉತ್ತರವಿಲ್ಲ ಎಂದು ಮಾಜಿ ಮೇಯರ್‍ಗಳಾದ ಆರಿಫ್ ಹುಸೇನ್, ಅಯೂಬ್‍ಖಾನ್, ವಿಪಕ್ಷ(ಬಿಜೆಪಿ)  ನಾಯಕ ಎಂ.ಯು.ಸುಬ್ಬಯ್ಯ, ಎಂ.ಸಿ.ರಮೇಶ್, ಕೆ.ವಿ.ಶ್ರೀಧರ್ ಸೇರಿದಂತೆ ಅನೇಕ ಸದಸ್ಯರು ಬೇಸರ ವ್ಯಕ್ತಪಡಿಸಿದರು. ಕಾರ್ಪೊರೇಟರ್ ಬಿ.ವಿ.ಮಂಜುನಾಥ್ ಮಾತನಾಡಿ, ಈವರೆಗೂ ಯಾವುದೇ ಪ್ರಕ್ರಿಯೆಗೂ 2011ರ ಜನಗಣತಿ ಅಂಕಿಅಂಶ(9.35 ಲಕ್ಷ)ವನ್ನೇ ಪರಿಗಣಿಸಲಾಗುತ್ತಿದೆ. ಆದರೆ 2018ರಲ್ಲಿ ಇರಬಹುದಾದ ಜನಸಂಖ್ಯೆ(10.29 ಲಕ್ಷ)ಗೆ ಅನುಗುಣವಾಗಿ ಅಗತ್ಯ ಪೌರಕಾರ್ಮಿಕರ ಸಂಖ್ಯೆಯನ್ನು ನಿರ್ಧರಿಸಿ, ಕೌನ್ಸಿಲ್‍ಗೆ ವಿಷಯ ಮಂಡಿಸಲಾಗಿದೆ. ವಾಣಿವಿಲಾಸ ವಾಟರ್ ವಕ್ರ್ಸ್‍ಗೆ ಸಂಬಂಧಿಸಿದ ಮತ್ತೊಂದು ಕಾರ್ಯ ಸೂಚಿಯಲ್ಲಿ 2020ರಲ್ಲಿ ಇರಬಹುದಾದ ಜನಸಂಖ್ಯೆ(15 ಲಕ್ಷ)ಯನ್ನು ಸೂಚಿಸಲಾಗಿದೆ. ಈ ರೀತಿಯ ಗೊಂದಲಗಳು ಸಾಕಷ್ಟಿವೆ. ಎಲ್ಲಾ ಅಂಶಗಳನ್ನೂ ಸ್ಪಷ್ಟಪಡಿಸಿಕೊಂಡು ತೀರ್ಮಾನಿಸಬೇಕಿದೆ ಎಂದು ತಿಳಿಸಿದರು. ಅಲ್ಲದೆ ಪಾಲಿಕೆ ಆಯುಕ್ತರು, ಮುಖ್ಯಮಂತ್ರಿಗಳ ವಿಡಿಯೋ ಸಂವಾದದಲ್ಲಿ ಪಾಲ್ಗೊಳ್ಳಲು ಹೋಗಿದ್ದಾರೆ. ಇದು ಅತ್ಯಂತ ಮಹತ್ವದ ವಿಚಾರ ವಾಗಿರುವುದರಿಂದ ಅವರ ಉಪಸ್ಥಿತಿಯಲ್ಲೇ ನಿರ್ಣಯ ಕೈಗೊಳ್ಳಬೇಕಿದೆ. ಪೌರಕಾರ್ಮಿಕರಿಗೆ ವೇತನ ನೇರ ಪಾವತಿಗೆ ಎಲ್ಲರ ಸಮ್ಮತಿಯೂ ಇದೆ. ಆದರೆ ಮುಂದಿನ ದಿನಗಳಲ್ಲಿ ಪೌರಕಾರ್ಮಿಕರು ಹಾಗೂ ಪಾಲಿಕೆಗೆ ಯಾವುದೇ ಸಮಸ್ಯೆ ಎದುರಾಗದಂತೆ ಎಲ್ಲಾ ರೀತಿಯ ಸಾಧಕ-ಬಾಧಕಗಳ ಬಗ್ಗೆ ಪರಾಮರ್ಶಿಸಿ, ಅಂತಿಮ ತೀರ್ಮಾನಕ್ಕೆ ಬರಬೇ ಕೆಂದು ಅನೇಕ ಸದಸ್ಯರು ಅಭಿಪ್ರಾಯಿಸಿದರು. ಕಡೆಗೆ ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಆಯುಕ್ತರ ಉಪಸ್ಥಿತಿಯಲ್ಲಿ ನಿರ್ಣಯ ಕೈಗೊಳ್ಳಬೇಕಿರುವ ಕಾರಣ ಸದ್ಯಕ್ಕೆ ವಿಷಯ ಮುಂದೂಡಲಾಗಿದೆ ಎಂದು ಮೇಯರ್ ತಸ್ನೀಂ ತಿಳಿಸಿದರು.

 

 

 

 

 

Translate »