ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ
ಮೈಸೂರು, ಅ.8-ಮೈಸೂರು ಜಿಲ್ಲೆಯ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲೂ ಶೇ.50ರಷ್ಟು ಹಾಸಿಗೆಗಳನ್ನು ಕೊರೊನಾ ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಸರ್ಕಾರದ ಪರವಾಗಿ ಕಾಯ್ದಿರಿಸಬೇಕು ಎಂದು ಆದೇಶಿಸಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಈ ಆದೇಶ ಪಾಲಿಸದಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005ರ ಸೆಕ್ಷನ್ 56 ಹಾಗೂ ಇನ್ನಿತರ ಕಾಯ್ದೆಗಳಡಿ ಕಾನೂನು ಕ್ರಮ ಜರುಗಿಸ ಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಮೈಸೂರು ನಗರ ಮತ್ತು ಜಿಲ್ಲಾದ್ಯಂತ ಪ್ರತೀ ದಿನ ಕೋವಿಡ್ ಹರಡುವಿಕೆ ತೀವ್ರವಾಗಿ ಹೆಚ್ಚುತ್ತಿದ್ದು, ಸಾವು ಪ್ರಕರಣಗಳೂ ಹೆಚ್ಚಾಗುತ್ತಿರುವ ಕಾರಣ ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಹೆಚ್ಚಾಗಿ ಬೆಡ್‍ಗಳ ಅವಶ್ಯಕತೆ ಇರುವುದರಿಂದ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡುವುದರ ಜೊತೆಗೆ ಇದಕ್ಕೆ ಅಗತ್ಯ ವಿರುವ ಮಾನವ ಸಂಪನ್ಮೂಲ ಇತ್ಯಾದಿಗಳನ್ನು ಒದಗಿಸತಕ್ಕದ್ದು ಎಂದು ತಿಳಿಸಿದ್ದಾರೆ.