ಗಿನ್ನಿಸ್ ದಾಖಲೆ ಅಂತರದ ಗೆಲುವಿನ ಸರದಾರ ಕೇಂದ್ರ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಇನ್ನಿಲ್ಲ
ಮೈಸೂರು

ಗಿನ್ನಿಸ್ ದಾಖಲೆ ಅಂತರದ ಗೆಲುವಿನ ಸರದಾರ ಕೇಂದ್ರ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಇನ್ನಿಲ್ಲ

October 9, 2020

ನವದೆಹಲಿ, ಅ.8-ಕೇಂದ್ರ ಸಚಿವ, ದಾಖಲೆಗಳ ಸರದಾರ ರಾಮ್ ವಿಲಾಸ್ ಪಾಸ್ವಾನ್ ಅವರು ದೆಹಲಿಯ ಫೋರ್ಟೀಸ್ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನ ರಾದರು. 74 ವರ್ಷ ವಯೋಮಾನದ ಅವರು, ಕೆಲ ದಿನಗಳ ಹಿಂದೆಯಷ್ಟೇ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಲೋಕ ಜನಶಕ್ತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಪಾಸ್ವಾನ್, ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿದೆ. 8 ಬಾರಿ ಸಂಸದರಾಗಿ, ಕಳೆದ 5 ದಶಕದಿಂದಲೂ ಸಕ್ರಿಯ ರಾಜಕಾರಣದಲ್ಲಿದ್ದು, 6 ಪ್ರಧಾನಿಗಳ ಸಂಪುಟದಲ್ಲಿ ಸಚಿವರಾಗಿದ್ದ ಇವರು, ಕಾಂಗ್ರೆಸ್ ನೇತೃತ್ವದ ಯುಪಿಎ ಹಾಗೂ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿ ಕೂಟದಲ್ಲೂ ಸಚಿವರಾಗಿ ದಾಖಲೆ ನಿರ್ಮಿಸಿದ್ದಾರೆ. 1946ರ ಜುಲೈ 5ರಂದು ಬಿಹಾರ್‍ನಲ್ಲಿ ಜನಿಸಿದ್ದ ಇವರು, 1977ರಲ್ಲಿ ಹಾಜೀಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಪಾಸ್ವಾನ್, 4.24 ಲಕ್ಷ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ, ಆ ಮೂಲಕ `ಅತ್ಯಧಿಕ ಮತಗಳ ಅಂತರದ ಗೆಲುವು’ ಎಂದು ಗಿನ್ನಿಸ್ ದಾಖಲೆ ನಿರ್ಮಿಸಿದ್ದರು. 1989ರಲ್ಲಿ ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದಾಗ ಮೊಟ್ಟ ಮೊದಲ ಬಾರಿಗೆ ಸಚಿವರಾದ ಅವರು, ನಂತರ ಹೆಚ್.ಡಿ. ದೇವೇಗೌಡ, ಐ.ಕೆ.ಗುಜ್ರಾಲ್, ಅಟಲ್ ಬಿಹಾರಿ ವಾಜಪೇಯಿ, ಡಾ.ಮನಮೋಹನ್ ಸಿಂಗ್ ಹಾಗೂ ನರೇಂದ್ರ ಮೋದಿಯವರ ಸಂಪುಟದಲ್ಲಿ ಸಚಿವರಾಗಿದ್ದರು. ಹೆಚ್.ಡಿ.ದೇವೇ ಗೌಡರು ಪ್ರಧಾನಿಯಾಗಿದ್ದಾಗ ರೈಲ್ವೆ ಸಚಿವರಾಗಿದ್ದ ಪಾಸ್ವಾನ್, ಚಾಮರಾಜನಗರ-ಮೆಟ್ಟುಪಾಳ್ಯಂ ರೈಲು ಮಾರ್ಗಕ್ಕೆ ಮಂಜೂರಾತಿ ನೀಡಿದ್ದರು.

ಮೋದಿ ಸಂತಾಪ: ರಾಮ್‍ವಿಲಾಸ್ ಪಾಸ್ವಾನ್ ಅವರ ನಿಧನಕ್ಕೆ ಸರಣಿ ಟ್ವೀಟ್‍ಗಳ ಮೂಲಕ ಪ್ರಧಾನಿ ಮೋದಿಯವರು ಸಂತಾಪ ಸೂಚಿಸಿದ್ದಾರೆ. ಪಾಸ್ವಾನ್ ನಿಧನದಿಂದ ಉಂಟಾಗಿರುವ ಶೂನ್ಯತೆಯನ್ನು ಎಂದಿಗೂ ತುಂಬಲಾಗುವುದಿಲ್ಲ. ಇದು ನನಗೆ ವೈಯಕ್ತಿಕ ವಾಗಿಯೇ ತುಂಬಾ ನಷ್ಟವನ್ನುಂಟು ಮಾಡಿದೆ. ನಾನು ಓರ್ವ ಸ್ನೇಹಿತ, ಮೌಲ್ಯಯುತ ಸಹೋದ್ಯೋಗಿ ಹಾಗೂ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ವ್ಯಕ್ತಿಯನ್ನು ಕಳೆದು ಕೊಂಡಿದ್ದೇನೆ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಯುವನಾಯಕರಾಗಿದ್ದ ಪಾಸ್ವಾನ್‍ಜೀ ಅದನ್ನು ತೀವ್ರವಾಗಿ ವಿರೋಧಿಸಿದ್ದರು. ಅತ್ಯುತ್ತಮ ಸಂಸದ, ಸಚಿವರಾಗಿದ್ದ ಅವರು, ಹಲವು ಕ್ಷೇತ್ರಗಳಿಗೆ ಕೊಡುಗೆ ನೀಡಿದ್ದಾರೆ. ಅವರೊಂದಿಗೆ ಕೆಲಸ ಮಾಡಿದ್ದು, ನನ್ನ ಪಾಲಿಗೆ ವಿಭಿನ್ನ ಅನುಭವ. ಸಂಪುಟ ಸಭೆಯಲ್ಲಿ ಅವರ ಪಾಲ್ಗೊಳ್ಳುವಿಕೆ, ವಿಷಯ ಮಂಡನೆ ಒಳನೋಟದಿಂದ ಕೂಡಿರುತ್ತಿತ್ತು. ನಿಜಕ್ಕೂ ಅವರು ಪ್ರತಿಭಾವಂತರಾಗಿದ್ದರು. ಅವರ ಕುಟುಂಬಕ್ಕೂ ನೋವು ಸಹಿಸುವ ಶಕ್ತಿ ಸಿಗಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಪಾಸ್ವಾನ್ ಅವರ ಮೈಸೂರು ಜಿಲ್ಲೆಯ ಸಂಪರ್ಕದ ಬಗ್ಗೆ ಸ್ಮರಿಸಿದ ಜಿಲ್ಲಾ ಪರಿಷತ್ ಮಾಜಿ ಸದಸ್ಯೆ ಶಶಿಕಲಾ ನಾಗರಾಜ್ ಅವರು, 1996ರಲ್ಲಿ ಹೆಚ್.ಡಿ.ದೇವೇಗೌಡರ ಸಂಪುಟ ದಲ್ಲಿ ರೈಲ್ವೆ ಸಚಿವರಾಗಿದ್ದ ಪಾಸ್ವಾನ್, ಚಾಮರಾಜನಗರ-ಮೆಟ್ಟುಪಾಳ್ಯಂ ರೈಲ್ವೆ ಮಾರ್ಗಕ್ಕೆ ಮಂಜೂರಾತಿ ನೀಡಿದ್ದರು. ಕಾಮಗಾರಿಗೆ ಶಂಕುಸ್ಥಾಪನೆ ಮಾಡಿಬಿಡಿ ಸಾಕು, ರೈಲ್ವೆ ಮಾರ್ಗ ಬರುತ್ತದೆ ಎಂಬ ಭರವಸೆ ನೀಡಿದ್ದರು. ಆದರೆ ಅಲ್ಪ ಕಾಲದಲ್ಲೇ ಸರ್ಕಾರ ಪತನಗೊಂಡಿದ್ದರಿಂದ ಚಾಮರಾಜನಗರ-ಮೆಟ್ಟುಪಾಳ್ಯಂ ರೈಲ್ವೆ ಮಾರ್ಗದ ಅವರ ಕನಸು ನನಸಾಗಲಿಲ್ಲ ಎಂದರಲ್ಲದೆ, ಪಾಸ್ವಾನ್ ನಿಧನಕ್ಕೆ ಸಂತಾಪ ಸೂಚಿಸಿದರು.

Translate »