ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ಸುಧಾರಣಾ ಮಸೂದೆ ಜಾರಿ
ಮೈಸೂರು

ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ಸುಧಾರಣಾ ಮಸೂದೆ ಜಾರಿ

October 9, 2020

ಮೈಸೂರು, ಅ.8(ಆರ್‍ಕೆ)- ರೈತರ ಆದಾಯ ದ್ವಿಗುಣಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೃಷಿ ಸುಧಾ ರಣಾ ಮಸೂದೆಗಳನ್ನು ಜಾರಿಗೆ ತರುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ಮೈಸೂರಿನ ಎಂ.ಜಿ.ರಸ್ತೆಯಲ್ಲಿರುವ ಖಾಸಗಿ ಹೋಟೆಲಿ ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿ ವರು, ಕೃಷಿ ವಲಯದ ಆಮೂಲಾಗ್ರ ಬೆಳವಣಿಗೆ ಹಾಗೂ ರೈತರಿಗೆ ಅನುಕೂಲವಾಗುವಂತೆ ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ, ರೈತರ ಬೆಂಬಲ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ ಹಾಗೂ ಅಗತ್ಯ ಸರಕು (ಎಸೆನ್ಷಿಯಲ್ ಕಮಾಡಿಟೀಸ್) ಮಸೂದೆ- 2020ಗಳನ್ನು ರೂಪಿ ಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.

ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ಕಿಸಾನ್ ಕಾರ್ಡ್, ಸಾಯಿಲ್ ಹೆಲ್ತ್ ಕಾರ್ಡ್, ಕಡಿಮೆ ಬಡ್ಡಿ ದರದಲ್ಲಿ ಸಾಲ, ಕೃಷಿ ಉತ್ಪನ್ನ ಮಾರಾಟಕ್ಕಾಗಿ ಇ-ನ್ಯಾಮ್ ಡಿಜಿಟಲ್ ಪ್ಲಾಟ್‍ಫಾರಂ, ಸಮರ್ಪಕ ರಸಗೊಬ್ಬರ ಸರಬರಾಜು, ವೃದ್ಧಾಪ್ಯ ಪಿಂಚಣಿ, ಬೆಳೆ ವಿಮೆ, ಕೋಲ್ಡ್ ಸ್ಟೋರೇಜ್ ಸರಪಳಿ ವಿಸ್ತರಣೆಯಂತಹ ಯೋಜನೆಗಳನ್ನು ಜಾರಿಗೆ ತಂದಾಗ್ಯೂ ರೈತರ ಆದಾಯ ಸುಧಾರಣೆಗೆ ಕೆಲ ಕಾನೂ ನಾತ್ಮಕ ತೊಡಕುಗಳಿದ್ದರಿಂದ ಕೇಂದ್ರ ಸರ್ಕಾರ ಈ 3 ಮಸೂದೆಗಳನ್ನು ರಚಿಸಲು ಮುಂದಾಗಿದೆ ಎಂದರು.

ಕೃಷಿ ಸಂಬಂಧಿತ ಕಾನೂನಿನ ತೊಡಕಿನಿಂದಾಗಿ 1990ರ ದಶಕದಲ್ಲೇ ಆರಂಭಗೊಂಡ ಆರ್ಥಿಕ ಉದಾ ರೀಕರಣದ ಲಾಭವನ್ನು ಕೈಗಾರಿಕೆ ಸೇರಿದಂತೆ ದೇಶದ ಬೇರೆ ಬೇರೆ ವಲಯಗಳು ಪಡೆದುಕೊಂಡವೇ ಹೊರತು, ರೈತರಿಗೆ ಅನುಕೂಲವಾಗಲಿಲ್ಲ.

ಹಾಗಾಗಿ ಕೃಷಿ ವಲಯದ ಸುಧಾರಣೆಗಾಗಿ ಈ ಮಸೂದೆಗಳನ್ನು ರಚಿಸಲಾಗುತ್ತಿದೆ ಎಂದರು. ಇದುವರೆಗೆ ಭೂಮಿ, ಹೂಡಿಕೆ, ಪರಿಶ್ರಮ ಮತ್ತು ಉತ್ಪಾದನೆ ರೈತರದ್ದಾಗಿತ್ತು. ಆದರೆ ಮಾರಾಟದ ಆಯ್ಕೆ ಅವರದ್ದಾಗಿರಲಿಲ್ಲ. ತಮ್ಮ ಉತ್ಪನ್ನದ ಬೆಲೆಯನ್ನು ರೈತರು ನಿರ್ಧರಿಸುವಂತಿರಲಿಲ್ಲ. ರೈತರು ತಮ್ಮ ಬೆಳೆಯನ್ನು ನಿಗದಿತ ಎಪಿಎಂಸಿ ಮಂಡಿಗೆ ಒಯ್ದು ಕಮೀಷನ್ ಏಜೆಂಟರ ಅಂಗಳದಲ್ಲಿ ಹಾಕಬೇಕಿತ್ತು. ಕೇವಲ ವ್ಯಾಪಾರಿಗಳು ಬಂದು ಮಾಲಿನ ದರ ನಿಗದಿ ಮಾಡುತ್ತಿದ್ದರು. ಮನಸಿಲ್ಲದಿದ್ದರೂ ರೈತರು ಆ ದರವನ್ನು ಒಪ್ಪಿಕೊಳ್ಳಬೇಕು. ಏಕೆಂದರೆ ಕೃಷಿ ಉತ್ಪನ್ನಗಳು ಬೇಗ ಕೆಟ್ಟು ಹೋಗುವಂತವಾಗಿದೆ. ಅವುಗಳ ಸಂಗ್ರಹಣೆಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ರೈತರು ಉತ್ಪನ್ನಗಳನ್ನು ಬೇಗ ಮಾರಾಟ ಮಾಡುತ್ತಿದ್ದರು ಎಂದರು. ಈ ಹಿಂದೆ ಲೈಸೆನ್ಸ್ ಹೊಂದಿದ ವ್ಯಾಪಾರಸ್ಥರು ಮಾತ್ರ ಕೃಷಿ ಉತ್ಪನ್ನ ಖರೀದಿಸಿ ಹೊರ ರಾಜ್ಯಗಳಿಗೆ ಕಳುಹಿಸಬಹುದಾಗಿತ್ತು. ಹೊಸ ಕಾಯ್ದೆಯಿಂದ ಅಂತಾರಾಜ್ಯ ಸಾಗಣೆ ಗಾಗಲೀ, ಮಾರಾಟಕ್ಕಾಗಲೀ ಯಾವ ನಿರ್ಬಂಧವೂ ಇರುವುದಿಲ್ಲ. ರೈತ ತನ್ನ ಹೊಲದಲ್ಲೇ ಮಾರಾಟ ಮಾಡಬಹುದು. ಸಮೀಪದ ಆಹಾರ ಸಂಸ್ಕರಣಾ ಘಟಕ, ಗೋದಾಮು, ಖಾಸಗಿ ಖರೀದಿದಾರರಿಗೆ ನೇರವಾಗಿ ಮಾರಾಟ ಮಾಡಬಹುದಾಗಿದೆ ಎಂದು ನುಡಿದರು. ಅಗತ್ಯ ಸರಕುಗಳ ಕಾಯ್ದೆಯಿಂದ ಏಕದಳ, ದ್ವಿದಳ ಧಾನ್ಯಗಳು, ಆಲೂಗೆಡ್ಡೆ, ಈರುಳ್ಳಿ, ಕಾಳುಕಡ್ಡಿಗಳ ಮೇಲಿನ ಸಾಗಣೆ ನಿರ್ಬಂಧ ತೆರವುಗೊಂಡು ಬೇರೆ ಬೇರೆ ರಾಜ್ಯಗಳಿಗೂ ಕೊಂಡೊಯ್ದು ಅತೀ ಹೆಚ್ಚು ಬೆಲೆಗೆ ಮಾರಾಟ ಮಾಡಬಹುದಾಗಿದೆ. ಕೇಂದ್ರ ಜಾರಿಗೆ ತರಲು ಹೊರಟಿ ರುವ ಈ ಮಸೂದೆ ರೈತರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಗೊಳಿಸುತ್ತವೆಯೇ ಹೊರತು, ಮಾರಕವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ನಗರಾಧ್ಯಕ್ಷ ಶ್ರೀವತ್ಸ, ಮಾಜಿ ಸಚಿವ ಸಿ.ಹೆಚ್.ವಿಜಯ ಶಂಕರ್, ಮಹಿಳಾ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಗೋಷ್ಠಿಯಲ್ಲಿದ್ದರು.

Translate »