ಮನೆಯಲ್ಲಿದ್ದುಕೊಂಡೇ ಕೊರೊನಾ ಗೆದ್ದ ಡೆಂಟಿಸ್ಟ್ ಕುಟುಂಬ
ಮೈಸೂರು

ಮನೆಯಲ್ಲಿದ್ದುಕೊಂಡೇ ಕೊರೊನಾ ಗೆದ್ದ ಡೆಂಟಿಸ್ಟ್ ಕುಟುಂಬ

August 7, 2020

ಮೈಸೂರು, ಆ.6(ವೈಡಿಎಸ್)- `ಕೊರೊನಾ ಭಯವೇ ಮನುಷ್ಯನನ್ನು ಶೇ.75ರಷ್ಟು ದುರ್ಬಲಗೊಳಿಸುತ್ತದೆ. ಹಾಗಾಗಿ ಧೈರ್ಯವಾಗಿ ಇರಬೇಕು. ಚಹಾ, ಕಾಫಿಗೆ ಬದಲಾಗಿ ದಿನಕ್ಕೆ ಮೂರು ಬಾರಿ ಕಷಾಯ ಕುಡಿಯಬೇಕು’….

ಆರೋಗ್ಯ ಸಮಸ್ಯೆ ಇರುವ 60-65 ವರ್ಷ ಮೇಲ್ಪ ಟ್ಟವರು ಮತ್ತು ಮಕ್ಕಳು ಕೊರೊನಾದಿಂದ ಹೆಚ್ಚು ಎಚ್ಚರ ವಹಿಸಬೇಕು. ಒಣದ್ರಾಕ್ಷಿ, ಖರ್ಜೂರ ಸೇರಿ ದಂತೆ ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಬೇಕು. ಹೆಚ್ಚು ಹಾಲು ಕುಡಿಯಬೇಕು. ಜತೆಗೆ ಅಕ್ಕ-ಪಕ್ಕದ ನಿವಾಸಿಗಳು ಧೈರ್ಯ ತುಂಬಿ ದರೆ ಕೊರೊನಾ ಗೆದ್ದಂತೆ ಎಂದು ಶಕ್ತಿನಗರ ನಿವಾಸಿ, ಡೆಂಟಿಸ್ಟ್ (ರೋಗಿ ಸಂಖ್ಯೆ ಎಂವೈಎಸ್-2398) ಅನುಭವದ ಮಾತುಗಳು.

`ನನಗೆ ಕೊರೊನಾ ಸೋಂಕು ಹೇಗೆ ಬಂತೆಂದು ಗೊತ್ತಿಲ್ಲ. ಜು.18ರಂದು ಕೆಲಸ ಮುಗಿಸಿ ಮನೆಗೆ ಹೋದಾಗ ಗಂಟಲು ಕೆರೆತ ಬಂತು. ಮರುದಿನ ಮೈಕೈ ನೋವು. ಆಗಲೇ ಅನುಮಾನ ಬಂದು ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸಲು ಶುರುಮಾಡಿದೆ. ಜು.20ರಂದು ಮತ್ತೆ ಜ್ವರಬಂತು. ಅಂದೇ ಕೋವಿಡ್ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂತು. ಮರುದಿನವೇ ಅಮ್ಮ, ಪತ್ನಿ, ಮಗಳನ್ನು ಆಸ್ಪತ್ರೆಗೆ ಕಳುಹಿಸಿ ಪರೀಕ್ಷೆ ಮಾಡಿಸಿದಾಗ ಅವರಿಗೂ ಪಾಸಿಟಿವ್ ಬಂತು. ಅಂದಿನಿಂದ ನಾಲ್ವರೂ 24 ದಿನ ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇವೆ. ಆ.7ಕ್ಕೆ ಕ್ವಾರೆಂಟೈನ್ ಅವಧಿ ಮುಕ್ತಾಯವಾಗಲಿದೆ. ಸದ್ಯ ಆರೋಗ್ಯವಾಗಿದ್ದೇವೆ’ ಎಂದರು.

ದಿನಸಿಗೆ ಕೊರತೆ ಇಲ್ಲ: ಅಕ್ಕ-ಪಕ್ಕದ ನಿವಾಸಿಗಳು, ಸ್ನೇಹಿತರೇ ಅಂಗಡಿಯಿಂದ ಹಾಲು, ತರಕಾರಿ, ದಿನಸಿ ಪದಾರ್ಥ ತಂದು ಕೊಡುತ್ತಾರೆ. ಅಲ್ಲದೆ, 3 ದಿನಗಳಿಗೊಮ್ಮೆ ಮನೆಗೆ ಸ್ಯಾನಿಟೈಸ್ ಮಾಡಲು ಬರುವ ಪಾಲಿಕೆ ಸಿಬ್ಬಂದಿಯೂ `ದಿನಸಿ ಪದಾರ್ಥ ತಂದುಕೊಡಬೇಕಾ?’ ಎಂದು ವಿಚಾರಿಸುತ್ತಾರೆ. ಇದೆಲ್ಲವೂ ನನಗೆ ಸಂತೋಷವನ್ನುಂಟು ಮಾಡಿದೆ ಎಂದರು.

Translate »