ಮಡಿಕೇರಿ, ಮೇ 4- ಕಳೆದ ವರ್ಷ ಮಳೆಗಾಲದ ವೇಳೆ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದು ಅನಾಹುತ ಸಂಭ ವಿಸಲು ಕಾರಣವಾಗಿದ್ದ ಇಂಗು ಗುಂಡಿ ಗಳನ್ನು ಅರಣ್ಯ ಇಲಾಖೆ ಇದೀಗ ಮುಚ್ಚಿದೆ.
ಸುಮಾರು 650 ಇಂಗು ಗುಂಡಿಗಳನ್ನು ಸ್ಥಳೀಯರ ಸಹಕಾರದಿಂದ 26 ದಿನಗಳ ಕಾಲ ಕಾರ್ಯಾಚರಣೆ ನಡೆಸುವ ಮೂಲಕ ಅರಣ್ಯ ಇಲಾಖಾ ಸಿಬ್ಬಂದಿ ಮುಚ್ಚುವಲ್ಲಿ ಸಫಲರಾಗಿದ್ದಾರೆ. ಇಂಗು ಗುಂಡಿಗಳಿಂದ ತೊಂದರೆಯಾಗಿಲ್ಲ ಎಂದೇ ಪ್ರತಿಪಾದಿಸುತ್ತಿದ್ದ ಅರಣ್ಯ ಇಲಾಖೆ ಜಿಯೋ ಲಾಜಿಕಲ್ ಸರ್ವೆ ಆಫ್ ಇಂಡಿಯಾದ ಭೂ ವಿಜ್ಞಾನಿಗಳು ಸಲ್ಲಿಸಿದ್ದ ವರದಿ ಮತ್ತು ಜಿಲ್ಲಾಡಳಿತದ ಸೂಚನೆಯಂತೆ ಇಂಗು ಗುಂಡಿಗಳನ್ನು ಮುಚ್ಚಿದ್ದು, ತಡವಾಗಿ ಯಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ.
2014-15ರಲ್ಲಿ ತಲಕಾವೇರಿಯ ಗಜಗಿರಿ ಹಾಗೂ ಬ್ರಹ್ಮಗಿರಿ ಬೆಟ್ಟಗಳಲ್ಲಿ ಅಂದಾಜು 650ರಷ್ಟು ಇಂಗು ಗುಂಡಿ ಗಳನ್ನು ತೋಡಲಾಗಿತ್ತು. ಪ್ರತಿ ಗುಂಡಿಗಳು ಸುಮಾರು 5 ಅಡಿ ಉದ್ದ ಹಾಗೂ 1 ಮೀಟರ್‍ನಷ್ಟು ಆಳವಿದ್ದವು. ಭೂ ಗರ್ಭಶಾಸ್ತ್ರ ಇಲಾಖೆಯ ತಜ್ಞರ ವರದಿ ಆಧರಿಸಿ ಸಭೆ ನಡೆಸಿದ್ದ ಅಂದಿನ ಜಿಲ್ಲಾಧಿ ಕಾರಿ ಅನೀಸ್ ಕಣ್ಮಣಿ ಜಾಯ್, ಇಂಗು ಗುಂಡಿಗಳನ್ನು ಮುಚ್ಚುವಂತೆ ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಸಂಬಂಧ ಅಧಿಕಾರಿಗಳು ಗುಂಡಿ ಮುಚ್ಚಲು ಅನುಮತಿ ಕೋರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಇತ್ತೀಚೆಗೆ ಮೇಲಾಧಿಕಾರಿಗಳಿಂದ ಅನುಮತಿ ದೊರೆತಿದ್ದು, ಕಳೆದ 26 ದಿನಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಎಲ್ಲ ಗುಂಡಿಗಳನ್ನು ಮುಚ್ಚಲಾಗಿದೆ. ಅಲ್ಲಿನ ಸ್ಥಳೀಯರು ಕೂಡ ಗುಂಡಿ ಮುಚ್ಚುವ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಈ ಬೆಟ್ಟ ಸಾಲಿನಲ್ಲಿ ಅಲ್ಲಿನ ಪರಿಸರಕ್ಕೆ ಪೂರಕವಾದ ನೇರಳೆ, ಅಮೆ, ಸೀಬೆ, ನೆಲ್ಲಿಕಾಯಿ ಇತ್ಯಾದಿ ಮರಗಳನ್ನು ಬೆಳೆಸಲು ಈಗಾಗಲೇ ಅರಣ್ಯ ಇಲಾಖಾಧಿ ಕಾರಿಗಳು ಸಂಪಾಜೆಯಿಂದ ಸುಮಾರು 50 ಸಾವಿರ ಗಿಡಗಳನ್ನು ಖರೀದಿಸಿದ್ದಾರೆ. ಅಲ್ಲದೆ ಅಮೆ ಮರದ ಬೀಜಗಳನ್ನು ಈಗಾಗಲೇ ಬಿತ್ತಲಾಗಿದೆ. ಮಾತ್ರವಲ್ಲದೇ, ಆಳಕ್ಕೆ ಬೇರೂರುವ ವೆಟ್ರಿವರ್ ಹುಲ್ಲನ್ನು ಬೆಳೆಸಲು ಕೂಡ ಅರಣ್ಯ ಇಲಾಖೆ ಮುಂದಾಗಿದೆ.