ಲಾಕ್‍ಡೌನ್ ಘೋಷಣೆಯ ಮೊದಲ ದಿನ ಕೊಡಗು ಸಂಪೂರ್ಣ ಸ್ತಬ್ಧ
ಕೊಡಗು

ಲಾಕ್‍ಡೌನ್ ಘೋಷಣೆಯ ಮೊದಲ ದಿನ ಕೊಡಗು ಸಂಪೂರ್ಣ ಸ್ತಬ್ಧ

May 5, 2021

ಮಡಿಕೇರಿ, ಮೇ 4- ಲಾಕ್‍ಡೌನ್ ಘೋಷಣೆಯ ಮೊದಲ ದಿನವಾದ ಮಂಗಳವಾರ ಮಧ್ಯಾಹ್ನ 1 ಗಂಟೆಯ ಬಳಿಕ ಮಡಿಕೇರಿ ನಗರ ಸೇರಿದಂತೆ ಕೊಡಗು ಜಿಲ್ಲೆ ಸಂಪೂರ್ಣ ಲಾಕ್‍ಡೌನ್ ತೆರೆ ಎಳೆದುಕೊಂಡಿದೆ. ಜಿಲ್ಲಾಡಳಿತದ ಆದೇಶಕ್ಕೆ ಸಾರ್ವಜನಿಕರು ಕೂಡ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಕೈಜೋಡಿಸಿದ್ದಾರೆ.

ಮಂಗಳವಾರ ಜಿಲ್ಲಾ ಕೇಂದ್ರ ಮಡಿ ಕೇರಿಯಲ್ಲಿ ಬೆಳಗೆ 6 ಗಂಟೆಯಿಂದ 12 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಅಂಗಡಿಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತಿದ್ದು ಕಂಡು ಬಂತು. ವಾರದ 5 ದಿನ ಗಳ ಕಾಲ ಲಾಕ್‍ಡೌನ್ ಜಾರಿಯಲ್ಲಿ ರುವುದರಿಂದ ದಿನ ಬಳಕೆ ವಸ್ತುಗಳನ್ನು ಕೊಳ್ಳಲು ಸಾರ್ವಜನಿಕರು ರಸ್ತೆಗಿಳಿದಿದ್ದರು. ಹೀಗಾಗಿ ಅಂಗಡಿ ಮುಂಗಟ್ಟುಗಳ ಮುಂದೆ ಎಂದಿಗಿಂತ ಹೆಚ್ಚು ಜನ ಕಂಡು ಬಂದರಲ್ಲದೇ, ಜನರಲ್ ತಿಮ್ಮಯ್ಯ ವೃತ್ತ, ಐ.ಜಿ ವೃತ್ತ, ಕಾಲೇಜು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕೂಡ ಕಂಡು ಬಂತು.

12 ಗಂಟೆ ಸಮಯ ಮುಕ್ತಾಯವಾಗು ತ್ತಿದ್ದಂತೆಯೇ ರಸ್ತೆಗೆ ಇಳಿದ ಪೊಲೀಸರು ನಿಗಧಿತ ಸಮಯ ಮೀರಿ ವ್ಯಾಪಾರ ವಹಿ ವಾಟು ನಡೆಸುತ್ತಿದ್ದ ಅಂಗಡಿ ಮಳಿಗೆಗಳನ್ನು ಮುಚ್ಚಿಸಿದರು. ನಗರದೊಳಗೆ ವಾಹನ ಸಂಚಾರ ಕಡಿಮೆಯಾದ ತಕ್ಷಣವೇ ಮುಖ್ಯ ರಸ್ತೆ, ನಗರದ ಒಳಗಿನ ರಸ್ತೆಗಳ ಜಂಕ್ಷನ್‍ಗಳಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಅನಗತ್ಯ ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದರು.

ಆಸ್ಪತ್ರೆ, ಮೆಡಿಕಲ್ ಶಾಪ್, ಕ್ಲಿನಿಕ್ ಸೇರಿದಂತೆ ತುರ್ತು ಸೇವೆಗಳಿಗೆ ತೆರಳುವ ವಾಹನಗಳ ಸಂಚಾರಕ್ಕೆ ಮಾತ್ರವೇ ಪೊಲೀ ಸರು ಅವಕಾಶ ನೀಡಿದರು. ತುರ್ತು ಸೇವೆಯ ಹೆಸರಲ್ಲಿ ವಿನಾಕಾರಣ ವಾಹನಗಳು ಓಡಾಡುತ್ತಿರುವುದನ್ನು ಮನಗಂಡ ಪೊಲೀಸರು, ಜನರಲ್ ತಿಮ್ಮಯ್ಯ ವೃತ್ತ ಮತ್ತು ಐ.ಜಿ. ವೃತ್ತದ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿದರು. ಇಲ್ಲಿಗೆ ಆಗಮಿಸುವ ವಾಹನಗಳ ಮತ್ತು ಅದರಲ್ಲಿದ್ದ ಪ್ರಯಾಣಿಕರ ತುರ್ತು ಸೇವೆಗಳ ದಾಖಲಾತಿಗಳನ್ನು ಪರಿಶೀಲಿಸಿ ಬಳಿಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಓಡಾಡುತ್ತಿದ್ದ ವಾಹನಗಳಿಗೆ ನಗರ ಪ್ರವೇಶಿಸಲು ಪೊಲೀಸರು ಅವಕಾಶ ನೀಡದೆ ವಾಪಸ್ಸು ಕಳುಹಿಸುತ್ತಿದ್ದ ದೃಶ್ಯಗಳು ಕಂಡು ಬಂತು. ಕಾರಿನ ಒಳಗೆ ಮಾಸ್ಕ್ ಧರಿಸದೇ ವಾಹನದಲ್ಲಿ ಸಂಚರಿಸುತ್ತಿದ್ದವರಿಗೆ ಪೊಲೀಸರು ಸ್ಥಳದಲ್ಲೇ ದಂಡ ವಿಧಿಸಿದರು. ಇನ್ನು ದಿನಸಿ, ಹಾಲು, ಮೊಟ್ಟೆ, ಅಡುಗೆ ಅನಿಲ ಪೂರೈಕೆ, ಹಣ್ಣು, ತರಕಾರಿ ಸೇರಿದಂತೆ ಕಟ್ಟಡ ಕಾಮಗಾರಿ ಸರಕು ಸಾಗಿಸುವ ವಾಹನಗಳಿಗೆ ಪೊಲೀಸರು ಯಾವುದೇ ನಿರ್ಬಂಧ ಹೇರಲಿಲ್ಲ. ಮೆಡಿಕಲ್ ಶಾಪ್‍ಗಳು, ಪೆಟ್ರೋಲ್ ಬಂಕ್‍ಗಳು ಎಂದಿನಂತೆ ಸೇವೆ ನೀಡಿದವು.

Translate »