ಬೇಟೆಗಾರರ ಬೇಟೆಗಾರ ಪ್ರಖ್ಯಾತಿಯಬಂಡೀಪುರ `ರಾಣಾ’ ಇನ್ನಿಲ್ಲ
ಮೈಸೂರು

ಬೇಟೆಗಾರರ ಬೇಟೆಗಾರ ಪ್ರಖ್ಯಾತಿಯಬಂಡೀಪುರ `ರಾಣಾ’ ಇನ್ನಿಲ್ಲ

August 3, 2022

ಗುಂಡ್ಲುಪೇಟೆ, ಆ.2-ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಬೇಟೆಗಾರರ ಬೇಟೆಗಾರ ಎಂದೇ ಪ್ರಖ್ಯಾತಿ ಪಡೆದಿದ್ದ ಸಾಹಸಿ ಶ್ವಾನ ರಾಣಾ(9) ವಯೋಸಹಜ ಅನಾರೋಗ್ಯದಿಂದ ಮಂಗಳವಾರ ಬೆಳಗ್ಗೆ ಮೃತಪಟ್ಟಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಕಳ್ಳ ಬೇಟೆಯೂ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು, ವನ್ಯಜೀವಿ ಬೇಟೆಗಾರರನ್ನು ನಿಗ್ರಹಿಸಲು ಹಾಗೂ ನಾನಾ ಅರಣ್ಯ ಅಪರಾಧಗಳನ್ನು ಭೇದಿಸುವುದಕ್ಕಾಗಿ ಸದಾ ಸಜ್ಜಾಗಿರುತ್ತಿದ್ದ ಶ್ವಾನ ದಳದ ಜರ್ಮನ್ ಶಫರ್ಡ್ ತಳಿಯ ರಾಣಾ 2013ರ ಡಿ.28ರಂದು ಜನಿಸಿತ್ತು. ರಾಣಾನಿಗೆ ಭೂಪಾಲ್‍ನ ವಿಶೇಷ ಸಶಸ್ತ್ರ ಪಡೆಯಲ್ಲಿ ತರಬೇತಿ ನೀಡಿ, 2015ರ ಜೂನ್ ನಲ್ಲಿ ಅರಣ್ಯ ಇಲಾಖೆಗೆ ನಿಯೋಜಿಸಿಕೊಳ್ಳ ಲಾಗಿತ್ತು. ಕರ್ನಾಟಕ ಅರಣ್ಯ ಇಲಾಖೆಯ ಶ್ವಾನದಳದ ಮೊದಲ ಶ್ವಾನವೆಂಬ ಹೆಗ್ಗಳಿ ಕೆಗೆ ಪಾತ್ರವಾಗಿದ್ದ ರಾಣಾ ಪ್ರಾರಂಭದಲ್ಲಿಯೇ ಬಂಡೀಪುರ ವ್ಯಾಪ್ತಿಯ ಎನ್.ಬೇಗೂರು ವಲಯದಲ್ಲಿ ತೇಗದ ಮರಗಳ ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮೂವರು ಖದೀಮರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. ನಂತರದಲ್ಲಿ ಓಂಕಾರ ವಲಯದ ವ್ಯಾಪ್ತಿಯಲ್ಲಿ ಮೂರು ಕಪ್ಪು ಚಿರತೆಗಳ ವಿಷ ಪ್ರಾಶನ ಪ್ರಕರಣವನ್ನು ಭೇದಿಸುವುದರ ಜೊತೆಗೆ ಶ್ರೀರಂಗ ಪಟ್ಟಣದಲ್ಲಿ ಶ್ರೀಗಂಧ ಕಳ್ಳರ ಪತ್ತೆ ಹಚ್ಚುವಲ್ಲೂ ಪ್ರಮುಖ ಪಾತ್ರ ವಹಿಸಿತ್ತು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವಲ್ಲದೇ ರಾಜ್ಯದ ವಿವಿಧ ಅರಣ್ಯ ವಿಭಾಗಗಳ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಹುಲಿ, ಚಿರತೆಯಂತಹ ಪ್ರಾಣಿಗಳ ನೆಲೆ ಪತ್ತೆಹಚ್ಚಿ ಅವುಗಳ ಸೆರೆ ಹಿಡಿಯುವ ಕಾರ್ಯಾಚರಣೆಗೆ ಯಶಸ್ಸು ತಂದು ಕೊಟ್ಟಿತ್ತು.

ವಿಶೇಷವಾಗಿ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಗೂಡಲೂರಿನಲ್ಲಿ 8 ತಿಂಗಳವರೆಗೆ ಕೈಗೆ ಸಿಕ್ಕದೆ ಸತಾಯಿಸುತ್ತಿದ್ದ ನರಭಕ್ಷಕ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲೂ ರಾಣಾನ ಪಾತ್ರ ಅವಿಸ್ಮರಣೀಯ.

ರಾಣಾ ತನ್ನ 7 ವರ್ಷಗಳ ಸೇವಾವಧಿಯಲ್ಲಿ 8 ಹುಲಿ, 45ಕ್ಕೂ ಹೆಚ್ಚು ಚಿರತೆ ಸಂಬಂಧಿತ ಪ್ರಕರಣಗಳು, ಹಲವಾರು ಮರಗಳ್ಳತನ, ಉರುಳು ಪತ್ತೆ ಸೇರಿದಂತೆ ತನ್ನ ಕರ್ತವ್ಯವನ್ನು ಅತ್ಯಂತ ದಕ್ಷ ಹಾಗೂ ಚಾಣಾಕ್ಷತೆಯಿಂದ ನಿರ್ವಹಿಸಿ ಶಹಬಾಸ್ ಎನಿಸಿಕೊಂಡಿತ್ತು. ತನ್ನ ತರಬೇತುದಾರನಾಗಿದ್ದ ಎಸ್‍ಟಿಪಿಎಫ್ ಸಿಬ್ಬಂದಿ ಪ್ರಕಾಶ್ ಜೊತೆ ಹೆಚ್ಚಿನ ಒಡನಾಟ ಹೊಂದಿತ್ತು. ಇಳಿ ವಯಸ್ಸಿನಲ್ಲಿಯೂ ಉತ್ತಮವಾಗಿ ಕಾರ್ಯ ನಿರ್ವಹಿಸಿದ ರಾಣಾ ನಿಧನ ಇಲಾಖೆಗೆ ದೊಡ್ಡ ನಷ್ಟವುಂಟು ಮಾಡಿದೆ ಎಂದು ಅರಣ್ಯಾಧಿಕಾರಿಗಳು ಕಂಬನಿ ಮಿಡಿದಿದ್ದಾರೆ. ಮಂಗಳವಾರ ಮಧ್ಯಾಹ್ನ ಮೇಲುಕಾಮನ ಹಳ್ಳಿಯಲ್ಲಿರುವ ಸಫಾರಿ ಟಿಕೆಟ್ ಕೇಂದ್ರದ ಬಳಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಹುಲಿ ಯೋಜನೆಯ ನಿರ್ದೇಶಕ ಡಾ.ರಮೇಶ್‍ಕುಮಾರ್, ಎಸಿಎಫ್‍ಗಳಾದ ನವೀನ್, ರವೀಂದ್ರ, ಕೆ.ಪರಮೇಶ್ ಹಾಗೂ ವಿವಿಧ ವಲಯಗಳ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

Translate »