ದಾವಣಗೆರೆಯಲ್ಲಿ ಇಂದು ಸಿದ್ದರಾಮಯ್ಯ ಅಮೃತ ಮಹೋತ್ಸವ
News

ದಾವಣಗೆರೆಯಲ್ಲಿ ಇಂದು ಸಿದ್ದರಾಮಯ್ಯ ಅಮೃತ ಮಹೋತ್ಸವ

August 3, 2022

ದಾವಣಗೆರೆ, ಆ.2- ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವ ಆಚರಣೆಗೆ ದಾವಣ ಗೆರೆ ಸಜ್ಜಾಗಿದ್ದು, ಬೃಹತ್ ವೇದಿಕೆ ಸಿದ್ಧಗೊಂಡಿದೆ. ಎಲ್ಲೆಡೆ ಸಿದ್ದರಾಮಯ್ಯ, ರಾಹುಲ್‍ಗಾಂಧಿ ಹಾಗೂ ವಿವಿಧ ಕಾಂಗ್ರೆಸ್ ನಾಯಕರ ಕಟೌಟ್‍ಗಳು ನಗರಾದ್ಯಂತ ರಾರಾ ಜಿಸುತ್ತಿವೆ. ಇಡೀ ನಗರದಲ್ಲಿ ಹಬ್ಬದ ವಾತಾವರಣ ನೆಲೆಗೊಂಡಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಾಗಿ ನೀಡಿದ ನಾನಾ ಜನಪರ ಯೋಜನೆಗಳ ಬೃಹತ್ ಫ್ಲೆಕ್ಸ್‍ಗಳು ಎಲ್ಲೆಡೆ ಹಾಕಲಾಗಿದೆ.

ದಾವಣಗೆರೆಯ ಶಾಮನೂರು ಪ್ಯಾಲೇಸ್ ಮೈದಾನ ದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಎಂಟತ್ತು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಪುತ್ರ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನೇತೃತ್ವ ಹಾಗೂ ಚಿಂತನೆಯಂತೆ ಜರ್ಮನ್ ಮಾದರಿ ವೇದಿಕೆಯನ್ನು ಸಿದ್ಧಪಡಿಸಿದ್ದು, ಒಂದು ನಿಮಿಷ ದಲ್ಲಿ 700ಕ್ಕೂ ಹೆಚ್ಚು ಮಂದಿಗೆ ಊಟ ಬಡಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ನೆಲದಿಂದ 12 ಅಡಿ ಎತ್ತರದ ಮುಖ್ಯ ವೇದಿಕೆ, ಇನ್ನೊಂದು ಮನರಂಜನಾ ವೇದಿಕೆ, ಮತ್ತೊಂದು ವಿಐಪಿಗಳಿಗಾಗಿ ನಿರ್ಮಿಸಲಾಗಿದೆ. ಅಮೃತ ಮಹೋತ್ಸವ ಸಮಿತಿಯ ಮುಖಂಡರಾದ ಬಸವರಾಜ ರಾಯರೆಡ್ಡಿ, ಅಶೋಕ್ ಪಟ್ಟಣ, ಪ್ರಕಾಶ್ ರಾಥೋಡ್ ಇನ್ನಿತರರು ವೇದಿಕೆಯ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು. ಬೃಹತ್ ವೇದಿಕೆ ಮುಂಭಾಗ ಸಿದ್ದರಾಮಯ್ಯ,ರಾಹುಲ್ ಗಾಂಧಿ ಅವರ ಭಾರೀ ಎತ್ತರದ ಕಟೌಟ್ ರಾರಾಜಿಸುತ್ತಿದೆ. ಪ್ರಮುಖ ಬೀದಿಗಳಲ್ಲಿ ಕಾಂಗ್ರೆಸ್ ನಾಯಕರನ್ನು ಸ್ವಾಗತಿಸುವ, ಸಿದ್ದರಾಮಯ್ಯ ಅವರಿಗೆ ಶುಭಾಶಯ ಕೋರುವಂತಹ ಫ್ಲೆಕ್ಸ್‍ಗಳು ಗಮನ ಸೆಳೆಯುತ್ತಿವೆ.

ಸಜ್ಜಾದ ಬೃಹತ್ ವೇದಿಕೆ: ಸಿದ್ದರಾಮಯ್ಯ ಅವರ ಆಪ್ತ ಮೈಸೂರಿನ ಪೆಂಡಾಲ್ ಮಾಲೀಕ ಷರೀಫ್, 200ಕ್ಕೂ ಹೆಚ್ಚು ಕಾರ್ಮಿಕರಿಂದ ಮುಖ್ಯ ವೇದಿಕೆ, ಸಾರ್ವಜನಿಕರಿಗಾಗಿ ವೇದಿಕೆ ಹಾಗೂ ಊಟದ ವೇದಿಕೆ ನಿರ್ಮಾಣಗೊಂಡಿದೆ. ಇಂತಹ ಬೃಹತ್ ವಿಶಾಲ ವೇದಿಕೆ ಇದೇ ಮೊದಲು ನಿರ್ಮಾಣವಾಗಿದೆ ಎನ್ನುತ್ತಾರೆ ಅವರು. ಆರು ಲಕ್ಷ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮ ವೀಕ್ಷಿಸಲು ಅಲ್ಲಲ್ಲಿ ಬೃಹತ್ ಎಲ್‍ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮಕ್ಕೆ ಎಐಸಿಸಿ ವರಿಷ್ಠ ರಾಹುಲ್‍ಗಾಂಧಿ ಆಗಮಿಸಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯಸಭೆ ವಿಪಕ್ಷ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ.

7000 ಬಸ್ ವ್ಯವಸ್ಥೆ: ರಾಜ್ಯದ ವಿವಿಧ ಭಾಗಗಳಿಂದ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನೋತ್ಸವಕ್ಕೆ ಬರಲಿರುವ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯ ಕರ್ತರಿಗಾಗಿ 7000 ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಪಕ್ಷದ ಮುಖಂಡರು, ಶಾಸಕರು, ಮಾಜಿ ಶಾಸಕರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಹಲವು ಪ್ರಮುಖ ನಾಯಕರು ತಮ್ಮ ಊರುಗಳಿಂದ ವಾಹನಗಳಲ್ಲಿ ಕರೆತರಲು ವ್ಯವಸ್ಥೆ ಕೂಡ ಮಾಡಲಾಗಿದೆ.
ಹೋಟೆಲ್, ರೆಸಾರ್ಟ್, ವಸತಿ ಗೃಹಗಳು ಭರ್ತಿಯಾಗಿವೆ. ಅಮೃತ ಮಹೋತ್ಸವಕ್ಕೆ ಆಗಮಿಸುವ ಜನರಿಗಾಗಿ ದಾವಣಗೆರೆ ನಗರ ಮತ್ತು ಸುತ್ತಮುತ್ತಲಿನ ಹೋಟೆಲ್, ರೆಸಾರ್ಟ್ ಮತ್ತು ವಸತಿ ಗೃಹಗಳ ಕೊಠಡಿಗಳು ಈಗಾಗಲೇ ಭರ್ತಿಯಾಗಿವೆ. ಪಕ್ಕದ ಊರುಗಳಲ್ಲೂ ಹೋಟೆಲ್ ಮತ್ತು ವಸತಿ ಗೃಹಗಳ ಕೊಠಡಿಗಳು ಬುಕ್ಕಿಂಗ್ ಆಗಿವೆ.

Translate »