ಒಂದೇ ಕುಟುಂಬದ ಮೂವರ ಬಲಿ ಪಡೆದ ಕಾರು ಅಪ್ರಾಪ್ತ(ಮಗ)ನಿಗೆ ಕಾರು ನೀಡಿದ ತಂದೆ ಜೈಲು ಪಾಲು
ಮೈಸೂರು

ಒಂದೇ ಕುಟುಂಬದ ಮೂವರ ಬಲಿ ಪಡೆದ ಕಾರು ಅಪ್ರಾಪ್ತ(ಮಗ)ನಿಗೆ ಕಾರು ನೀಡಿದ ತಂದೆ ಜೈಲು ಪಾಲು

December 15, 2020

ಮೈಸೂರು, ಡಿ.14-ಅಪ್ರಾಪ್ತನೋರ್ವ ಕಾರು ಚಾಲನೆ ಮಾಡಿ ಒಂದೇ ಕುಟುಂ ಬದ ಮೂವರನ್ನು ಬಲಿ ಪಡೆದ ಪ್ರಕರಣದಲ್ಲಿ ತನ್ನ ಅಪ್ರಾಪ್ತ ಮಗನಿಗೆ ಚಾಲನೆ ಮಾಡಲು ಕಾರು ನೀಡಿದ್ದ ತಂದೆ ಜೈಲು ಸೇರಿದ್ದಾರೆ. ಕಳೆದ ಗುರುವಾರ ರಾತ್ರಿ 9.30ರ ಸುಮಾರಿನಲ್ಲಿ ಮೈಸೂರು-ಬೆಂಗಳೂರು ರಸ್ತೆಯ ದಂಡಿನ ಮಾರಮ್ಮನ ದೇವಸ್ಥಾನದ ಬಳಿ ಅಪ್ರಾಪ್ತ ಬಾಲಕ ಚಾಲನೆ ಮಾಡಿದ ಕಾರು ಬೈಕ್‍ಗೆ ಡಿಕ್ಕಿ ಹೊಡೆದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದರು. ಅಪಘಾತ ನಡೆಸಿದ ಕಾರು ಹಿನಕಲ್‍ನಲ್ಲಿರುವ ಕಾರು ಕಂಪನಿಗೆ ಸೇರಿದ್ದಾಗಿದ್ದು, ಗ್ರಾಹಕರಿಗೆ ಟ್ರಯಲ್ ನೀಡುವ ಕಾರನ್ನು ತೆಗೆದುಕೊಂಡು ಬಂದಿದ್ದ ಕಂಪನಿಯ ಸೇಲ್ಸ್ ಮ್ಯಾನೇಜರ್ ತನ್ನ ಮಗನಿಗೆ ಚಾಲನೆ ಮಾಡಲು ಕಾರನ್ನು ಕೊಟ್ಟಿದ್ದರು.

ಈ ಕಾರು ಅಪಘಾತವಾಗಿ 3 ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ 304ರಡಿ ಎನ್.ಆರ್.ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿ ದ್ದರು. ಕಾರು ಚಾಲನೆ ಮಾಡಿದ್ದ ಬಾಲಕ ಮತ್ತು ಆತನಿಗೆ ಕಾರನ್ನು ನೀಡಿದ್ದ ತಂದೆಯನ್ನು ಬಂಧಿಸಲಾಗಿದೆ. ಬಾಲಕನನ್ನು ಬಾಲಕರ ಬಾಲ ಮಂದಿರಕ್ಕೆ ರವಾ ನಿಸಲಾಗಿದ್ದು, ತಂದೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಅಪ್ರಾಪ್ತ ಬಾಲಕರಿಗೆ ಹಾಗೂ ಡ್ರೈವಿಂಗ್ ಲೈಸೆನ್ಸ್ ಇಲ್ಲದವರಿಗೆ ವಾಹನಗಳನ್ನು ನೀಡುವುದು ಸಂಚಾರ ನಿಯಮದಂತೆ ಅಪರಾಧವಾಗುತ್ತದೆ. ವಾಹನ ಅಪಘಾತ ವಾಗಿ ಸಾವು ಸಂಭವಿಸಿದರೆ ಭಾರತೀಯ ದಂಡ ಸಂಹಿತೆ 304ರಡಿ ಪ್ರಕರಣ ದಾಖಲಾಗುತ್ತದೆ. ಸುಪ್ರೀಂಕೋರ್ಟ್ ಆದೇಶದಂತೆ ಅಪ್ರಾಪ್ತರು ವಾಹನ ಚಾಲನೆ ಮಾಡಿದರೆ ವಾಹನದ ಮಾಲೀಕರ ಮೇಲೆ ಪ್ರಕರಣ ದಾಖಲಿಸಿ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ. ಅಪಘಾತ ನಡೆಯದಿದ್ದರೂ ಕೂಡ ಅಪ್ರಾಪ್ತರು ವಾಹನ ಚಲಾಯಿಸಿದರೆ ವಾಹನ ಮಾಲೀಕರ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಲೇಬೇಕು ಎಂಬುದು ಕಾನೂನು. ಈ ಕಾನೂನನ್ನು ಮೈಸೂರು ನಗರ ಸಂಚಾರ ಪೊಲೀಸರು ಕಟ್ಟು ನಿಟ್ಟಾಗಿ ಪಾಲಿಸುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಆದ್ದರಿಂದ ವಾಹನ ಮಾಲೀಕರು ಅಪ್ರಾಪ್ತರಿಗೆ ಹಾಗೂ ಡ್ರೈವಿಂಗ್ ಲೈಸೆನ್ಸ್ ಇಲ್ಲದವರಿಗೆ ವಾಹನವನ್ನು ನೀಡದೇ ಇರುವುದು ಉತ್ತಮ. ಒಂದು ವೇಳೆ ವಾಹನವನ್ನು ಕೊಟ್ಟು ಅಪಘಾತ ನಡೆದು ಸಾವು ಸಂಭವಿಸಿದರೆ ವಾಹನ ಮಾಲೀಕರು ಜೈಲು ಸೇರುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು `ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »