ಕೋವಿಡ್-19 ವಿರುದ್ಧದ ಹೋರಾಟ ಸಮಾಜದ ನಡವಳಿಕೆ ಮೇಲೆ ನಿಂತಿದೆ: ಸುತ್ತೂರು ಶ್ರೀ
ಮೈಸೂರು

ಕೋವಿಡ್-19 ವಿರುದ್ಧದ ಹೋರಾಟ ಸಮಾಜದ ನಡವಳಿಕೆ ಮೇಲೆ ನಿಂತಿದೆ: ಸುತ್ತೂರು ಶ್ರೀ

March 25, 2020

ಮೈಸೂರು,ಮಾ.24(ಎಸ್‍ಪಿಎನ್)-ನೊವೆಲ್ ಕೋವಿಡ್-19 ವೈರಾಣು ಹರಡುವಿಕೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಇದು ಮಾರಣಾಂತಿಕ ಸಾಂಕ್ರಾಮಿಕ ರೋಗವಾಗಿದೆ. ಜನತೆ `ಸಾಮಾಜಿಕ ಅಂತರ ಕಾಯ್ದು ಕೊಂಡು’ ಸೋಂಕು ಹರಡದಂತೆ ಜಾಗ್ರತೆ ವಹಿಸಬೇಕು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಿವಿಮಾತು ಹೇಳಿದ್ದಾರೆ.

ಕೋವಿಡ್-19 ಸೋಂಕಿನ ವಿರುದ್ಧ ಜನತೆ ಭಯಪಡ ಬೇಕಿಲ್ಲ. ಬದಲಾಗಿ ಪರಿಸ್ಥಿತಿಯ ಸೂಕ್ಷ್ಮತೆ ಅರಿತು, ಸೋಂಕು ಹರಡುವಿಕೆಯ ತೀವ್ರತೆ ತಗ್ಗಿಸಲು ಯಾವುದೇ ವ್ಯಕ್ತಿಗಳಿಂದ ಕನಿಷ್ಠ ಮಟ್ಟದ ಅಂತರವನ್ನಾದರೂ ಕಾಯ್ದು ಕೊಳ್ಳಬೇಕು ಎಂದಿದ್ದಾರೆ.

ಕೊರೊನಾ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರ್ಪಕ ನಿರ್ಧಾರಗಳನ್ನು ತೆಗೆದುಕೊಂಡು, ಸಮರೋಪಾದಿ ಕೆಲಸ ಮಾಡುತ್ತಿವೆ. ಇಡೀ ರಾಷ್ಟ್ರದಲ್ಲಿ ಅಗತ್ಯ ಸೇವೆಗಳ ಹೊರತಾಗಿ ಉಳಿದೆಲ್ಲವೂ ಸ್ತಬ್ಧವಾಗಿದೆ. ಸಮಸ್ತ ಭಾರತೀಯರ ಆರೋಗ್ಯ ದೃಷ್ಟಿಯಿಂದ ಕರ್ನಾಟಕದಲ್ಲಿ ಜನ Àಂದಣಿ ಸೇರದಂತೆ ಸಂಚಾರವನ್ನೇ ಸ್ತಬ್ಧಗೊಳಿಸಲಾಗಿದೆ. ಇಂಥ ಸಂದರ್ಭದಲ್ಲಿ ಜನರಿಗೂ ಅಷ್ಟೇ ಸಾಮಾಜಿಕ ಜವಾಬ್ದಾರಿಯಿದೆ. ಪ್ರತಿವ್ಯಕ್ತಿ, ಕುಟುಂಬ ಹಾಗೂ ಇಡೀ ಸಮಾಜದ ಸಾಮಾಜಿಕ ನಡವಳಿಕೆ ಮೇಲೆ ಕೋವಿಡ್-19ರ ವಿರುದ್ಧದ ಹೋರಾಟ ನಿಂತಿದೆ ಎಂದು ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರಳ ಯುಗಾದಿ: ಸರ್ಕಾರ ಜಾರಿಗೊಳಿಸಿರುವ ಲಾಕ್‍ಡೌನ್ ಕ್ರಮವನ್ನು ಜನರು ಒತ್ತಾಯದ ಗೃಹಬಂಧನ ಎಂದು ಭಾವಿಸದೇ, ನಮ್ಮ ಆರೋಗ್ಯಕ್ಕಾಗಿ ಕೈಗೊಂಡಿರುವ ಕ್ರಮ ಎಂದು ಅರ್ಥ ಮಾಡಿಕೊಳ್ಳಿ. ಸರ್ಕಾರ ಕಾಲಕಾಲಕ್ಕೆ ನೀಡುವ ಸಲಹೆ-ಸೂಚನೆಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಿ. ಮನೆಯಲ್ಲಿ ಎಲ್ಲಾ ಕುಟುಂಬ ಸದಸ್ಯರೊಂದಿಗಿದ್ದು, ಬಾಂಧವ್ಯವನ್ನು ಇನ್ನಷ್ಟು ಉತ್ತಮ ಪಡಿಸಿಕೊಳ್ಳಿ. ನಾಳಿನ ಯುಗಾದಿಯನ್ನು ಸರಳವಾಗಿ ಆಚರಿಸಿ. ಹೊಸವರ್ಷ ಆಹ್ಲಾದಕರವಾಗಿರಲು ಭಗವಂತನಲ್ಲಿ ಪ್ರಾರ್ಥಿಸಿ ಎಂದು ಸಲಹೆ ನೀಡಿದ್ದಾರೆ.

Translate »