ಪಾಲಿಕೆ ಅಭಯ ತಂಡದಿಂದ ರಾಸಾಯನಿಕ ಸಿಂಪಡಣೆ
ಮೈಸೂರು

ಪಾಲಿಕೆ ಅಭಯ ತಂಡದಿಂದ ರಾಸಾಯನಿಕ ಸಿಂಪಡಣೆ

March 25, 2020

ಮೈಸೂರು, ಮಾ. 24(ಆರ್‍ಕೆ)- ಕೋವಿಡ್-19 (ಕೊರೊನಾ ವೈರಸ್ ಡಿಸೀಸ್) ಮಾರಣಾಂತಿಕ ವೈರಾಣು ಹರಡುವ ಭೀತಿ ಉಂಟಾಗಿರುವ ಕಾರಣ, ಮೈಸೂರು ಮಹಾನಗರ ಪಾಲಿಕೆಯ ಅಭಯ ತಂಡವು ನಗರದಾದ್ಯಂತ ಎಲ್ಲಾ ವಾರ್ಡುಗಳಲ್ಲಿ ರಾಸಾಯನಿಕ ಸಿಂಪಡಿಸಿತು.

ಪಾಲಿಕೆ ಆರೋಗ್ಯಾಧಿಕಾರಿಗಳಾದ ಡಾ.ಜಯಂತ್, ಡಾ.ನಾಗರಾಜ್, ಅಭಿವೃದ್ಧಿ ಅಧಿಕಾರಿಗಳಾದ ಸತ್ಯಮೂರ್ತಿ, ಸುನಿಲ್, ನಾಗರಾಜು ಹಾಗೂ ಇಂದು ಬೆಳಿಗ್ಗೆ ಮೈಸೂರು ನಗರದ ಎಲ್ಲಾ 65 ವಾರ್ಡ್‍ಗಳಲ್ಲೂ ಉಪಕರಣ ಬಳಸಿ ಸಾಂಕ್ರಾಮಿಕ ರೋಗ ನಿಯಂತ್ರಿಸಲು ರಾಸಾಯನಿಕವನ್ನು ಅಭಯ ತಂಡದ ಸಿಬ್ಬಂದಿ ಸಿಂಪಡಿಸಿದರು.

ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ ಅವರು ಕುವೆಂಪುನಗರದ ಜೋಡಿ ರಸ್ತೆಯ ವಿಜಯಾ ಬ್ಯಾಂಕ್ ಸರ್ಕಲ್, ನ್ಯೂ ಕಾಂತರಾಜ ಅರಸ್ ರಸ್ತೆ, ಸರಸ್ವತಿಪುರಂ, ಟಿ.ಕೆ. ಲೇಔಟ್, ಕುಕ್ಕರಹಳ್ಳಿ ಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿನ ಪಾರ್ಕು, ರಸ್ತೆ, ಮೋರಿಗಳಲ್ಲಿ ಔಷಧ ಸಿಂಪಡಿಸಿದರು.

ಆಕಾಶವಾಣಿ ಸರ್ಕಲ್, ಯಾದವಗಿರಿ, ವಿವಿ ಮೊಹಲ್ಲಾ, ಜಯಲಕ್ಷ್ಮಿಪುರಂ, ಗೋಕುಲಂ, ಪಡುವಾರಹಳ್ಳಿ ಸೇರಿದಂತೆ ವಿವಿಧೆಡೆ ಅಭಿವೃದ್ಧಿ ಅಧಿಕಾರಿಗಳು ತಮ್ಮ ಸಿಬ್ಬಂದಿಗಳೊಂದಿಗೆ ಔಷಧಿ ಸಿಂಪಡಿಸಿ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಿದರು.

ಉಳಿದಂತೆ ಅಭಿವೃದ್ಧಿ ಅಧಿಕಾರಿ ನಾಗರಾಜ್ ಅವರು ಮೇಟಗಳ್ಳಿ, ಹೆಬ್ಬಾಳು, ವಿಜಯ ನಗರ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 7ರಿಂದ 11 ಗಂಟೆವರೆಗೆ ಅಭಯ ತಂಡದ ಸಿಬ್ಬಂದಿ ಮೂಲಕ ಸಾಂಕ್ರಾಮಿಕ ರೋಗಗಳು ಹರಡದಂತೆ ಹಾಗೂ ಸೊಳ್ಳೆಗಳ ಸಂತತಿ ಉತ್ಪತ್ತಿಯಾಗದಂತೆ ಕ್ರಮ ವಹಿಸಿದರು. ಅದೇ ರೀತಿ ಸಾರ್ವಜನಿಕರು ಓಡಾಡುವ ಹಾಗೂ ಎಟಿಎಂ ಕೇಂದ್ರಗಳಲ್ಲೂ ಔಷಧ ಸಿಂಪಡಿಸಿ ಸ್ಯಾನಿಟೇಷನ್ ಕಾರ್ಯವನ್ನು ಮೈಸೂರು ನಗರದಾದ್ಯಂತ ಪಾಲಿಕೆ ಸಿಬ್ಬಂದಿ ಇಂದು ನಡೆಸಿದರು.