`ಲಾಕ್‍ಡೌನ್’ನಿಂದ ಕಷ್ಟಕ್ಕೆ ಸಿಲುಕಿದವರಿಗೆ ಸಹಾಯಹಸ್ತ ಚಾಚಿದ ಜನಸ್ಪಂದನ ಟ್ರಸ್ಟ್
ಮೈಸೂರು

`ಲಾಕ್‍ಡೌನ್’ನಿಂದ ಕಷ್ಟಕ್ಕೆ ಸಿಲುಕಿದವರಿಗೆ ಸಹಾಯಹಸ್ತ ಚಾಚಿದ ಜನಸ್ಪಂದನ ಟ್ರಸ್ಟ್

March 25, 2020

ಇಂದಿನಿಂದ ಉಚಿತ ನೀರು, ಆಹಾರ, ಮಾಸ್ಕ್ ವಿತರಣೆ
ಮೈಸೂರು, ಮಾ.24(ಆರ್‍ಕೆಬಿ)- ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವುದಕ್ಕಾಗಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ಸಂಪೂರ್ಣ `ಲಾಕ್‍ಡೌನ್’ ಜಾರಿಗೊಳಿಸಿದೆ. ಕೂಲಿಗಾಗಿ ಮೈಸೂರಿಗೆ ಬಂದಿರುವ ಕಾರ್ಮಿಕರು, ಲಾಕ್‍ಡೌನ್ ಹಿನ್ನೆಲೆಯಲ್ಲಿ ರೈಲು ಮತ್ತು ಸಾರಿಗೆ ವ್ಯವಸ್ಥೆ ಇಲ್ಲದೆ, ತಮ್ಮ ಊರುಗಳಿಗೆ ಹೋಗಲಾಗದೆ, ದುಡಿಯಲು ಕೂಲಿಯೂ ಇಲ್ಲದೆ, ಊಟೋಪಚಾರಕ್ಕೆ ಹಣವೂ ಇಲ್ಲದ ಪರಿಸ್ಥಿತಿಯಲ್ಲಿ ಪರದಾಡುತ್ತಿದ್ದಾರೆ.

ಇವರಿಗೆ ನೆರವಾಗುವ ಬಗ್ಗೆ ಸಭೆ ನಡೆಸಿ ಚರ್ಚಿಸಿದ ಜನಸ್ಪಂದನ ಟ್ರಸ್ಟ್ ಮಾ.25 ರಿಂದ ಮಾ.31ರವರೆಗೆ ನೆರವಾಗಲಿದೆ. ಸಂಕಷ್ಟಕ್ಕೆ ಸಿಲುಕಿರುವ ನಿರ್ಗತಿಕರು, ಅಶಕ್ತರು, ವಯೋವೃದ್ಧರು, ಮಾನಸಿಕ ಅಸ್ವಸ್ಥರಿಗೆ ಉಚಿತ ಮಾಸ್ಕ್, ಕುಡಿಯುವ ನೀರು, ಆಹಾರ, ಸಿಹಿ ತಿನಿಸು ಮತ್ತು ಸ್ಯಾನಿಟೈಜರನ್ನು ಅವರಿರುವ ಸ್ಥಳಕ್ಕೇ ತೆರಳಿ ಉಚಿತವಾಗಿ ವಿತರಿಸಲಾಗುವುದು. ಈ ಸೇವಾ ಕಾರ್ಯಕ್ಕೆ ಟ್ರಸ್ಟ್ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದಿದೆ. ಮೊ. 9448042005 / 9886752274 / 9742833794 ಸಂಖ್ಯೆಗೆ ಕರೆ ಮಾಡಿ ಕಷ್ಟಕ್ಕೆ ಸಿಲುಕಿದವರ ಬಗ್ಗೆ ಮಾಹಿತಿ ನೀಡಬಹುದು ಎಂದು ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷರೂ ಆದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸುದ್ದಿಗಾರರಿಗೆ ತಿಳಿಸಿದರು.

ಅಲ್ಲದೇ, ಸೋಮಶೇಖರ್ ಅವರು, ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‍ಗೆ ಹಣ ಪಾವತಿಸಿ ಬಡವರಿಗೆ ಉಚಿತ ಊಟದ ವ್ಯವಸ್ಥೆಯನ್ನೂ ಕಲ್ಪಿಸಿದರು.

Translate »