ಮೈಸೂರು, ಮಾ.24(ಪಿಎಂ)- ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪೌರಕಾರ್ಮಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಅವರ ಕೆಲಸದ ಸಮಯವನ್ನು ಮೈಸೂರು ಮಹಾನಗರ ಪಾಲಿಕೆ ಕಡಿತಗೊಳಿಸಿದೆ.
ಬೆಳಿಗ್ಗೆ 6.30ರಿಂದ ಮಧ್ಯಾಹ್ನ 2ರವರೆಗೆ ಇದ್ದ ಪೌರ ಕಾರ್ಮಿಕರ ಕೆಲಸದ ಅವಧಿಯನ್ನು ಪ್ರತಿದಿನ ಬೆಳಿಗ್ಗೆ 6ರಿಂದ ಬೆಳಿಗ್ಗೆ 10.30ರವರೆಗೆ ಹಾಗೂ ಒಳಚರಂಡಿ ಪೌರಕಾರ್ಮಿಕರ ಕೆಲಸದ ವೇಳೆಯನ್ನು ಬೆಳಿಗ್ಗೆ 8ರಿಂದ ಸಂಜೆ 4ರ ಬದಲಿಗೆ ಪ್ರತಿದಿನ ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ನಿಗದಿಪಡಿಸಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.
ಅಲ್ಲದೇ, ಪೌರಕಾರ್ಮಿಕರ ಸುರಕ್ಷತೆಗಾಗಿ ಹಲವು ಕಟ್ಟುನಿಟ್ಟಿನ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಸ್ವಚ್ಛತಾ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪೌರಕಾರ್ಮಿಕರು ಕಡ್ಡಾಯವಾಗಿ ಹ್ಯಾಂಡ್‍ಗ್ಲೌಸ್, ಮಾಸ್ಕ್, ಬೂಟ್‍ಗಳನ್ನು ಧರಿಸಿಯೇ ಕೆಲಸ ನಿರ್ವಹಿಸುವಂತೆ ನೋಡಿ ಕೊಳ್ಳಬೇಕು. ಅಗತ್ಯ ಇರುವಷ್ಟು ಹ್ಯಾಂಡ್‍ಗ್ಲೌಸ್, ಮಾಸ್ಕ್ ಗಳನ್ನು ಒದಗಿಸಬೇಕು ಎಂದು ಪಾಲಿಕೆ ಆರೋಗ್ಯಾಧಿ ಕಾರಿಗೆ ಆಯುಕ್ತರು ನಿರ್ದೇಶನ ನೀಡಿದ್ದಾರೆ.
ಪೌರಕಾರ್ಮಿಕರಿಗೆ ಹ್ಯಾಂಡ್ ಸ್ಯಾನಿಟೈಸರ್ ಅಥವಾ ಲಿಕ್ವಿಡ್ ಸೋಪ್ ಅನ್ನು ಒದಗಿಸಬೇಕು. ಅಷ್ಟೇ ಅಲ್ಲದೇ, ಪೌರಕಾರ್ಮಿಕರು ಅವನ್ನು ನಿಯಮಿತವಾಗಿ ಬಳಸು ತ್ತಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಖಾತರಿಪಡಿಸಿ ಕೊಳ್ಳಬೇಕು. ಪೌರಕಾರ್ಮಿಕರು ಹಾಗೂ ಅವರ ಕುಟುಂಬದವ ರಲ್ಲಿ ಜ್ವರ, ಶೀತ, ಕೆಮ್ಮು ಕಂಡು ಬಂದಲ್ಲಿ ಕೂಡಲೇ ಅವರನ್ನು ಆರೋಗ್ಯ ತಪಾಸಣೆಗೊಳಪಡಿಸಿ ಅಗತ್ಯ ಚಿಕಿತ್ಸೆ ಕೊಡಿಸಬೇಕು ಎಂದು ಸೂಚನೆ ನೀಡಿದ್ದಾರೆ. ಮನೆಗಳಿಂದ ಘನತ್ಯಾಜ್ಯ ಸಂಗ್ರಹಣೆ ವೇಳೆ ಪೌರಕಾರ್ಮಿಕರು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಜೊತೆಗೆ ಅಂತರ ಕಾಯ್ದುಕೊಳ್ಳಬೇಕು. ಈ ವಿಚಾರದಲ್ಲೂ ಅಧಿಕಾರಿ ಗಳು ನಿಗಾ ಇಡಬೇಕು ಎಂದು ಆಯುಕ್ತರು ಆದೇಶಿಸಿದ್ದಾರೆ.