ಮೈಸೂರು,ಮಾ.28(ಪಿಎಂ)- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಗಳನ್ನು ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ದೇಶವ್ಯಾಪಿ ಮುಷ್ಕರಕ್ಕೆ ಮೊದಲ ದಿನವಾದ ಸೋಮವಾರ ಮೈಸೂರು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಜಿಲ್ಲೆಯ ಕೈಗಾರಿಕೆಗಳಲ್ಲಿ ಶೇ.80ರಷ್ಟು ಕಾರ್ಮಿ ಕರು ಕರ್ತವ್ಯ ಕೈಬಿಟ್ಟು ಸಾಂಕೇತಿಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅಂತೆಯೇ ಬ್ಯಾಂಕ್, ವಿಮೆ ಮತ್ತು ಅಂಚೆ ಇಲಾಖೆ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ವಹಿವಾಟಿನಲ್ಲೂ ವ್ಯತ್ಯಯ ಉಂಟಾಗಿತ್ತು. ನಾಳೆಯೂ ಇದೇ ಪರಿಸ್ಥಿತಿ ಬ್ಯಾಂಕ್ ಗಳಲ್ಲಿ ಬಹುತೇಕ ಇರಲಿದೆ. ಇಂದು ವಿವಿಧ ಬ್ಯಾಂಕ್ ನೌಕರರೂ ಸಾಂಕೇತಿಕ ಪ್ರತಿಭಟನೆ ನಡೆಸಿದರು. ವಿಮಾ ಕಚೇರಿ, ಬ್ಯಾಂಕ್‍ಗಳು ಸೇರಿದಂತೆ ಕೈಗಾರಿಕೆಗಳು ಹಲವೆಡೆ ಬಂದ್ ಆಗಿದ್ದರೆ, ಕೆಲವೆಡೆ ತೆರೆದಿದ್ದರೂ ಕಾರ್ಮಿಕರು, ನೌಕರರಲ್ಲಿ ಬಹುತೇಕರು ಗೈರಿದ್ದ ಕಾರಣ ಪೂರ್ಣ ಪ್ರಮಾಣದ ಕಾರ್ಯಚುಟವಟಿಕೆ ಕಂಡುಬರಲಿಲ್ಲ. ಕಾರ್ಮಿಕ ಸಂಘ ಟನೆಗಳ ಜಂಟಿ ಸಮಿತಿ ಮೈಸೂರು ಜಿಲ್ಲೆಯಲ್ಲಿ ಮುಷ್ಕರ ಯಶಸ್ವಿಗೊಳಿಸಲು ಮುಂದಾ ಗಿದ್ದು, ಇದರ ನೇತೃತ್ವದಲ್ಲಿ ಮೈಸೂರು ಡಿಸಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಲಾಯಿತು. ಅಂತೆಯೇ ಆಯಾಯ ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಯಿತು. ಮೈಸೂರು ಡಿಸಿ ಕಚೇರಿ ಎದುರು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಇಂದು ಜಮಾಯಿಸಿದ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಮಿಕರು, ಬ್ಯಾಂಕ್ ನೌಕರರು ಮಧ್ಯಾಹ್ನ 1ರವರೆಗೆ ಪ್ರತಿಭಟನೆ ನಡೆಸಿದರು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಬೇಕು. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಕೇಂದ್ರೀಯ ಅಬಕಾರಿ ತೆರಿಗೆ ಕಡಿಮೆ ಮಾಡಬೇಕು. ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಪ್ರತಿ ಕುಟುಂಬಕ್ಕೆ ಮಾಸಿಕ 7,500 ರೂ. ನೇರ ನಗದು ನೆರವು ನೀಡಬೇಕು. ಅಲ್ಲದೆ, ಈ ಕುಟುಂಬದ ಪ್ರತಿ ವ್ಯಕ್ತಿಗೂ ತಲಾ 10 ಕೆಜಿ ಆಹಾರ ಧಾನ್ಯ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ವಿದ್ಯುತ್ ಖಾಸಗೀಕರಣ ಸಂಬಂಧದ ತಿದ್ದುಪಡಿ ಮಸೂದೆ ವಾಪಸ್ಸು ಪಡೆಯಬೇಕು. ಶಾಸನಬದ್ಧ ಬೆಂಬಲ ಬೆಲೆ ಕಾಯ್ದೆ ರೂಪಿಸಬೇಕು. ರಾಜ್ಯ ಸರ್ಕಾರವೂ ರೈತ ಮತ್ತು ಜನ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ಖಾಸಗೀಕರಣ ಕೈಬಿಟ್ಟು, ನಗದೀಕರಣ ನಿರ್ಧಾರದಿಂದ ಹಿಂದೆ ಸರಿಯಬೇಕು. ಅಂಗನವಾಡಿ, ಆಶಾ, ಬಿಸಿಯೂಟ ಮತ್ತು ಇತರೆ ಸ್ಕೀಂ ನೌಕರರಿಗೆ ಶಾಸನಬದ್ಧ ಕನಿಷ್ಠ ವೇತನ ಮತ್ತು ಸೇವಾ ಭದ್ರತೆ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.500ಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಕಾರ್ಖಾನೆ ಕಾರ್ಮಿಕರು, ಬ್ಯಾಂಕ್, ಅಂಚೆ ಮತ್ತು ಎಲ್‍ಐಸಿ ನೌಕರರು, ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಅಂತ್ಯಗೊಳಿಸಿದರು. ಸಿಐಟಿಯು ಮುಖಂಡ ಜಯರಾಮ್, ಐಎನ್‍ಟಿಯುಸಿ ಜಿಲ್ಲಾಧ್ಯಕ್ಷ ಅರುಣ್‍ಕುಮಾರ್, ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯೆ ಉಮಾದೇವಿ, ರಾಜ್ಯ ರೈತ ಸಂಘದ ಮೈಸೂರು ತಾಲೂಕು ಅಧ್ಯಕ್ಷ ಮರಂಕಯ್ಯ, ವಿಮಾ ನಿಗಮ ನೌಕರರ ಸಂಘದ ಮೈಸೂರು ವಿಭಾಗದ ಅಧ್ಯಕ್ಷ ಎಸ್.ಕೆ.ರಾಮು, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ನಾಗೇಶ್, ಮೈಸೂರು ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ಹೆಚ್.ಬಾಲಕೃಷ್ಣ, ದಸಂಸ ಮುಖಂಡ ಚೋರನಹಳ್ಳಿ ಶಿವಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.