ಹುಲಿಗೆ ಕಾಫಿ ತೋಟದ ಕಾರ್ಮಿಕ ಬಲಿ
ಕೊಡಗು

ಹುಲಿಗೆ ಕಾಫಿ ತೋಟದ ಕಾರ್ಮಿಕ ಬಲಿ

March 29, 2022

ವಿರಾಜಪೇಟೆ,ಮಾ.28-ಹುಲಿ ದಾಳಿಗೆ ತೋಟದ ಕಾರ್ಮಿಕನೋರ್ವ ಬಲಿಯಾಗಿರುವ ಘಟನೆ ವಿರಾಜಪೇಟೆ ತಾಲೂಕಿನ 1ನೇ ರುದ್ರು ಗುಪ್ಪೆ ಗ್ರಾಮದಲ್ಲಿ ಸೋಮ ವಾರ ಸಂಜೆ ನಡೆದಿದೆ.

ಮೂಲತಃ ಗೋಣಿಕೊಪ್ಪ ಅತ್ತೂರು ಗ್ರಾಮದ ಗದ್ದೆ ಮನೆ ನಿವಾಸಿ ಎರವರ ಗಣೇಶ್ ಪುಟ್ಟು (29) ಹುಲಿ ದಾಳಿಗೆ ಬಲಿಯಾದವನಾಗಿದ್ದು, ಘಟನೆಯಿಂದ ಕೊಡಗು ಜಿಲ್ಲೆ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ.

ಘಟನೆ ವಿವರ: ವಿರಾಜಪೇಟೆ 1ನೇ ರುದ್ರು ಗುಪ್ಪೆ ಗ್ರಾಮ ನಿವಾಸಿ ಕೊಂಗಂಡ ಅಯ್ಯಪ್ಪ ಅವರ ತೋಟದಲ್ಲಿ ಗಣೇಶ್‍ಪುಟ್ಟು ಅವರು ಕರಿಮೆಣಸು ಕುಯ್ಯುವ ಕೆಲಸ ಮಾಡುತ್ತಿದ್ದರು. ಸೋಮವಾರ ಸಂಜೆ 4 ಗಂಟೆಯ ಸಮಯದಲ್ಲಿ ತೋಟ ದೊಳಗಿದ್ದ ಹುಲಿ ಏಕಾಏಕಿ ಗಣೇಶ್ ಮೇಲೆ ದಾಳಿ ಮಾಡಿ ತಲೆಯ ಭಾಗಕ್ಕೆ ಕಚ್ಚಿದ್ದು, ಗಣೇಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ವಿರಾಜಪೇಟೆ ವಲಯ ಅರಣ್ಯಾಧಿಕಾರಿಗಳು, ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಹುಲಿ ದಾಳಿಗೆ ವ್ಯಕ್ತಿ ಬಲಿಯಾದ ಸುದ್ದಿ ತಿಳಿದು ಸುತ್ತ ಮುತ್ತಲಿನ ಗ್ರಾಮಗಳ ಜನರು ಮತ್ತು ರೈತ ಸಂಘದ ಪ್ರಮುಖರು ಸ್ಥಳದಲ್ಲಿ ಜಮಾಯಿಸಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಅರಣ್ಯ ಇಲಾಖೆ ಅಧಿಕಾರಿಗಳು ತರಾತುರಿಯಲ್ಲಿ ಮೃತ ದೇಹ ವನ್ನು ಸ್ಥಳದಿಂದ ಸಾಗಿಸಲು ಮುಂದಾ ಗಿದ್ದರು ಎನ್ನಲಾಗಿದ್ದು, ಇದಕ್ಕೂ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕೂಲಿ ಕಾರ್ಮಿಕ ಗಣೇಶ್ ಬಲಿಯಾದ ಸ್ಥಳದಲ್ಲೇ ಕಳೆದ 10 ದಿನದ ಹಿಂದೆ ಅಲ್ಲಿನ ನಿವಾಸಿ ಆಟ್ರಂಗಡ ಸುಬ್ಬಯ್ಯ ಎಂಬವರಿಗೆ ಸೇರಿದ ಕರು ಕೂಡ ಹುಲಿ ದಾಳಿಗೆ ಬಲಿಯಾಗಿತ್ತು. ಅರಣ್ಯ ಇಲಾಖೆ ಮಾತ್ರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇದೀಗ ಕಾರ್ಮಿಕ ಜೀವ ಕಳೆದು ಕೊಳ್ಳುವಂತಾಗಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿ ಗಳು ಹಾಗೂ ಸಿಬ್ಬಂದಿ ವಿರುದ್ಧ ಹರಿಹಾಯ್ದರು. ಸ್ಥಳಕ್ಕೆ ಸಿಸಿಎಫ್ ಅಥವಾ ಉನ್ನತ ಮಟ್ಟದ ಅಧಿಕಾರಿಗಳು ಆಗಮಿಸಬೇಕು. ಇಲ್ಲವಾದಲ್ಲಿ ಮೃತದೇಹವನ್ನು ಸ್ಥಳದಿಂದ ತೆರವುಗೊಳಿಸಲು ಬಿಡುವುದಿಲ್ಲ ಎಂದು ಸಾರ್ವಜನಿಕರು ಪಟ್ಟು ಹಿಡಿದಿದ್ದು, ಸ್ಥಳದಲ್ಲೇ ಪ್ರತಿಭಟನೆ ನಡೆಸುತ್ತಿದ್ದಾರೆ.

Translate »