ಬೆಂಗಳೂರು, ಮಾ. 28(ಕೆಎಂಶಿ)- ಪ್ರವಾಸೋ ದ್ಯಮ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಒತ್ತು ಕೊಡುವ ವಿಶ್ವ ದರ್ಜೆಯ ಬೆಂಗಳೂರು-ಮೈಸೂರು ದಶಪಥ ರಸ್ತೆ ದಸರಾ ವೇಳೆಗೆ ಲೋಕಾರ್ಪಣೆಯಾಗಲಿದೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಮೊದಲ ಹಂತ ದಲ್ಲಿ ಬೆಂಗಳೂರು-ನಿಡಘಟ್ಟ ರಸ್ತೆ ಪೂರ್ಣಗೊಳ್ಳಲಿದೆ, ಎರಡನೇ ಹಂತ ದಲ್ಲಿ ನಿಡಘಟ್ಟ-ಮೈಸೂರು ಮಾರ್ಗದ ರಸ್ತೆ ನಿರ್ಮಾಣಗೊಳ್ಳುತ್ತಿದೆ ಎಂದಿದ್ದಾರೆ. ಒಟ್ಟು 8,350 ಕೋಟಿ ರೂ. ವೆಚ್ಚದ ದಶಪಥ ರಸ್ತೆಯ ಬಹು ತೇಕ ಕಾಮಗಾರಿಗಳು ಪೂರ್ಣಗೊಳ್ಳುತ್ತಿದ್ದು, ಮೊದಲ ಭಾಗ ನಿಗದಿತ ಸಮಯಕ್ಕಿಂತ ಮೊದಲೇ ಲೋಕಾರ್ಪಣೆಗೊಳ್ಳಲಿದೆ.
ಭ್ರಷ್ಟಾಚಾರ ರಹಿತ, ಪಾರದರ್ಶಕ ಹಾಗೂ ಕಾಲಮಿತಿಯೊಳಗೆ ಮೂಲಸೌಕರ್ಯ ಇಲಾಖೆ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ನೂರಾ ಹದಿನೇಳು ಕಿಲೋ ಮೀಟರ್ ಉದ್ದದ ಬೆಂಗ ಳೂರು-ಮೈಸೂರು ದಶಪಥ ರಸ್ತೆಯ ನಿರ್ಮಾಣ ಕಾಮಗಾರಿ ನಿರ್ದಿಷ್ಟ ವೇಗದಲ್ಲಿ ಸಾಗುತ್ತಿದ್ದು, ರಸ್ತೆ ಪೂರ್ಣಗೊಂಡ ನಂತರ 90 ನಿಮಿಷಗಳಲ್ಲಿ ಈ ಅಂತರವನ್ನು ಕ್ರಮಿಸಬಹುದಾಗಿದೆ. ಈ ಯೋಜನೆ ಯಡಿ 8 ಕಿಲೋ ಮೀಟರ್ ಉದ್ದದ ಮೇಲು ಸೇತುವೆ ಹಾಗೂ 9 ಪ್ರಮುಖ ಸೇತುವೆ ಗಳು, 42 ಸಣ್ಣ ಸೇತುವೆಗಳು, 64 ಅಂಡರ್‍ಪಾಸ್‍ಗಳು, 11 ಓವರ್‍ಪಾಸ್‍ಗಳು, 4 ಆರ್‍ಓಬಿಗಳು ಮತ್ತು 5 ಬೈಪಾಸ್‍ಗಳನ್ನು ನಿರ್ಮಿಸಲಾಗುತ್ತಿದೆ. ಈ ಮೂಲಸೌಕರ್ಯ ಗಳಿಂದ ಸಂಚಾರ ದಟ್ಟಣೆ ಇಲ್ಲದೆ ವಾಹನಗಳು ಸುಗಮವಾಗಿ ಸಾಗಲು ಅವಕಾಶ ಆಗುವುದಲ್ಲದೆ, ಈ ಯೋಜನೆ ಪರಿಸರ ಸ್ನೇಹಿಯೂ ಆಗಿರುತ್ತದೆ ಎಂದು ತಿಳಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಪ್ರಗತಿಪಥದಲ್ಲಿ ಸಾಗುತ್ತಿದ್ದು ಬೆಂಗಳೂರು-ಮೈಸೂರು ದಶಪಥ ರಸ್ತೆ ಸಹ ಪ್ರಗತಿಯ ಸಂಕೇತವಾಗಿದೆ ಎಂದು ನಿತಿನ್ ಗಡ್ಕರಿ ಬಣ್ಣಿಸಿದ್ದಾರೆ.