ಸುಸೂತ್ರವಾಗಿ ನಡೆದ SSಐಅ ಮೊದಲ ದಿನದ ಪರೀಕ್ಷೆ
ಮೈಸೂರು

ಸುಸೂತ್ರವಾಗಿ ನಡೆದ SSಐಅ ಮೊದಲ ದಿನದ ಪರೀಕ್ಷೆ

March 29, 2022

ಮೈಸೂರು, ಮಾ.28 (ಆರ್‍ಕೆ)- ರಾಜ್ಯಾದ್ಯಂತ ಎಸ್‍ಎಸ್ ಎಲ್‍ಸಿ ವಾರ್ಷಿಕ ಪರೀಕ್ಷೆಗಳು ಇಂದಿನಿಂದ ಆರಂಭಗೊಂಡಿವೆ.

ಮೈಸೂರು ನಗರದ 57 ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 149 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮೊದಲ ದಿನ ವಾದ ಸೋಮವಾರ ನಡೆದ ಪ್ರಥಮ ಭಾಷೆ ಪರೀಕ್ಷೆಗೆ ನೋಂದಣಿಯಾಗಿದ್ದ 38,138ರ ಪೈಕಿ 634 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ಉಳಿದವರು ಯಾವುದೇ ಗೊಂದಲ ವಿಲ್ಲದೇ ಸುಸೂತ್ರವಾಗಿ ಪರೀಕ್ಷೆ ಬರೆದರು. ಮೈಸೂರಿನ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ತಮ್ಮ ಕ್ಷೇತ್ರ ವ್ಯಾಪ್ತಿಯ ಸೇಂಟ್ ಮೇರಿಸ್ ಶಾಲೆ ಕೇಂದ್ರದಲ್ಲಿ ಗುಲಾಬಿ ಹೂ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಆತ್ಮೀಯ ವಾಗಿ ಬರಮಾಡಿಕೊಂಡು ಪೆನ್, ಚಾಕೊಲೇಟ್ ನೀಡಿ ನಿರಾ ತಂಕವಾಗಿ ಪರೀಕ್ಷೆ ಬರೆಯುವಂತೆ ಸ್ಥೈರ್ಯ ತುಂಬಿದರು. ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಸ್ಯಾನಿಟೈಸರ್‍ನಿಂದ ಕೈ ಸ್ವಚ್ಛಗೊಳಿಸಿ, ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಯಿತಲ್ಲದೇ ಮಾಸ್ಕ್ ತರದವರಿಗೆ ಶಿಕ್ಷಣ ಇಲಾಖೆಯಿಂದಲೇ ಮಾಸ್ಕ್ ವಿತರಿಸಿ ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ಸಲಹೆ ನೀಡಲಾಯಿತು. ಪ್ರತೀ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದು, ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದೆ. ಹಾಗೂ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಯಲ್ಲದೇ, ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಸೆಕ್ಷನ್ 144 ರೀತ್ಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಅದೇ ರೀತಿ ಸುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡ ಲಾಗಿದ್ದು, ವಿದ್ಯಾರ್ಥಿಗಳು, ಪರೀಕ್ಷಾ ಕರ್ತವ್ಯ ನಿರತರನ್ನು ಹೊರತು ಪಡಿಸಿ ಅನ್ಯ ವ್ಯಕ್ತಿಗಳು ಅತ್ತ ಸುಳಿಯದಂತೆ ಎಚ್ಚರ ವಹಿಸಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತೀ ಕೇಂದ್ರದಲ್ಲೂ ಹೆಲ್ಪ್ ಡೆಸ್ಕ್ ಸ್ಥಾಪಿಸಿ, ಕೊಠಡಿ ಸಂಖ್ಯೆ, ನೋಂದಣಿ ಸಂಖ್ಯೆ ಯಾವ ಕೊಠಡಿಯಲ್ಲಿದೆ ಎಂಬಿತ್ಯಾದಿ ಮಾಹಿತಿ ನೀಡಲಾಗುತ್ತಿದೆಯ ಲ್ಲದೇ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೆಎಸ್‍ಆರ್‍ಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇಅರಸ್ ಸೋಮವಾರ ಹಲವು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳಗ್ಗೆ 10.30ರಿಂದ 12.45ಗಂಟೆವರೆಗೆ ನಡೆದ ಪ್ರಥಮ ಭಾಷೆ ಪರೀಕ್ಷೆಯು ಯಾವುದೇ ಗೊಂದಲ, ಸಮಸ್ಯೆ ಗಳಿಲ್ಲದೇ ಶಾಂತಯುತವಾಗಿ ಮುಕ್ತಾಯಗೊಂಡಿದ್ದು, ವಿದ್ಯಾರ್ಥಿಗಳು ಸಂತೋಷದಿಂದ ಪರೀಕ್ಷೆ ಬರೆದು ಮನೆಗೆ ಮರಳಿದರು ಎಂದು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಶೌಚಾಲಯ, ಕುಡಿಯುವ ನೀರು, ಆರೋಗ್ಯ ಸೌಲಭ್ಯಗಳನ್ನು ಪರೀಕ್ಷಾ ಕೇಂದ್ರದಲ್ಲಿ ಒದಗಿಸಲಾಗಿದ್ದು, ಮಕ್ಕಳು ಗೊಂದಲವಿಲ್ಲದೇ ಪರೀಕ್ಷೆ ಬರೆಯುವಂತೆ ಶಿಕ್ಷಕರು ಧೈರ್ಯ ಹೇಳಿ, ಅವರಿಗೆ ಅಗತ್ಯವಿರುವ ಮಾಹಿತಿಗಳನ್ನು ನೀಡಲಾಯಿತು. ತಿ.ನರಸೀಪುರ ವಿದ್ಯೋದಯ ಶಿಕ್ಷಣ ಸಂಸ್ಥೆ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯೊಬ್ಬಳು ತೀವ್ರ ಹೃದಯಾಘಾತದಿಂದ ಕುಸಿದು ಸಾವನ್ನಪ್ಪಿರುವುದನ್ನು ಹೊರತುಪಡಿಸಿದರೆ, ಉಳಿದಂತೆ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ ಎಂದು ರಾಮಚಂದ್ರರಾಜೇ ಅರಸ್ ತಿಳಿಸಿದ್ದಾರೆ. ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಹಾಗೂ ಸಹಾಯ ಪಡೆಯಲು ಹೆಲ್ಪ್‍ಲೈನ್ ಸ್ಥಾಪಿಸಲಾಗಿದ್ದು, 080-23310075/76 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

Translate »