ಬೆಂಗಳೂರು, ಡಿ.7 (ಕೆಎಂಶಿ)-ಚಳಿಗಾಲದ ಅಧಿವೇಶನದ ಮೊದಲ ದಿನವಾದ ಇಂದು ವಿಧಾನಸಭೆ ಖಾಲಿ ಖಾಲಿ ಹೊಡೆದಿತ್ತು. ಆಡಳಿತ ಮತ್ತು ಪ್ರತಿಪಕ್ಷಗಳ ಸಾಲಿನಲ್ಲಿ ಬೆರಳೆಣಿಕೆಯಷ್ಟು ಸದಸ್ಯರು ಮಾತ್ರ ಹಾಜರಿದ್ದರು. ಉಳಿ ದಂತೆ ಬಹುತೇಕ ಆಸನಗಳು ಖಾಲಿ ಖಾಲಿಯಾಗಿದ್ದವು.
ಸದನ ಆರಂಭದಲ್ಲಿ ಆಡ ಳಿತ ಪಕ್ಷದಿಂದ ಮುಖ್ಯಮಂತ್ರಿ ಸೇರಿದಂತೆ 12 ಸಚಿವರು, 26 ಶಾಸಕರು, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದ ರಾಮಯ್ಯ ಸೇರಿದಂತೆ ಕಾಂಗ್ರೆಸ್‍ನ 25 ಶಾಸಕರು ಹಾಗೂ ಜೆಡಿಎಸ್‍ನಿಂದ ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಸೇರಿದಂತೆ ಐವರು ಶಾಸಕರು ಮಾತ್ರ ಹಾಜರಾಗಿದ್ದರು. ಸದನದ ಕಲಾಪ 11 ಗಂಟೆಗೆ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ಅವರು ಸಂತಾಪ ನಿರ್ಣಯ ಮಂಡಿಸಿದರು. ಬಳಿಕ ಮುಖ್ಯಮಂತ್ರಿ ಯಡಿ ಯೂರಪ್ಪ ಅವರು ಆತುರಾತುರವಾಗಿ ಸಂತಾಪ ನಿರ್ಣಯ ಬೆಂಬಲಿಸಿ ಕೆಲವೇ ನಿಮಿಷ ಗಳಲ್ಲಿ ತಮ್ಮ ಮಾತುಗಳನ್ನು ಮುಗಿಸಿ ಸದನದಿಂದ ನಿರ್ಗಮಿಸಿದರು. ಆಡಳಿತ ಪಕ್ಷದ ಮೊದಲ ಸಾಲಿನಲ್ಲಿ ಉಪಮುಖ್ಯಮಂತ್ರಿ ಗೋವಿಂದಕಾರಜೋಳ, ಸಚಿವ ಜೆ.ಸಿ.ಮಾಧು ಸ್ವಾಮಿ, ಆರ್.ಅಶೋಕ್, ಎರಡನೇ ಸಾಲಿನಲ್ಲಿ ಸುರೇಶ್ ಕುಮಾರ್, ಪ್ರಭುಚೌವ್ಹಾಣ್, ಶಶಿಕಲಾ ಜೊಲ್ಲೆ, ಬಿ.ಸಿ.ಪಾಟೀಲ್ ಬಿಟ್ಟರೆ ಬಹುತೇಕ ಆಸನಗಳು ಖಾಲಿಯಾಗಿದ್ದವು.
ಇತ್ತ ಪ್ರತಿಪಕ್ಷದ ಮೊದಲ ಸಾಲಿನಲ್ಲಿ ಸಿದ್ದರಾಮಯ್ಯ ಬಿಟ್ಟರೆ ಯಾರೂ ಇರಲಿಲ್ಲ. ಮೊದಲ ದಿನ ಕೇವಲ ಕಾಂಗ್ರೆಸ್‍ನಿಂದ 25 ಶಾಸಕರು ಹಾಜರಾಗಿದ್ದರು. ಜೆಡಿಎಸ್‍ನಿಂದ ಕೇವಲ ಐದೇ ಐದು ಮಂದಿ ಶಾಸಕರು ಸದನಕ್ಕೆ ಹಾಜರಾಗಿದ್ದರೆ, ಮೊದಲ ದಿನ ಕಲಾಪಕ್ಕೆ ಶಾಸಕರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಕೋವಿಡ್ ಅಥವಾ ಬೇರೆ ಇನ್ನಿತರೆ ಕಾರಣ ಮುಂದಿಟ್ಟುಕೊಂಡು ಬಹುತೇಕ ಶಾಸಕರು ಕಲಾಪದತ್ತ ಮುಖ ಮಾಡಿರಲಿಲ್ಲ.