ಬೆಂಗಳೂರು, ಜೂ.21-ಮುಜ ರಾಯಿ ಇಲಾಖೆಯ ‘ಎ’ ದರ್ಜೆ ದೇವ ಸ್ಥಾನಗಳ ವತಿಯಿಂದ ಸಾಮೂಹಿಕ ವಿವಾಹ ಏರ್ಪಡಿಸುವ ಸರ್ಕಾರದ ‘ಸಪ್ತಪದಿ’ ಯೋಜನೆಗೆ ಕೊರೊನಾ ಸೂತಕ ತಂದಿದ್ದು, ಸರ್ಕಾರ ವಿವಾಹ ದಿನಾಂಕಗಳನ್ನು ಮುಂದೂಡಿದೆ.
ಮುಜರಾಯಿ ಇಲಾಖೆ ನಡೆಸುವ ಈ ಕಾರ್ಯಕ್ರಮಕ್ಕೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಇರುವ ಬೇರೆ ಬೇರೆ ಶುಭ ಮುಹೂರ್ತದಲ್ಲಿ ಸಾಮೂಹಿಕ ವಿವಾಹ ನಡೆಸಲು ಸಮಯ ನಿಗದಿ ಮಾಡಿದೆ. ಕಳೆದ ಮಾರ್ಚ್‍ನಲ್ಲಿ ನೋಂದಾಯಿಸಿದ್ದ ವಧು-ವರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರಿಂದ ಸಮ್ಮತಿ ಪತ್ರ ಪಡೆದು ನಿಗದಿತ ದಿನಾಂಕದಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುವಂತೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ. ಕಳೆದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 110 `ಎ’ ದರ್ಜೆಯ ದೇವಾಲಯಗಳಲ್ಲಿ ನಡೆಸಲುದ್ದೇಶಿಸಿದ್ದ ಸಾಮೂಹಿಕ ವಿವಾಹ ಕಾರ್ಯ ಕ್ರಮವನ್ನು ಕೋವಿಡ್ 19 ಹಿನ್ನೆಲೆಯಲ್ಲಿ ಮುಂದೂಡಿತ್ತು. ಸೋಂಕು ನಿಯಂತ್ರಣಕ್ಕೆ ಬರದೆ ಸೋಂಕಿತರ ಸಂಖ್ಯೆ ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಇದರ ನಡುವೆಯೇ ಸಾವಿರಾರು ಜೋಡಿಗಳ `ಸಪ್ತಪದಿ’ಗೆ ಜುಲೈ ಮತ್ತು ಆಗಸ್ಟ್‍ನಲ್ಲಿ ಸರ್ಕಾರ ಏಳು ದಿನಗಳ ಹೊಸ ಮುಹೂರ್ತ ನಿಗದಿ ಮಾಡಿದೆ.