ಮೈಸೂರು ಮೇಯರ್ ತಸ್ನೀಂ ವ್ಯಂಗ್ಯ
ಮೈಸೂರು, ಅ.1(ಆರ್‍ಕೆ)- ದಸರಾ ಮಹೋತ್ಸವದ ಅನುದಾನದ ವಿಚಾರದಲ್ಲಿ ಸರ್ಕಾರ ಚಾಕೊಲೇಟ್ ಕೊಟ್ಟಿದೆ ಎಂದು ಮೈಸೂರು ಮೇಯರ್ ತಸ್ನಿಂ ವ್ಯಂಗ್ಯವಾಡಿದ್ದಾರೆ. ದಸರಾ ಸಿದ್ಧತೆ ಕುರಿತಂತೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ದಸರಾ ಅನು ದಾನ ನೀಡುವ ಸಂಬಂಧ ಸರ್ಕಾರವು ಮೈಸೂರು ಮಹಾನಗರ ಪಾಲಿಕೆಗೆ ಚಾಕೊಲೇಟ್ ನೀಡಿದೆ. ದಸರೆಗೆ 10 ಕೋಟಿ ರೂ. ಅನುದಾನ ಘೋಷಿಸಿದೆಯಾದರೂ, ಹಣ ಹಂಚಿಕೆ ಬಗ್ಗೆ ಯಾವುದೇ ರೂಪರೇಷೆ ನೀಡಿಲ್ಲ. ಅದರಲ್ಲಿ ಪಾಲಿಕೆಯ ಪಾತ್ರದ ಬಗ್ಗೆಯೂ ತಿಳಿಸಿಲ್ಲ. ಅನುದಾನವನ್ನು ಪಾಲಿಕೆಗೆ ಕೊಡಿ ಎಂದು ಕೇಳಿದ್ದೆವಾದರೂ ಸರ್ಕಾರ ಕೇವಲ 2.75 ಕೋಟಿ ರೂ. ಮಾತ್ರ ನೀಡಲಿದೆ ಎಂಬ ಮಾಹಿತಿ ಇದೆ ಎಂದು ತಿಳಿಸಿದರು.
65 ವಾರ್ಡ್‍ಗಳನ್ನು ಹೊಂದಿರುವ ಮೈಸೂರಿಗೆ ಈ ಹಣದಲ್ಲಿ ಏನು ಮಾಡಲು ಸಾಧ್ಯ? ಪಾಲಿಕೆಯಿಂದಲೇ ಪ್ರತಿ ವಾರ್ಡಿಗೆ 10 ಲಕ್ಷ ರೂ. ನೀಡುವಂತೆ ಆಯುಕ್ತರಿಗೆ ಮನವಿ ಮಾಡಿದ್ದೇನೆ. ಅದರಲ್ಲಿ ವಾರ್ಡುಗಳ ಸಣ್ಣ ಪುಟ್ಟ ಕಾಮಗಾರಿಗಳನ್ನಾದರೂ ಮಾಡಬಹುದು ಎಂದು ಮೇಯರ್ ತಸ್ನೀಂ ತಿಳಿಸಿದರು.
ಜಂಬೂ ಸವಾರಿಯಲ್ಲಿ ಕುದುರೆ ಸವಾರಿ ಮಾಡುವ ಬಗ್ಗೆ ಇನ್ನೂ ಸರ್ಕಾರದಿಂದ ಸ್ಪಷ್ಟ ನಿರ್ದೇಶನ ಬಂದಿಲ್ಲ. ಒಂದು ತಿಂಗಳ ಮುಂಚಿತವಾಗಿಯೇ ಮೈಸೂರು ಪ್ರಥಮ ಪ್ರಜೆಗೆ ಕುದುರೆ ಸವಾರಿ ತರಬೇತಿ ಪಡೆಯುವಂತೆ ಸೂಚನೆ ಬರಬೇಕಿತ್ತು. ಆದರೆ ಈ ಬಾರಿ ಆ ಬಗ್ಗೆ ನಿರ್ದೇಶನ ಬಂದಿಲ್ಲ ಎಂದು ತಸ್ನೀಂ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಾಲು-ಸಾಲು ವರ್ಗಾವಣೆಯಾಗುತ್ತಿರುವುದರಿಂದ ಈ ಬಾರಿಯ ದಸರಾ ಸಿದ್ಧತೆ ಮತ್ತು ಕೋವಿಡ್-19 ನಿರ್ವಹಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿಂದಿನ ಡಿಸಿಯವರು ದಸರಾ ಮಹೋತ್ಸವದ ಸಿದ್ಧತೆ ಬಗ್ಗೆ ರೂಪುರೇಷೆ ಮಾಡಿದ್ದರು. ಹೊಸ ಜಿಲ್ಲಾಧಿಕಾರಿಗಳು ಸಿದ್ಧತೆ ಮಾಡಲು ಮತ್ತಷ್ಟು ಕಾಲಾವಕಾಶ ಬೇಕಾಗಬಹುದು ಎಂದು ಮೇಯರ್ ತಸ್ನೀಂ ತಿಳಿಸಿದರು.