ಮೈಸೂರು, ಅ. 1(ಆರ್‍ಕೆ)- ಕೇಂದ್ರ ಸರ್ಕಾರದ ಕೋವಿಡ್-19ರ 5.0 ಅನ್‍ಲಾಕ್ ಮಾರ್ಗಸೂಚಿ ಯಂತೆ ಅ.15ರಿಂದ ಸಿನಿಮಾ ಪ್ರದರ್ಶಿಸಲು ಚಿತ್ರಮಂದಿರ ಗಳ ಮಾಲೀಕರು ನಿರುತ್ಸಾಹ ತೋರಿದ್ದಾರೆ.
ಕೇಂದ್ರ ಗೃಹ ಸಚಿವಾಲಯವು ಇಂದಿನಿಂದ ಜಾರಿಗೆ ಬರುವಂತೆ ಅನ್‍ಲಾಕ್ 5.0 ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಅದರನ್ವಯ ಅಕ್ಟೋಬರ್ 15ರಿಂದ ಸಿನಿಮಾ ಮಂದಿರ, ಮಲ್ಪಿಪ್ಲೆಕ್ಸ್ ಥಿಯೇಟರ್‍ಗಳನ್ನು ಶೇ.50ರಷ್ಟು ಆಸನ ವ್ಯವಸ್ಥೆಯೊಂದಿಗೆ ಕಾರ್ಯಾ ರಂಭ ಮಾಡಲು ಅನುಮತಿ ನೀಡಲಾಗಿದೆ.
ಕೋವಿಡ್ ಲಾಕ್‍ಡೌನ್ ನಿರ್ಬಂಧದಿಂದಾಗಿ ಕಳೆದ 7 ತಿಂಗಳಿಂದ ಪ್ರದರ್ಶನ ಬಂದ್ ಮಾಡಿದ್ದ ಚಿತ್ರ ಮಂದಿರಗಳ ಮಾಲೀಕರಿಗೆ ಸರ್ಕಾರದ ಹೊಸ ಮಾರ್ಗ ಸೂಚಿಯು ಸಂತಸ ನೀಡುವ ಬದಲು ನಿರುತ್ಸಾಹಕರ ನ್ನಾಗಿಸಿರುವುದು ಅಚ್ಚರಿ ಮೂಡಿಸಿದೆ. ನಿರ್ಬಂಧ ದಿಂದಾಗಿ ಇಡೀ ಚಲನಚಿತ್ರೋದ್ಯಮವೇ ಕುಸಿದಿದ್ದು, ಹೊಸ ಚಿತ್ರ ನಿರ್ಮಾಣವಾಗದಿರುವುದು ಚಿತ್ರ ಪ್ರದ ರ್ಶಿಸಲು ಟಾಕೀಸ್ ಮಾಲೀಕರು ಆಸಕ್ತಿ ತೋರ ದಿರುವುದಕ್ಕೆ ಪ್ರಮುಖ ಕಾರಣವಾಗಿದೆ.
ಈ ಕುರಿತು ‘ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಮೈಸೂರು ನಗರ ಸಿನಿಮಾ ಪ್ರದರ್ಶಕರ ಸಂಘದ ಉಪಾಧ್ಯಕ್ಷ ರಾಜಾರಾಂ, ಶೇ.50ರಷ್ಟು ಆಸನ ವ್ಯವಸ್ಥೆಯೊಂದಿಗೆ ಸಿನಿಮಾ ಪ್ರದರ್ಶಿಸಲು ಅವಕಾಶ ನೀಡಿರುವುದೇನೋ ಸರಿಯಷ್ಟೆ. ಆದರೆ ಸಿನಿಮಾ ನಿರ್ಮಾಣ ಪ್ರಕ್ರಿಯೆಯೇ ಸ್ಥಗಿತಗೊಂಡಿರುವುದರಿಂದ ಹೊಸ ಸಿನಿಮಾಗಳು ಬಿಡುಗಡೆಯಾಗದೇ, ಹಳೇ ಸಿನಿಮಾ ಹಾಕಿಕೊಂಡು ಪ್ರದರ್ಶಿಸಿದರೆ ನೋಡಲು ಯಾರು ಬರುತ್ತಾರೆ ಹೇಳಿ? ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ 7 ತಿಂಗಳಿಂದ ಚಿತ್ರಮಂದಿರಗಳು ಬಂದ್ ಆಗಿವೆ. ಆದರೂ ನಾವು ವಿದ್ಯುತ್ ಮಿನಿಮಮ್ ಶುಲ್ಕ ಪಾವತಿಸುತ್ತಿದ್ದೇವೆ. ಸ್ವಚ್ಛತೆ, ನಿರ್ವಹಣೆ, ಸಿಬ್ಬಂದಿಗೆ ಸಂಬಳ ಪಾವತಿಸುತ್ತಿದ್ದೇವೆ. ಒಂದೇ ಒಂದು ರೂಪಾಯಿ ಆದಾಯವಿಲ್ಲದಿದ್ದರೂ, ನಾನಾ ಖರ್ಚು ಮಾತ್ರ ಆಗು ತ್ತಲೇ ಇರುವುದರಿಂದ ಚಿತ್ರಮಂದಿರದ ಮಾಲೀಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.
ಅದರ ಜೊತೆಗೆ ಆಸ್ತಿ ತೆರಿಗೆ ಶುಲ್ಕ ಹೆಚ್ಚಿಸಲಾಗಿದೆ. ಟ್ರೇಡ್ ಆಗದೇ ಇದ್ದರೂ ಮೈಸೂರು ಮಹಾನಗರ ಪಾಲಿಕೆಯು ಟ್ರೇಡ್ ಲೈಸನ್ಸ್ ಶುಲ್ಕ ಪಾವತಿಸಿ ಎಂದು ಒತ್ತಡ ಹೇರು ತ್ತಿದೆ. ವಿದ್ಯುತ್ ಶುಲ್ಕದಲ್ಲಿ ವಿನಾಯಿತಿ ನೀಡಿ, ಸರ್ಕಾರ ದಿಂದ ಆರ್ಥಿಕ ಸಹಾಯ ಸೌಲಭ್ಯ ನೀಡಿ ಎಂದು ಮನವಿ ಮಾಡಿದರೂ ಪ್ರಯೋಜನವಾಗದಿರುವುದು ನಮ್ಮಗಳ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾ ಗಿದೆ ಎಂದು ಅವರು ತಮ್ಮ ಅಳಲು ತೋಡಿಕೊಂಡರು.
ಇದೀಗ ಸರ್ಕಾರ ಅಕ್ಟೋಬರ್ 15ರಿಂದ ಸಿನಿಮಾ ಮಂದಿರ ಪುನಾರಂಭಗೊಳಿಸಬಹುದೆಂದು ಹೇಳಿದೆ ಯಾದರೂ, ಕೋವಿಡ್ ಮಾರ್ಗಸೂಚಿಯಂತೆ ಶೇ.50 ರಷ್ಟು ಆಸನ ವ್ಯವಸ್ಥೆಯೊಂದಿಗೆ ಚಿತ್ರ ಪ್ರದರ್ಶನ ನಡೆಸಿ ದರೆ ತೀವ್ರ ನಷ್ಟ ಉಂಟಾಗುತ್ತದೆ. ಜೊತೆಗೆ ಸ್ಯಾನಿಟೈ ಸೇಷನ್, ಸ್ವಚ್ಛತೆಯಂತಹ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲೇಬೇಕಾಗಿರುವುದರಿಂದ ನಮಗೆ ವೆಚ್ಚವೂ ಅಧಿಕವಾಗುತ್ತದೆ ಎಂದು ರಾಜಾರಾಂ ತಿಳಿಸಿದರು.
ಇಷ್ಟೆಲ್ಲಾ ಪೂರ್ವಸಿದ್ಧತೆ ಮಾಡಿ ಸಿನಿಮಾ ಮಂದಿರ ತೆರೆದರೂ, ಹಳೇ ಸಿನಿಮಾ ಹಾಕಿಕೊಂಡರೆ ಟಿಕೆಟ್ ಖರೀದಿಸಿ ನೋಡುವವರ್ಯಾರಿದ್ದಾರೆ? ಮೊದಲೇ ಕೊರೊನಾ ಸೋಂಕು ಹರಡುವ ಭೀತಿಯಿಂದ ಜನರು ಹೆದರುತ್ತಿರುವ ಇಂತಹ ಪರಿಸ್ಥಿತಿಯಲ್ಲಿ ಚಿತ್ರ ಪ್ರದರ್ಶನ ಮಾಡುವ ಬದಲು ಸುಮ್ಮನಿರುವುದು ಒಳಿತು ಎಂದು ಅವರು ನುಡಿದರು.
ರಾಜ್ಯ ಸರ್ಕಾರದಿಂದ ಸ್ಪಷ್ಟ ಮಾರ್ಗಸೂಚಿಯನ್ವಯ ಆದೇಶ ಬಂದ ಮೇಲೆ ಮುಂದಿನ ವಾರ ಎಲ್ಲಾ ಚಿತ್ರ ಮಂದಿರಗಳ ಮಾಲೀಕರ ಸಭೆ ಕರೆದು ಕೂಲಂಕುಷ ವಾಗಿ ಚರ್ಚಿಸಿದ ನಂತರ ಸಿನಿಮಾ ಪ್ರದರ್ಶಿಸುವ ಬಗ್ಗೆ ತೀರ್ಮಾನಿಸುತ್ತೇವೆ ಎಂದು ರಾಜಾರಾಂ ನುಡಿದರು.
ಡಿಆರ್‍ಸಿ ಮಲ್ಪಿಫ್ಲೆಕ್ಸ್ ಮಾಲೀಕರಾದ ಹನುಮಂತು ಅವರು ಮಾತನಾಡಿ, ಕಳೆದ 7 ತಿಂಗಳಿಂದ ಸ್ಥಗಿತಗೊಂಡಿದ್ದ ಸಿನಿಮಾ ಪ್ರದರ್ಶನ ಪುನಾರಂಭಿಸಲು ಅವಕಾಶ ನೀಡಿರುವುದರಿಂದ ಎಲ್ಲೋ ಒಂದು ಕಡೆ ಅಶಾ ಭಾವನೆ ಮೂಡತೊಡಗಿದೆ. ಹೊಸ ಚಿತ್ರಗಳನ್ನು ಪ್ರದ ರ್ಶಿಸಿದರೆ ವೀಕ್ಷಕರು ಬರುತ್ತಾರೆ, ಮುಂದೆ ಪರಿಸ್ಥಿತಿ ಸರಿಹೋಗಬಹುದೆಂದು ನಿರೀಕ್ಷಿಸಲಾಗಿದೆ ಎಂದರು.