ಸದ್ಯಕ್ಕೆ ಶಾಲಾ-ಕಾಲೇಜು   ಪುನರಾರಂಭ ಬೇಡ
ಮೈಸೂರು

ಸದ್ಯಕ್ಕೆ ಶಾಲಾ-ಕಾಲೇಜು  ಪುನರಾರಂಭ ಬೇಡ

October 2, 2020

ಬೆಂಗಳೂರು, ಅ.1(ಕೆಎಂಶಿ)- ಸದ್ಯಕ್ಕೆ ಶಾಲಾ-ಕಾಲೇಜುಗಳನ್ನು ಪುನರಾರಂಭಿಸದಿರಲು ಇಂದಿಲ್ಲಿ ಸೇರಿದ್ದ ರಾಜ್ಯ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಶಾಲಾ- ಕಾಲೇಜುಗಳನ್ನು ಪ್ರಾರಂಭಿಸುವುದು ಬೇಡ ಎಂದು ಬಿಎಸ್ ಯಡಿಯೂರಪ್ಪ ಮತ್ತು ಅವರ ಸಂಪುಟದ ಸಚಿವರು, ಶಿಕ್ಷಣ ಇಲಾಖೆ ಹೊಣೆ ಹೊತ್ತ ಮಂತ್ರಿಗಳಿಗೆ ಸಲಹೆ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಅವುಗಳ ಸಾಧಕ-ಬಾಧಕಗಳನ್ನು ನೋಡಿ ಕೊಂಡೇ ತರಗತಿಗಳನ್ನು ಆರಂಭಿಸಿ  ಎಂದು ಮುಖ್ಯಮಂತ್ರಿಯವರು ಸೂಚಿಸಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಶಾಲಾ ಕಾಲೇಜುಗಳನ್ನು ಪುನರಾರಂಭ ಮಾಡುವ ಬಗ್ಗೆ ಇಲಾಖೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ತಿಂಗಳ ಹದಿನೈದರ ನಂತರ ಶಾಲಾ ಕಾಲೇಜು ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರಗಳು ನಿರ್ಧಾರ ಕೈಗೊಳ್ಳಬಹುದು ಎಂದು ಕೇಂದ್ರ ಮಾರ್ಗಸೂಚಿಯಲ್ಲಿ ತಿಳಿಸಿದೆ. ಮಾರ್ಗ ಸೂಚಿ ಹಿನ್ನೆಲೆಯಲ್ಲಿ ಪೋಷಕರು ಮತ್ತು ತಜ್ಞರೊಟ್ಟಿಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಪ್ರತಿನಿತ್ಯ ಪೋಷಕರ ಜೊತೆ ಸಂಪರ್ಕದಲ್ಲಿದ್ದಾರೆ. ಎಲ್ಲಾ ಮಾಹಿತಿ ಪಡೆದಿದ್ದೇನೆ. ಅವುಗಳನ್ನು ಗಮನದಲ್ಲಿಟ್ಟು ಕೊಂಡು ಇಲಾಖೆ ತೀರ್ಮಾನ ಕೈಗೊಳ್ಳುತ್ತದೆ. ತೀರ್ಮಾನ ಕೈಗೊಳ್ಳುವ ಸಂದರ್ಭದಲ್ಲಿ ಸಿಎಂ ಅವರೊಟ್ಟಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ಶಾಲಾ -ಕಾಲೇಜುಗಳ ಆರಂಭ ಪ್ರತಿಷ್ಠೆ ಆಗಬಾರದು ಎಂದು ಕಿವಿಮಾತು ಹೇಳಿದ ಕೆಲವು ಸಚಿವರು, ಕೊರೊನಾ ಸೋಂಕು ಭಯಾನಕವಾಗಿ ಹರಡುತ್ತಿದೆ.

ಮಕ್ಕಳನ್ನು ಅದರ ದವಡೆಗೆ ಸಿಲುಕಿಸುವುದು ಬೇಡ ಎಂದಿದ್ದಾರೆ. ಸಭೆಯ ನಂತರ ಸುದ್ದಿ ಗಾರರೊಂದಿಗೆ ಮಾತನಾಡಿದ ಉನ್ನತ ಶಿಕ್ಷಣ ಹೊಣೆ ಹೊತ್ತ ಡಾ. ಅಶ್ವತ್ಥ್‍ನಾರಾ ಯಣ, ಶಾಲಾ-ಕಾಲೇಜುಗಳನ್ನು ಆರಂಭ ಮಾಡುವ ಬಗ್ಗೆ ಶೀಘ್ರದಲ್ಲೇ ಸ್ಪಷ್ಟ ಮಾಹಿತಿ ಯನ್ನು ಸರ್ಕಾರ ನೀಡಲಿದೆ ಎಂದರು. ಆರಂಭಕ್ಕೆ ಸಂಬಂಧಿಸಿ ಯುಜಿಸಿ ಈಗಾಗಲೇ ಮಾರ್ಗಸೂಚಿ ನೀಡಿದೆ. ಅದರಂತೆ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರ ಜೊತೆ ಚರ್ಚೆ ನಡೆಸಿದ ನಂತರ ಸ್ಪಷ್ಟ ಮಾಹಿತಿ ನೀಡಲಾಗುವುದು. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಯಾವುದೇ ಸಮಸ್ಯೆಗಳು ಬರದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡು, ತರಗತಿಗಳನ್ನು ಆರಂಭಿಸುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದಿದ್ದಾರೆ.

Translate »