ಮೈಸೂರು,ಅ.1(ಎಂಟಿವೈ, ಹನಗೋಡು ಮಹೇಶ್)- ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆ ಗುರುವಾರ ಮೈಸೂರಿನ ಅರಣ್ಯ ಭವನಕ್ಕೆ ಆಗಮಿಸಿದೆ.
ಹುಣಸೂರು ತಾಲೂಕಿನ ವೀರನಹೊಸಳ್ಳಿ ಗೇಟ್ ಬಳಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಯೋಜಿಸಿದ್ದ ಗಜಪಡೆ ಸ್ವಾಗತಿಸುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅಂಬಾರಿ ಆನೆ ಅಭಿಮನ್ಯು ಸೇರಿದಂತೆ 5 ಆನೆಗಳಿಗೂ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಿದರು. ದಸರಾ ಗಜಪಡೆಗೆ ಕಳೆದ 21 ವರ್ಷದಿಂದ ಪೂಜೆ ಸಲ್ಲಿಸುವ ಸಂಪ್ರದಾಯ ಹೊಂದಿರುವ ಪುರೋಹಿತ ಎಸ್.ವಿ.ಪ್ರಹ್ಲಾದ್‍ರಾವ್ ಅವರ ನೇತೃತ್ವದಲ್ಲಿ ವೀರನಹೊಸಳ್ಳಿ ಗೇಟ್‍ನಲ್ಲಿ ಗಣಪತಿ ಹೋಮ, ಶೋಡಷೋಪಚಾರ ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನಡೆಸಲಾಯಿತು. ಬಳಿಕ ಬೆಳಗ್ಗೆ 10.10 ರಿಂದ 11.15ರವರೆಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಅಭಿಮನ್ಯು ನೇತೃತ್ವದ ಐದು ಆನೆಗಳಿಗೂ ಪ್ರತಿ ವರ್ಷದಂತೆ ಪೂಜೆ ಸಲ್ಲಿಸಲಾಯಿತು. ಗಜಪಯಣದ ಹಿನ್ನೆಲೆಯಲ್ಲಿ ಬುಧ ವಾರ ಸಂಜೆಯೇ ವೀರನಹೊಸಳ್ಳಿ ಗೇಟ್ ಬಳಿಗೆ ಮತ್ತಿ ಗೋಡು ಶಿಬಿರದಿಂದ ಅಂಬಾರಿ ಆನೆ ಅಭಿಮನ್ಯುವಿನೊಂದಿಗೆ ಮಾವುತ ವಸಂತ, ಕಾವಾಡಿ ರಾಜಣ್ಣ, ಕುಶಾಲನಗರ ದುಬಾರೆ ಕ್ಯಾಂಪ್‍ನಲ್ಲಿರುವ ಪಟ್ಟದ ಆನೆ ವಿಕ್ರಮನೊಂದಿಗೆ ಮಾವುತ ಜೆ.ಕೆ.ಪುಟ್ಟ, ಕಾವಡಿ ಹೇಮಂತ್‍ಕುಮಾರ್, ಕುಮ್ಕಿ ಆಣೆ ವಿಜಯಳೊಂದಿಗೆ ಮಾವುತ ಭೋಜಪ್ಪ, ದುಬಾರೆ ಆನೆ ಕ್ಯಾಂಪ್‍ನಿಂದ ನಿಶಾನೆ ಆನೆ ಗೋಪಿಯೊಂದಿಗೆ ಮಾವುತ ನಾಗರಾಜು, ಕಾವಾಡಿ ಶಿವು ಹಾಗೂ ದುಬಾರೆ ಶಿಬಿರದಿಂದ ಕುಮ್ಕಿ ಆನೆ ಕಾವೇರಿಯೊಂದಿಗೆ ಮಾವುತ ಡೋಬಿ, ಅದರ ಕಾವಾಡಿ ಆಗಮಿಸಿ ವಾಸ್ತವ ಹೂಡಿದ್ದರು. ಕೊರೊನಾ ಹಾವಳಿಯಿಂದಾಗಿ ಸರಳವಾಗಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದ್ದರಿಂದ ಜನಪ್ರತಿನಿಧಿಗಳು, ಸಾರ್ವಜನಿಕ ರಿಗೆ ಗಜಪಯಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿರಲಿಲ್ಲ. ದಸರಾ ಆನೆ ಹಾಗೂ ಮಾವುತ, ಕಾವಾಡಿಗಳ ಆರೋಗ್ಯ ರಕ್ಷಣೆಗೆ ಹೆಚ್ಚಿನ ಗಮನ ನೀಡಿದ್ದ ಹಿನ್ನೆಲೆಯಲ್ಲಿ ಜನಜಂಗುಳಿಗೆ ಅವಕಾಶ ನೀಡಿರಲಿಲ್ಲ. ಕೇವಲ ಅಧಿಕಾರಿ ಗಳ ಉಪಸ್ಥಿತಿಯಲ್ಲಿ ಗಜಪೂಜೆ ನೆರವೇರಿಸಲಾಯಿತು. ಗಜಪಯಣದ ಸಂಪ್ರದಾಯಕ್ಕೆ ಧಕ್ಕೆ ಬಾರದಂತೆ ಪೂಜೆ ಸಲ್ಲಿಸಲಾಯಿತು. ಎಲ್ಲಾ ಆನೆಗಳ ಪಾದ ತೊಳೆದು ಹರಿಶಿನ-ಕುಂಕುಮದೊಂದಿಗೆ ಗಂದವನ್ನಿಟ್ಟು ಪೂಜೆ ಮಾಡಿದ ನಂತರ ದೃಷ್ಟಿ ತೆಗೆಯಲಾಯಿತು. ಬಳಿಕ ಅಧಿಕಾರಿಗಳು ಪುಷ್ಪಾರ್ಚನೆ ನೆರವೇರಿಸಿದರು. ಅಲ್ಲದೆ 5 ಆನೆಗಳ ಮಾವುತರು ಹಾಗೂ ಕಾವಾಡಿಗಳಿಗೆ ಫಲತಾಂಬೂಲ ನೀಡಿ ದಸರಾ ಮಹೋತ್ಸವಕ್ಕೆ ಆನೆಗಳನ್ನು ಕರೆತರುವಂತೆ ಗೌರವಪೂರ್ವಕವಾಗಿ ಆಮಂತ್ರಣ ನೀಡಲಾಯಿತು. ಪ್ರತಿವರ್ಷ ಸ್ಥಳೀಯ ಹಲವು ಗ್ರಾಮಗಳ ಸಾವಿರಾರು ಮಂದಿ ದಸರಾ ಗಜಪಡೆಗೆ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ವಾಡಿಕೆಯಿತ್ತು. ಇದರೊಂದಿಗೆ ಮೈಸೂರಿಂ ದಲೂ ಹಲವು ಮಂದಿ ಆಗಮಿಸುತ್ತಿದ್ದರು. ಅಲ್ಲದೆ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು ಹಾಗೂ ರಾಜಕೀಯ ನಾಯಕರು ಪಾಲ್ಗೊಳ್ಳುತ್ತಿದ್ದುದ್ದರಿಂದ ಬೆಂಬಲಿಗರ ದಂಡು ಹೆಚ್ಚಾಗಿರುತ್ತಿತ್ತು. ಆದರೆ ಈ ಬಾರಿ ಅಧಿಕಾರಿ ವರ್ಗ ಹೊರತುಪಡಿಸಿ, ಸ್ಥಳೀಯ ಹಾಡಿಗಳ ಜನರು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿ, ದಸರಾ ಗಜಪಡೆಗೆ ಬೀಳ್ಕೊಟ್ಟರು.
ಲಾರಿಯಲ್ಲಿ ಪ್ರಯಾಣ: ಪೂಜೆ ನೆರವೇರಿದ ಬಳಿಕ ಮಧ್ಯಾಹ್ನ 12.30ಕ್ಕೆ ಆನೆಗಳನ್ನು ಲಾರಿಗೆ ಹತ್ತಿಸಲಾಯಿತು. 1.10ಕ್ಕೆ ವೀರನಹೊಸಳ್ಳಿ ಗೇಟ್‍ನಿಂದ ಮೈಸೂರಿನತ್ತ ಪ್ರಯಾಣ ಆರಂಭಿಸಿದ ಅಭಿಮನ್ಯು ನೇತೃತ್ವದ ಗಜಪಡೆ ಸಂಜೆ 3.30ರ ವೇಳೆಗೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣ ತಲುಪಿತು. ರಾತ್ರಿ ಇಲ್ಲಿಯೇ ವಾಸ್ತವ್ಯ ಹೂಡಲು ಅವಕಾಶ ಕಲ್ಪಿಸಲಾಗಿದ್ದು, ಆನೆಗಳಿಗೆ ಆಲದ ಸೊಪ್ಪು, ಹಸಿ ಹಾಗೂ ಒಣ ಹುಲ್ಲು, ಪೌಷ್ಟಿಕ ಆಹಾರ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಗಜಪಯಣದ ವೇಳೆ ಹುಲಿ ಯೋಜನೆಯ ನಿರ್ದೇಶಕ, ಎಪಿಸಿಸಿಎಫ್ ಜಗತ್‍ರಾಮ್, ಆನೆ ಯೋಜನೆ ನಿರ್ದೇಶಕ ನಟೇಶ್, ಮೈಸೂರು ವೃತ್ತದ ಸಿಸಿಎಫ್ ಟಿ.ಹೀರಾಲಾಲ್, ಡಿಸಿಎಫ್‍ಗಳಾದ ಎಂ.ಜಿ.ಅಲೆಗ್ಸಾಂಡರ್, ಡಾ.ಕೆ.ಸಿ.ಪ್ರಶಾಂತ್‍ಕುಮಾರ್, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಮಹೇಶ್‍ಕುಮಾರ್, ಜಿ.ಪಂ ಸಿಇಓ ಭಾರತಿ, ಎಸ್‍ಪಿ ಸಿ.ಬಿ.ರಿಷ್ಯಂತ್ ಉಪವಿಭಾಗಾಧಿಕಾರಿ ವೀಣಾ ಇನ್ನಿತರರು ಪಾಲ್ಗೊಂಡಿದ್ದರು.
ಅರಮನೆ ಅಂಗಳದಿಂದ ಆನೆಗಳನ್ನು ಹೊರಗೆ ಹೋಗಲು ಬಿಡಲ್ಲ: ಡಿಸಿಎಫ್ ಅಲೆಗ್ಸಾಂಡರ್
ಮೈಸೂರು, ಅ.1(ಎಂಟಿವೈ)-ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅಭಿಮನ್ಯು ನೇತೃತ್ವದ 5 ಆನೆಗಳು ಸದೃಡ ಹಾಗೂ ಆರೋಗ್ಯದಿಂದ ಕೂಡಿವೆ. ಆದರೂ ಅರಮನೆ ಆವರಣದಿಂದ ಹೊರಗೆ ಆನೆಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಎಂ.ಜಿ.ಅಲೆಗ್ಸಾಂಡರ್ ತಿಳಿಸಿದ್ದಾರೆ.
ಗಜಪಡೆಯ 5 ಆನೆಗಳು ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಆಗಮಿಸಿದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಸಾಲಿನ ದಸರಾ ಮಹೋತ್ಸವದ ಪ್ರಕ್ರಿಯೆ ಆರಂಭಿಸಿದ್ದೇವೆ. ಅದರ ಮೊದಲ ಹೆಜ್ಜೆಯಾಗಿ ಅಂಬಾರಿ ಆನೆ ಸೇರಿದಂತೆ 5 ಆನೆಗಳನ್ನು ಗಜಪಯಣದ ಮೂಲಕ ಅರಣ್ಯ ಭವನಕ್ಕೆ ಕರೆತರ ಲಾಗಿದೆ. ಲಾರಿಗಳ ಮೂಲಕ ಅರಣ್ಯ ಭವನ ತಂದಿರುವ ಆನೆಗಳನ್ನು ಇಲ್ಲಿಯೇ ವಾಸ್ತವ್ಯ ಹೂಡಲು ಅವಕಾಶ ಕಲ್ಪಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ಅರಣ್ಯ ಇಲಾಖೆ ವತಿಯಿಂದ ಪೂಜೆ ಮಾಡಿ ಲಾರಿ ಮೂಲಕ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಕರೆದೊಯ್ಯಲಾಗುತ್ತದೆ. ಬಳಿಕ ಅಲ್ಲಿ ಉಸ್ತುವಾರಿ ಸಚಿವರು ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಿದ್ದಾರೆ ಎಂದರು.
ಅಭಿಮನ್ಯು 21 ವರ್ಷದಿಂದಲೂ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದಾನೆ. ಈ ಹಿಂದೆಯೂ ಬಾರ ಹೊರುವ ಅಭ್ಯಾಸ ಮಾಡಿಸಲಾಗಿದೆ. ಆನೆಗಳಿಗೆ ಜನಜಂಗುಳಿ ನಡುವೆ ಸಾಗುವ ಹಾಗೂ ಬಾರ ಹೊರುವ ತಾಲೀಮು ಬೇಕಾಗಿದೆ. ಬಾರ ಹೊರಲು ಅಭಿಮನ್ಯು ಸಮರ್ಥವಾಗಿದ್ದಾನೆ. ಈ ಬಾರಿ ಜಂಬೂ ಸವಾರಿಯಲ್ಲಿ ಅರಮನೆ ಆವರಣ ಹೊರತುಪಡಿಸಿ ಆನೆಗಳು ಹೊರಗೆ ಬರದೇ ಇರುವುದರಿಂದ ಜನಜಂಗುಳಿ ಸಮಸ್ಯೆ ಇರುವುದಿಲ್ಲ ಎಂದರಲ್ಲದೆ, ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗಿದೆ. ಆನೆ, ಅವುಗಳ ಮಾವುತರು, ಕಾವಾಡಿಗಳ ಆರೋಗ್ಯ ಕಾಪಾಡುವ ಹೊಣೆ ನಮ್ಮದಾಗಿದೆ. ಆ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಎಂದರು.
ಗಜಪಯಣದ ಮೂಲಕ ಲಾರಿಗಳಲ್ಲಿ ಅರಣ್ಯ ಭವನಕ್ಕೆ ಸಂಜೆ ಆಗಮಿಸಿದ ಅಭಿ ಮನ್ಯು ನೇತೃತ್ವದ ಗಜಪಡೆ ವಿಶ್ರಾಂತಿ ಪಡೆಯಲು ಮುಂದಾದವು. ಅರಣ್ಯ ಭವನದ ಆವರಣದಲ್ಲಿ ಎಲ್ಲಾ ಆನೆಗಳನ್ನು ಕಟ್ಟಿ ಹಾಕಲಾಗಿದ್ದು, ಸಾರ್ವಜನಿಕರ ಪ್ರವೇಶ ನಿರ್ಬಂ ಧಿಸಲಾಗಿದೆ. ನಾಳೆ ಅರಮನೆ ಅಂಗಳಕ್ಕೆ ಪ್ರವೇಶ ಪಡೆಯಲಿದೆ.