ಹಿಜಾಬ್ ವಿವಾದಕ್ಕೆ ಸಂಘ ಪರಿವಾರವೇ ಕಾರಣ
News

ಹಿಜಾಬ್ ವಿವಾದಕ್ಕೆ ಸಂಘ ಪರಿವಾರವೇ ಕಾರಣ

February 19, 2022

ಬೆಂಗಳೂರು, ಫೆ.18(ಕೆಎಂಶಿ)-ಸಂಘ ಪರಿ ವಾರದವರು ಅನಗತ್ಯವಾಗಿ ಹಿಜಾಬ್ ವಿವಾದವನ್ನು ಹುಟ್ಟುಹಾಕಿದ್ದಾರೆ. ಹಿಜಾಬ್ ಧರಿಸುವುದು ನಿನ್ನೆ ಮೊನ್ನೆ ಆರಂಭವಾದುದ್ದಲ್ಲ, ಬಹಳ ವರ್ಷಗಳಿಂದ ನಡೆದು ಕೊಂಡು ಬಂದಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಹಿಜಾಬ್ ಧರಿಸುತ್ತಾರೆ, ಕೆಲವರು ಧರಿಸಲ್ಲ ಅದು ಮುಸ್ಲಿಂ ವಿದ್ಯಾರ್ಥಿಗಳ ವೈಯಕ್ತಿಕ ಆಯ್ಕೆ ಎಂದರು. ಹಿಜಾಬ್ ಧರಿಸುವುದರಿಂದ ಇತರರಿಗೆ ಯಾವ ತೊಂದರೆ ಕೂಡ ಆಗಲ್ಲ. ಈ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯ ಇದನ್ನು ಗಂಭೀರ ವಾಗಿ ಪರಿಗಣಿಸಿದೆ ಕೂಡ. ಧರ್ಮದ ಸಂಪ್ರ ದಾಯದ ಪ್ರಕಾರ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರು, ಜೈನರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈವರೆಗೆ ಯಾವ ತಕರಾರೂ ಇರಲಿಲ್ಲ. ಇದಕ್ಕೆ ಸಂವಿಧಾನ ಕೂಡ ಅವಕಾಶ ನೀಡಿದೆ, ಇದು ವ್ಯಕ್ತಿಯ ಮೂಲಭೂತ ಹಕ್ಕಾಗಿದೆ. ಇದಕ್ಕೆ ಯಾರೂ ಅಡ್ಡಿಪಡಿಸಬಾರದು.

ಮುಸ್ಲಿಮರು ಇತ್ತೀಚೆಗೆ ಶಿಕ್ಷಣದ ಕಡೆಗೆ ಒಲವು ತೋರಿ ಶಾಲಾ ಕಾಲೇಜಿಗೆ ಬರುತ್ತಿದ್ದಾರೆ, ಮೊದಲೆಲ್ಲ ಶಿಕ್ಷಣ ಪಡೆಯುವ ಮುಸ್ಲಿಂ ಹೆಣ್ಣು ಮಕ್ಕಳ ಪ್ರಮಾಣ ಕಡಿಮೆಯಿತ್ತು. ಸಂಘ ಪರಿವಾರದ ವರು ಹಿಜಾಬ್ ಅನ್ನು ವಿವಾದ ಮಾಡಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸುವ ಹುನ್ನಾರ ಮಾಡಿದ್ದಾರೆ.

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಯಾರಿಗೂ ಈ ರೀತಿ ಮಾಡಬಾರದು, ಶಿಕ್ಷಣ ಮೂಲಭೂತ ಹಕ್ಕಾಗಿದೆ. ಮನಮೋಹನ್ ಸಿಂಗ್ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ ತಂದಿತ್ತು, ಆ ಮೂಲಕ ಪ್ರತಿಯೊಬ್ಬರಿಗೂ ಶಿಕ್ಷಣದ ಅವಕಾಶ ನೀಡಿದೆ.

ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‍ನಲ್ಲಿ ಮಧ್ಯಂತರ ತೀರ್ಪು ಬಂದಿದೆ, ಶಾಲಾಭಿವೃದ್ಧಿ ಕಮಿಟಿ ಇರುವ ಶಾಲೆಗಳಲ್ಲಿ ಅವರು ಒಂದು ಸಮವಸ್ತ್ರ ನೀತಿ ರೂಪಿಸಿದ್ದರೆ ಅಲ್ಲಿ ಮಾತ್ರ ಈ ಆದೇಶ ಅನ್ವಯವಾಗುತ್ತದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಎಲ್ಲರಿಗೂ ಇದು ಅನ್ವಯವಾಗಲ್ಲ, ಚಾಮರಾಜನಗರದಲ್ಲಿ ಸಚಿವ ಅಶ್ವಥ್ ನಾರಾಯಣ ಅವರು ಈ ಸಮವಸ್ತ್ರ ನೀತಿ ಪದವಿ ಕಾಲೇಜುಗಳಿಗೆ ಅನ್ವಯವಾಗಲ್ಲ ಎಂದು ಹೇಳಿದ್ದಾರೆ.
ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಎಂಬುವವರು ಮೊನ್ನೆ 16 ನೇ ತಾರೀಕು ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ, ಮೇಲ್ಕಂಡ ಆದೇಶವು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧೀನದಲ್ಲಿನ ವಸತಿ ಶಾಲಾ ಕಾಲೇಜುಗಳು, ಮೌಲಾನಾ ಆಜಾದ್ ಮಾದರಿ (ಆಂಗ್ಲ ಮಾಧ್ಯಮ) ಶಾಲೆಗಳಿಗೂ ಅನ್ವಯವಾಗುತ್ತದೆ ಎಂದಿದ್ದಾರೆ.

ಮೊದಲನೆಯದಾಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಶಾಲಾಭಿವೃದ್ಧಿ ಸಮಿತಿಯೇ ಇರುವುದಿಲ್ಲ, ಶಾಲಾಭಿವೃದ್ಧಿ ಕಮಿಟಿ ಇಲ್ಲದಿದ್ದಾಗ ಸಮವಸ್ತ್ರ ನೀತಿ ರೂಪಿಸುವುದು ಯಾರು? ಹೀಗಿದ್ದಾಗ ನ್ಯಾಯಾಲಯದ ಆದೇಶ ಪಾಲನೆ ಎಲ್ಲಿ ಸಾಧ್ಯ. ಈ ಸುತ್ತೋಲೆ ಸಂಪೂರ್ಣ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತದೆ. ಶಿಕ್ಷಣ ಸಂಸ್ಥೆಗಳ ಬಳಿ ಪೆÇಲೀಸರಿಗೇನು ಕೆಲಸ? ಪೆÇಲೀಸರ ಮೂಲಕ ಹೆದರಿಸೋದು ಯಾಕೆ, ಕೇಸ್ ಹಾಕ್ತೀವಿ, ಅರೆಸ್ಟ್ ಮಾಡ್ತೀವಿ ಎಂದು ಚಿಕ್ಕ ಮಕ್ಕಳನ್ನು ಹೆದರಿಸೋದು ಯಾಕೆ? ಇದೇನು ಪ್ರಜಾಪ್ರಭುತ್ವವೋ ಅಥವಾ ಸರ್ವಾಧಿಕಾರವೋ? ಸರ್ಕಾರವೇ ಇದನ್ನು ಇತ್ಯರ್ಥ ಮಾಡಬಹುದಿತ್ತು. ನ್ಯಾಯಾಲಯದ ಮೆಟ್ಟಿಲು ಹತ್ತಲು ಅವಕಾಶವೇ ಕೊಡಬಾರದಿತ್ತು. ಸರ್ಕಾರ ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸುವ ದುರುದ್ದೇಶದಿಂದ ವಿವಾದದ ಆರಂಭದಲ್ಲೇ ಅಲಕ್ಷ್ಯ ತೋರಿದ ಕಾರಣಕ್ಕೆ ಇಂದು ದೊಡ್ಡದಾಗಿದೆ. ವಿದ್ಯಾರ್ಥಿಗಳು ಸಮವಸ್ತ್ರ ವಿರೋಧಿಸಿಲ್ಲ. ಸಮವಸ್ತ್ರದೊಂದಿಗೆ ಮೊದಲಿನಿಂದಲೂ ಹಿಜಾಬ್ ಧರಿಸುತ್ತಿದ್ದಾರೆ. ಅದಕ್ಕೆ ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಎಫ್‍ಐಆರ್ ದಾಖಲು ಮಾಡುತ್ತಿರುವುದು ತಪ್ಪು, ಇದಕ್ಕೆಲ್ಲ ಸರ್ಕಾರವೇ ಕಾರಣ ಎಂದು ಟೀಕಿಸಿದರು.

Translate »