ಮಾ. 4ಕ್ಕೆ ರಾಜ್ಯ ಬಜೆಟ್
News

ಮಾ. 4ಕ್ಕೆ ರಾಜ್ಯ ಬಜೆಟ್

February 19, 2022

ಬೆಂಗಳೂರು, ಫೆ. 18(ಕೆಎಂಶಿ)- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಚೊಚ್ಚಲ ಮುಂಗಡಪತ್ರವನ್ನು ಮಾರ್ಚ್ 4ರಂದು ವಿಧಾನಸಭೆಯಲ್ಲಿ ಮಂಡಿಸಲು ತೀರ್ಮಾನಿಸಿದ್ದಾರೆ. ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮುಂಗಡಪತ್ರ ಮಂಡನೆಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಂತರ ದಿನಾಂಕ ನಿಗದಿಪಡಿಸಲಾಯಿತು. ಕರ್ನಾಟಕ ಲೋಕಸೇವಾ ಆಯೋಗದ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಸಂದರ್ಶನದ ಅಂಕವನ್ನು 50ರಿಂದ 25ಕ್ಕೆ ಇಳಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ. ಕರ್ನಾಟಕ ನಾಗರಿಕ ಸೇವಾ ಹುದ್ದೆಗಳಿಗೆ ನೇರ ನೇಮಕಾತಿ ನಿಯಮದಲ್ಲಿ ಕೆಲವು ಬದಲಾವಣೆ ತರಲು ಒಪ್ಪಿಗೆ ನೀಡಲಾಯಿತು. ಕರ್ನಾಟಕ ಇಂಧನ ಸಂರಕ್ಷಣೆ ಮತ್ತು ದಕ್ಷತೆ ನೀತಿ ಅನುಷ್ಠಾನ ಅವಧಿಯನ್ನು 2021 ರಿಂದ 2026 ರವರೆಗೆ ವಿಸ್ತರಿಸಲು ಅನುಮೋದನೆ ನೀಡಲಾಗಿದೆ.

ಜಿಲ್ಲಾ, ತಾಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮೆಡಿಕಲ್ ಗ್ಯಾಸ್ ಪೈಪ್‍ಲೈನ್ ಅಳವಡಿಸುವ ಕಾಮಗಾರಿ ಮತ್ತು ವಿದ್ಯುತ್ ಸಂಪರ್ಕಕ್ಕೆ 224.41 ಕೋಟಿ ರೂ. ಪರಿಷ್ಕøತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ 96.66 ಕೋಟಿ: ಮೈಸೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆಸ್ಪತ್ರೆ ನಿರ್ಮಾಣ ಕಾಮಗಾರಿಗಾಗಿ 96.66 ಕೋಟಿ ರೂ.ಗಳ ಪರಿಷ್ಕøತ ಅಂದಾಜಿಗೂ ಸಂಪುಟ ಸಮ್ಮತಿಸಿದೆ. ನಂದಿಬೆಟ್ಟದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯ ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ ಆಧಾರದ ಮೇಲೆ 93.40 ಕೋಟಿ ರೂ. ವೆಚ್ಚದಲ್ಲಿ ಪ್ರಯಾಣಿಕರ ರೋಪ್‍ವೇ ನಿರ್ಮಾಣಕ್ಕೆ ಟೆಂಡರ್ ಕರೆಯಲು ಸಮ್ಮತಿಸಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರದ 74, ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ 7 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಅನುಮೋದನೆ ನೀಡಿದೆ. ಪ್ರಧಾನಮಂತ್ರಿ ಕೃಷಿ ಸಂಚಾಯಿ ಯೋಜನೆ, ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆ ಅನುಷ್ಠಾಗೊಳಿಸಲು ಸಂಪುಟ ಸಮ್ಮತಿಸಿದೆ.

Translate »