ಸರ್ಕಾರಿ ಆಸ್ತಿಗೆ ನಕಲಿ ದಾಖಲೆ ಸೃಷ್ಟಿಸಿ ಖಾಸಗಿಯವರಿಗೆ ಖಾತೆ ಹುಣಸೂರು ನಗರಸಭೆ ಮಾಜಿ ಆಯುಕ್ತ ಶಿವಪ್ಪನಾಯಕ ಬಂಧನ
ಮೈಸೂರು

ಸರ್ಕಾರಿ ಆಸ್ತಿಗೆ ನಕಲಿ ದಾಖಲೆ ಸೃಷ್ಟಿಸಿ ಖಾಸಗಿಯವರಿಗೆ ಖಾತೆ ಹುಣಸೂರು ನಗರಸಭೆ ಮಾಜಿ ಆಯುಕ್ತ ಶಿವಪ್ಪನಾಯಕ ಬಂಧನ

February 19, 2022

ಹುಣಸೂರು, ಫೆ.18(ಕೆಕೆ)-ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ, ಖಾಸಗಿ ವ್ಯಕ್ತಿಗೆ ಖಾತೆ ಮಾಡಿಕೊಟ್ಟ ಆರೋಪದ ಮೇರೆಗೆ ಹುಣ ಸೂರು ನಗರಸಭೆಯ ಹಿಂದಿನ ಆಯುಕ್ತ ಶಿವಪ್ಪನಾಯಕ (ಹಾಲಿ ಅಮಾನತಿನಲ್ಲಿ ದ್ದಾರೆ) ಮತ್ತು ದ್ವಿತೀಯ ದರ್ಜೆ ಸಹಾ ಯಕಿ ಹೆಚ್.ಎ. ಅನಿತಾಕುಮಾರಿ (ಹಾಲಿ ಸರಗೂರು ಪಪಂ ದ್ವಿತೀಯ ದರ್ಜೆ ಸಹಾಯಕಿ) ಅವರನ್ನು ಹುಣಸೂರು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ವಿವರ: ಹುಣಸೂರು ನಗರಸಭೆಯ ಒಳಚರಂಡಿ ವ್ಯವಸ್ಥೆಗೆ ವೆಟ್‍ಲ್ಯಾಂಡ್‍ಗಾಗಿ ಸರ್ಕಾರಿ ಜಾಗ ಹುಡುಕುವಾಗ ದಾಖಲೆ ಗಳ ಆಧಾರದ ಮೇರೆಗೆ ಸರ್ವೆ ನಂ. 237ರಲ್ಲಿ 6 ಎಕರೆ 8 ಗುಂಟೆ ಸರ್ಕಾರಿ ಬಿ ಖರಾಬು ಜಾಗವಿರುವುದು ಕಂಡುಬಂದಿದೆ. ಈ ಜಾಗ ವನ್ನು ಬಳಸಿಕೊಳ್ಳುವಂತೆ ತಹಸೀಲ್ದಾರರು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದ ರಂತೆ ನಗರಸಭೆ ಮತ್ತು ಸರ್ವೇ ಇಲಾಖೆ ಅಧಿಕಾರಿಗಳು ಜಂಟಿ ಪರಿಶೀಲನೆಗೆ ತೆರಳಿದಾಗ ಈ ಜಾಗದಲ್ಲಿ ಗುರುಪುರದ ದಸ್ತಾವೇಜು ಬರಹ ಗಾರ ರಮೇಶ್ ಅವರು ಕಟ್ಟಡವೊಂದನ್ನು ನಿರ್ಮಿಸಿರುವುದು ಕಂಡುಬಂದಿದೆ. ಅವರಿಂದ ಅಧಿಕಾರಿಗಳು ದಾಖಲೆಗಳನ್ನು ಕೇಳಿದಾಗ ಅವರು ನಗರಸಭೆಯಿಂದ ನೀಡಿದ್ದ ನಮೂನೆ-3 ಅನ್ನು ಕೊಟ್ಟಿದ್ದಾರೆ. ಅದನ್ನು ಪರಿಶೀಲನೆ ಮಾಡಲಾಗಿ ನಗರಸಭೆಯ ಹಿಂದಿನ ದ್ವಿತೀಯ ದರ್ಜೆ ಸಹಾಯಕಿ ಅನಿತಾಕುಮಾರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅದಕ್ಕೆ ಅಂದಿನ ನಗರ ಸಭಾ ಆಯುಕ್ತ ಶಿವಪ್ಪನಾಯಕ ಸಹಿ ಮಾಡಿ ರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ತಿಯನ್ನು ಖಾಸಗಿ ವ್ಯಕ್ತಿಗೆ ಅಕ್ರಮ ವಾಗಿ ಪರಭಾರೆ ಮಾಡಿರುವ ಸಂಬಂಧ ಕಾನೂನು ಕ್ರಮ ಕೈಗೊಳ್ಳುವಂತೆ ತಹಸೀಲ್ದಾರರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಹುಣಸೂರು ಪಟ್ಟಣ ಪೊಲೀಸರು ಭಾರತ ದಂಡಸಂಹಿತೆ 465, 468, 471, 420 ರೆಡ್‍ವಿತ್ 34ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತನಿಖೆ ವೇಳೆ ಹಿಂದಿನ ಆಯುಕ್ತ ಶಿವಪ್ಪನಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕಿ ಅನಿತಾಕುಮಾರಿ ತಪ್ಪಿತಸ್ಥರೆಂದು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಇಂದು ಅವರಿಬ್ಬರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಸದರಿ ಸ್ಥಳದಲ್ಲಿ ನಕಲಿ ದಾಖಲೆ ಆಧಾರದ ಮೇರೆಗೆ ದಸ್ತಾವೇಜು ಬರಹಗಾರ ರಮೇಶ್ ಕಟ್ಟಡ ನಿರ್ಮಿಸಿರುವುದು ಮಾತ್ರವಲ್ಲದೆ, ವ್ಯಕ್ತಿಯೋರ್ವ 30×40 ಅಳತೆಯಲ್ಲಿ ನಿವೇಶನಗಳನ್ನು ರಚಿಸಿ ಮಾರಾಟ ಮಾಡಿರುವುದು ಕೂಡ ಕಂಡುಬಂದಿದೆ. ಆ ವ್ಯಕ್ತಿಯಿಂದ ಜಾಗ ಖರೀದಿ ಮಾಡಿದ್ದವರೊಬ್ಬರು ಅಡಿಪಾಯವನ್ನು ಕೂಡ ಹಾಕಿದ್ದಾರೆ. ಸರ್ಕಾರಿ ಜಾಗದಲ್ಲಿ ನಿವೇಶನ ರಚಿಸಿ ಮಾರಾಟ ಮಾಡಿದ ವ್ಯಕ್ತಿಯು ಫಾರಂ 94ಸಿ ನಂತೆ ಅರ್ಜಿ ಸಲ್ಲಿಸಿ ತಾಲೂಕು ಕಚೇರಿಯಿಂದ ಖಾತೆ ಮಾಡಿಸಿಕೊಳ್ಳಬಹುದು ಎಂದು ಹೇಳಿದ್ದನಂತೆ. ಈ ವಿಚಾರವಾಗಿ ನಗರಸಭಾ ಸದಸ್ಯರಾದ ಹೆಚ್.ಪಿ. ಸತೀಶ್‍ಕುಮಾರ್ ಮತ್ತು ಸ್ವಾಮಿಗೌಡ ಅವರು ನಗರಸಭಾ ಆಯುಕ್ತರು ಮತ್ತು ಶಾಸಕರ ಗಮನ ಸೆಳೆದಿದ್ದರು. ಇತ್ತೀಚೆಗೆ ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಹೆಚ್.ಪಿ.ಮಂಜುನಾಥ್, ಹುಣಸೂರಿನಲ್ಲಿ ಸರ್ಕಾರಿ ಜಾಗಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಲಾಗುತ್ತಿದೆ. ಅಧಿಕಾರಿಗಳು ಸರ್ಕಾರಿ ಆಸ್ತಿ ಉಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ತಿಳಿಸಿದ್ದರು. ಆ ವೇಳೆ ಸಚಿವರು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಇಂದು ಬಂಧನಕ್ಕೊಳಗಾದ ಶಿವಪ್ಪನಾಯಕ ಅವರನ್ನು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಾಗಗಳನ್ನು ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟಿರುವುದು ಸೇರಿದಂತೆ ಹಲವಾರು ಆರೋಪಗಳ ಹಿನ್ನೆಲೆಯಲ್ಲಿ 2019ರಲ್ಲಿ ಅಮಾನತು ಮಾಡಲಾಗಿತ್ತು. ಅವರು ಈಗಲೂ ಅಮಾನತಿನಲ್ಲಿದ್ದಾರೆ. ಅದೇ ಆರೋಪದಡಿ ಅಮಾನತಾಗಿದ್ದ ಅನಿತಾಕುಮಾರಿ ಅವರು ಹಾಲಿ ಸರಗೂರು ಪಟ್ಟಣ ಪಂಚಾಯಿತಿಯ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Translate »