ಖಾಸಗಿಯವರಿಗೆ ಗೋಮಾಳ ನೀಡುವುದನ್ನು ಖಂಡಿಸಿ ಮೈಸೂರಲ್ಲಿ ಸಿಪಿಐ ಪ್ರತಿಭಟನೆ
ಮೈಸೂರು

ಖಾಸಗಿಯವರಿಗೆ ಗೋಮಾಳ ನೀಡುವುದನ್ನು ಖಂಡಿಸಿ ಮೈಸೂರಲ್ಲಿ ಸಿಪಿಐ ಪ್ರತಿಭಟನೆ

February 19, 2022

ಮೈಸೂರು,ಫೆ.18(ಎಂಟಿವೈ)- ರಾಜ್ಯದ ವಿವಿಧೆಡೆ ಗೋಮಾಳವನ್ನು ಖಾಸಗಿ ಸಂಘ-ಸಂಸ್ಥೆ, ಧಾರ್ಮಿಕ ಟ್ರಸ್ಟ್ ಹಾಗೂ ಉದ್ಯಮಿಗಳಿಗೆ ಭೋಗ್ಯ ಅಥವಾ ಬಾಡಿಗೆ ಆಧಾರದಲ್ಲಿ ನೀಡುವುದರಿಂದ ಹಿಂದೆ ಸರಿದು, ಬಗರ್ ಹುಕ್ಕುಂ ಅರ್ಜಿದಾರರಿಗೆ ಸಾಗುವಳಿ ಪತ್ರ ನೀಡುವಂತೆ ಆಗ್ರಹಿಸಿ ಸಿಪಿಐ ಕಾರ್ಯಕರ್ತರು ಮೈಸೂರಲ್ಲಿಂದು ಪ್ರತಿಭಟನೆ ಮಾಡಿದರು.

ಮೈಸೂರಿನ ಮಹಾತ್ಮಗಾಂಧಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರ ಗೋಮಾಳಗಳನ್ನು ಖಾಸಗಿಯವರಿಗೆ ನೀಡಲು ಮುಂದಾಗಿದೆ. ಹೀಗೆ, ರಾಜ್ಯದಲ್ಲಿ 19.39 ಲಕ್ಷ ಎಕರೆ ಗೋಮಾಳದ ಜಾಗವನ್ನು ಖಾಸಗಿ ಸಂಘ-ಸಂಸ್ಥೆ, ಧಾರ್ಮಿಕ ಕೇಂದ್ರ, ಟ್ರಸ್ಟ್ ಹಾಗೂ ಬೃಹತ್ ಉದ್ಯಮಿಗಳಿಗೆ ಗುತ್ತಿಗೆ ಅಥವಾ ಭೋಗ್ಯಕ್ಕೆ ನೀಡಲು ಸರ್ಕಾರ ಮುಂದಾಗಿದೆ. ಕಂದಾಯ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇದಕ್ಕೆ ಸಮ್ಮತಿಸಲಾಗಿದೆ. ಸರ್ಕಾರವೂ ಒಪ್ಪಿಗೆ ಸೂಚಿಸಿದೆ. ಒಮ್ಮೆ ಖಾಸಗಿ ಸಂಸ್ಥೆಗಳ ಹಿಡಿತಕ್ಕೆ ಗೋಮಾಳ ಹೋದರೆ ಮತ್ತೆ ವಶಕ್ಕೆ ಪಡೆ ಯುವುದು ಅಸಾಧ್ಯದ ಮಾತು. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಗೋಮಾಳವನ್ನು ಖಾಸಗಿ ಸಂಸ್ಥೆಗಳಿಗೆ ನೀಡ ಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರಾಜ್ಯದಲ್ಲಿ ಬಗರ್‍ಹುಕ್ಕುಂ ಸಾಗುವಳಿದಾರರು ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಸರ್ಕಾರ ಅವರ ಹಿತಕಾಯಲು ಮುಂದಾಗಿಲ್ಲ. ಬಗರ್ ಹುಕ್ಕುಂ ಸಾಗುವಳಿ ಭೂಮಿಯನ್ನು ಸಾಗುವಳಿ ಭೂಮಿಯೆಂದು ಪರಿಗಣಿಸಿ, ಕೂಡಲೇ ಹಕ್ಕು ಪತ್ರ ವಿತರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸರ್ಕಾರ ನಿವೇಶನರಹಿತರ ಸಮೀಕ್ಷೆ ನಡೆಸಿ, ಪಟ್ಟಿ ತಯಾರಿಸಿದೆ. ಈಗಾಗಲೇ ರಾಜ್ಯದಾದ್ಯಂತ ಲಕ್ಷಾಂತರ ಜನ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ನಿವೇಶನ ಮಂಜೂರು ಮಾಡಬೇಕು. ಇದÀಕ್ಕಾಗಿ ಸರ್ಕಾರಿ ಭೂಮಿಯನ್ನು ಮೀಸಲಿಡಬೇಕು ಎಂದು ಮನವಿ ಮಾಡಿದರು.

ಸರ್ಕಾರ ವಿವಿಧ ಉದ್ದೇಶಕ್ಕೆ ಭೂಸ್ವಾಧೀನ ಪಡಿಸಿ ಕೊಂಡಿರುವ ಭೂ ಮಾಲೀಕರಿಗೆ ಬದಲಿ ಭೂಮಿ ನೀಡಬೇಕು. ಪುನರ್‍ವಸತಿ ಯೋಜನೆ ಪೂರ್ಣಗೊಳ್ಳು ವವರೆಗೂ ಸರ್ಕಾರಿ ಭೂಮಿಯನ್ನು ಖಾಸಗಿ ಸಂಘ-ಸಂಸ್ಥೆಗಳಿಗೆ ನೀಡಬಾರದು. ಕಸ್ತೂರಿ ರಂಗನ್ ವರದಿ ಜಾರಿಮಾಡಿದರೆ ಹಲವು ಜಿಲ್ಲೆಗಳಲ್ಲಿ ಸಾವಿರಾರು ಮಂದಿ ಮನೆ ಹಾಗೂ ಭೂಮಿ ಕಳೆದುಕೊಳ್ಳ ಲಿದ್ದಾರೆ. ಇದರಿಂದ ಈಗಲೇ ಮುಂದಾಲೋಚನೆ ಯಿಂದ ಸರ್ಕಾರಿ ಭೂಮಿಯನ್ನು ಸಂತ್ರಸ್ತರಿಗೆ ನೀಡಲು ಕಾಯ್ದಿರಿಸುವಂತೆ ಒತ್ತಾಯಿಸಿದರು.

ಸಂಪುಟದಿಂದ ವಜಾಗೊಳಿಸಿ: ದೆಹಲಿಯ ಕೆಂಪು ಕೋಟೆ ಮೇಲೂ ಕೇಸರಿ ಧ್ವಜ ಹಾರಿಸುವುದಾಗಿ ಹೇಳಿಕೆ ನೀಡಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಗೊಳಿಸುವಂತೆಯೂ ಸಿಪಿಐ ಕಾರ್ಯಕರ್ತರು ಆಗ್ರ ಹಿಸಿದರು. ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವ ಕೆ.ಎಸ್.ಈಶ್ವರಪ್ಪ ಅವರಿಂದ ದೇಶದ್ರೋಹದ ಹೇಳಿಕೆ ನಿರೀಕ್ಷಿಸಲು ಸಾಧ್ಯವಿರಲಿಲ್ಲ. ಆದರೆ, ಅರಿವಿದ್ದು ರಾಷ್ಟ್ರಧ್ವಜದ ಬಗ್ಗೆ ಹೇಳಿಕೆ ನೀಡಿರುವುದಲ್ಲದೆ, ಶಿವಮೊಗ್ಗದಲ್ಲಿ ಕಾಲೇಜೊಂದರ ಧ್ವಜಸ್ತಂಭದಲ್ಲಿ ತ್ರಿವರ್ಣ ಧ್ವಜ ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಿದ್ದ ಘಟನೆಯನ್ನು ಸಮರ್ಥಿಸಿಕೊಳ್ಳುವಾಗ ದೆಹಲಿಯ ಕೆಂಪುಕೋಟೆಯಲ್ಲೂ ಕೇಸರಿ ಧ್ವಜ ಹಾರಿಸುತ್ತೇವೆ ಎಂದಿದ್ದಾರೆ. ಇದು ಖಂಡನೀಯ. ಇದನ್ನು ಗಂಭೀರ ವಾಗಿ ಪರಿಗಣಿಸಬೇಕು. ಅವರನ್ನು ಸಚಿವ ಸ್ಥಾನ ದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಪಿಐ ಪದಾಧಿಕಾರಿಗಳಾದ ಜೆಚ್. ಬಿ.ರಾಮಕೃಷ್ಣ, ಕೆ.ಎಸ್.ರೇವಣ್ಣ, ಸೋಮರಾಜೇ ಅರಸ್, ಮಹಾದೇವಮ್ಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »