ಒಕ್ಕಲಿಗರು ಜೆಡಿಎಸ್ ತಿರಸ್ಕರಿಸಬೇಕು
ಮೈಸೂರು

ಒಕ್ಕಲಿಗರು ಜೆಡಿಎಸ್ ತಿರಸ್ಕರಿಸಬೇಕು

March 2, 2022

ರಾಜ್ಯ ಒಕ್ಕಲಿಗರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಕೆ. ಮಹದೇವ್ ಮನವಿ

ಸಂಘಕ್ಕೆ ಆಡಳಿತಾಧಿಕಾರಿ ನೇಮಕವಾಗಿದ್ದರ ಹಿಂದೆ ದೇವೇಗೌಡರ ಕುಟುಂಬದ ಸ್ವಾರ್ಥವಿದೆ; ಆರೋಪ

ಮೈಸೂರು,ಫೆ.೨೮(ಪಿಎಂ)-ರಾಜ್ಯ ಒಕ್ಕಲಿಗರ ಸಂಘಕ್ಕೆ ಹೆಚ್.ಡಿ.ಕುಮಾರಸ್ವಾಮಿ ತಾವು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆಡಳಿತಾಧಿಕಾರಿ ನೇಮಕಕ್ಕೆ ಕ್ರಮ ಕೈಗೊಂಡಿದ್ದರು. ಇದು ಸಂಘ ಮತ್ತು ಸಮುದಾಯದ ಒಳತಿಗಲ್ಲ. ಬದಲಿಗೆ ಅವರ ಸ್ವಾರ್ಥಕ್ಕಾಗಿ ಎಂದು ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಕೆ.ಮಹದೇವ್ ದೂರಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಒಕ್ಕಲಿಗರ ಸಂಘ ಉಳಿಸಲು ಆಡಳಿತಾಧಿಕಾರಿ ನೇಮಕ ಮಾಡಬೇಕಾಯಿತು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತವರ ಕುಟುಂಬ ಹೇಳಿಕೊಳ್ಳುತ್ತಿದೆ. ಆದರೆ ಇದು ಶುದ್ಧ ಸುಳ್ಳು. ಇದರಲ್ಲಿ ಸಂಘದ ಹಿತದೃಷ್ಟಿ ಇರಲಿಲ್ಲ ಎಂದರು.

ಇದಕ್ಕೂ ಮೊದಲೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸುವಂತೆ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ್ದೆ. ಆದರೆ ಅಂದು ಸಿದ್ದರಾಮಯ್ಯ ಅವರೊಂದಿಗೆ ಒಳ್ಳೆಯ ಸ್ನೇಹ ಹೊಂದಿದ್ದ ದೇವೇಗೌಡರ ಕುಟುಂಬದವರು ಸಂಘದ ಆಗಿನ ಅಧ್ಯಕ್ಷ ಅಪ್ಪಾಜಿಗೌಡರನ್ನು ಉಳಿಸಿಕೊಳ್ಳುವ ಸಲುವಾಗಿ ಆಡಳಿತಾಧಿಕಾರಿ ನೇಮಕವಾಗದಂತೆ ನೋಡಿಕೊಂಡರು ಎಂದು ಆರೋಪಿಸಿದರು.

ಅಪ್ಪಾಜಿಗೌಡರ ನಂತರದಲ್ಲಿ ಅಧ್ಯಕ್ಷರಾದ ಬೆಟ್ಟೇಗೌಡರಿಂದ ಮಾಡಬಾರದ್ದನ್ನು ಇವರು ಮಾಡಿಸಿದರು. ಬೆಟ್ಟೇಗೌಡರ ಪದಚ್ಯುತಿಗೊಳಿಸಿದ ಮಾರನೇ ದಿನವೇ ಚುನಾವಣೆ ನಿಗದಿಯಾಗಿತ್ತು. ಆದರೆ ಅಷ್ಟರಲ್ಲಿ ಆಡಳಿತಾಧಿಕಾರಿ ನೇಮಕ ಮಾಡಿದರು. ಇದರಲ್ಲಿ ಅವರ ಸ್ವಾರ್ಥವಿದೆಯೇ ಹೊರತು ಸಂಘ ಮತ್ತು ಸಮುದಾಯದ ಒಳಿತಿನ ಉದ್ದೇಶ ವಿಲ್ಲ. ಹಾಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷವನ್ನು ಸಮುದಾಯ ತಿರಸ್ಕರಿಸಬೇಕು ಎಂದು ಕೋರಿದರು. ಮೈಸೂರು ವಿವಿಯ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿಗೆ ತಮ್ಮನ್ನು ಸದಸ್ಯರನ್ನಾಗಿ ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿದೆ ಎಂದು ಇದೇ ವೇಳೆ ಡಾ.ಮಹದೇವ್ ತಿಳಿಸಿದರು.

Translate »