ಜೂ.24ರಿಂದ ಶ್ರವಣಬೆಳಗೊಳದಲ್ಲಿ ಹಳಗನ್ನಡ ಸಾಹಿತ್ಯ ಸಮ್ಮೇಳನ
ಹಾಸನ

ಜೂ.24ರಿಂದ ಶ್ರವಣಬೆಳಗೊಳದಲ್ಲಿ ಹಳಗನ್ನಡ ಸಾಹಿತ್ಯ ಸಮ್ಮೇಳನ

June 22, 2018

ಹಾಸನ: ಜೈನಕಾಶಿ ಶ್ರವಣಬೆಳಗೊಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಥಮ ಬಾರಿಗೆ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ.

ಜೂ. 24, 25 ಹಾಗೂ 26ರಂದು ಚಾವುಂಡರಾಯ ಸಭಾಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನಿಂದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಹಾಗೂ ಡಾ.ಷ.ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಗೋಷ್ಠಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.

ಜೂ. 24 ರಂದು ಬೆಳಿಗ್ಗೆ 9.30ರಿಂದ 12.30ರವರೆಗೆ ವಿಶೇಷ ಆಹ್ವಾನಿತರಿಂದ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ನೇರವೇರಲಿದೆ. ಸಂಜೆ 4ರಿಂದ 6ರವರೆಗೆ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬಾಹುಬಲಿ ವಿಶ್ವಶಾಂತಿ ಸಂದೇಶ ಕವಿಗೋಷ್ಠಿ ಜರುಗಲಿದೆ.

ಜೂ. 25ರಂದು ಬೆಳಿಗ್ಗೆ 9.15ಕ್ಕೆ ಚಂದ್ರಗಿರಿಬೆಟ್ಟ ಮಹಾದ್ವಾರದಿಂದ, ಶ್ರವಣಬೆಳಗೊಳ ಮುಖ್ಯರಸ್ತೆ, ವಿಂಧ್ಯಗಿರಿ ಮಹಾದ್ವಾರ ಮಾರ್ಗವಾಗಿ ಚಾವುಂಡರಾಯ ಸಭಾಮಂಟಪದವರೆಗೆ ಸಮ್ಮೇಳಾನಾಧ್ಯಕ್ಷರ ಮೆರವಣ ಗೆ ನಡೆಯಲಿದೆ. 10.30ಕ್ಕೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು ಉದ್ಘಾಟನೆ ಮಾಡಲಿದ್ದಾರೆ. ಡಾ.ಷ.ಶೆಟ್ಟರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪದ್ಮರಾಜ ದಂಡಾವತಿ, ಹಂಪ ನಾಗರಾಜಯ್ಯ, ಡಾ.ಸಿ.ಪಿ.ಕೃಷ್ಣಕುಮಾರ್, ಹಿರಿಯ ಸಾಹಿತಿ ಚಂದ್ರಶೇಖರ ಪಾಡೀಲ, ಪ್ರೊ ಮಲ್ಲೆಪುರಂ ಜಿ.ವೆಂಕಟೇಶ್, ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ತು ಸದಸ್ಯ ಎಂ.ಎ.ಗೋಪಾಲಸ್ವಾಮಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 2ಗಂಟೆಗೆ ಡಾ.ಪುರೋಷತ್ತಮ ಬಿಳಿಮಲೆ ಇವರ ಅಧ್ಯಕ್ಷತೆಯಲ್ಲಿ ‘ಹಳೆಗನ್ನಡ ಸಾಹಿತ್ಯ ಮರುಸೃಷ್ಟಿಯ ಸವಾಲುಗಳು’ ಕುರಿತು ಗೋಷ್ಠಿ ನಡೆಯಲಿದೆ. ಸಂಜೆ 4.15ಕ್ಕೆ ಡಾ.ಪಿ.ವಿ.ನಾರಾಯಣ ಅವರ ಅಧ್ಯಕ್ಷತೆಯಲ್ಲಿ ‘9 ಮತ್ತು 10ನೇ ಶತಮಾನದ ಸಾಹಿತ್ಯದ ಅನನ್ಯತೆ’ ಬಗ್ಗೆ ಗೋಷ್ಠಿ ನಡೆಯಲಿದೆ. ಸಂಜೆ 6.15ರಿಂದ ರೋಹನ್ ಅಯ್ಯರ್ ಅವರಿಂದ ‘ಭಾವಗೀತೆಗಳು’ ಮತ್ತು ಬೆಂಗಳೂರಿನ ಸಮುದಾಯ ತಂಡದಿಂದ ಪ್ರಮೋದ್ ಶಿಗ್ಗಾಂವ ಅವರ ನಿರ್ದೇಶನದಲ್ಲಿ ‘ಪಂಪ ಭಾರತ ನಾಟಕ’ ನಡೆಯಲಿದೆ.
ಜೂ. 26 ಮಂಗಳವಾರ ಬೆಳಿಗ್ಗೆ 10ಗಂಟೆಗೆ ಡಾ.ಶ್ರೀಕಂಠ ಕೂಡಿಗೆ ಅವರ ಅಧ್ಯಕ್ಷತೆಯಲ್ಲಿ ‘11ನೇ ಶತಮಾನದ ಸಾಹಿತ್ಯ: ಹಿಂಸೆ, ಅಹಿಂಸೆಗಳ ನಿರ್ವಹಣೆ’ ವಿಷಯದ ಕುರಿತು ಗೋಷ್ಠಿ ಜರುಗಲಿದೆ. ಮಧ್ಯಾಹ್ನ 12ಕ್ಕೆ ಡಾ.ಎಸ್.ಪಿ.ಪದ್ಮಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ‘ಕನ್ನಡ ಶಾಸ್ತ್ರ ಕೃತಿಗಳು: ಮರು ಓದು’ ಕುರಿತು ಗೋಷ್ಠಿ ಜರುಗಲಿದೆ.

ಮಧ್ಯಾಹ್ನ 2.30ಕ್ಕೆ ಡಾ.ಎಂ.ಎಸ್.ಆಶಾದೇವಿ ಅವರ ಅಧ್ಯಕ್ಷತೆಯಲ್ಲಿ ‘ಹಳಗನ್ನಡ ಸಾಹಿತ್ಯದ ಪ್ರಸ್ತುತತೆ’ ಕುರಿತು ವಿಷಯ ಮಂಡನೆಯಾಗಲಿದ್ದು, ಸಂಜೆ 4ಕ್ಕೆ ಪಂಪ, ರನ್ನ ಅವರ ಹಳಗನ್ನಡವನ್ನು ಡಾ.ಶಾಂತಿನಾಥ ದಿಬ್ಬದ ಓದಲಿದ್ದಾರೆ. 4.30ಕ್ಕೆ ಡಾ.ಮನುಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನೇರವೇರಲಿದೆ.

ಲೋಕೊಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ, ಸಮ್ಮೇಳನಾಧ್ಯಕ್ಷ ಡಾ.ಷ.ಶೆಟ್ಟರ್ ಮತ್ತು ಡಾ.ಸಿದ್ದಲಿಂಗಯ್ಯ ಭಾಗವಹಿಸಲಿದ್ದಾರೆ.

ಸಂಜೆ 6.30ರಿಂದ ಶಿಗ್ಗಾವಿಯ ಸನ್ಮತಿ ಮಹಿಳಾ ಜಾನಪದ ಕಲಾ ತಂಡ ಮತ್ತು ಶ್ರವಣಬೆಳಗೊಳ ಅಂಬಿಕಾ ಜಾನಪದ ಕಲಾತಂಡದ ವತಿಯಿಂದ ಜಾನಪದ ಗೀತ ಗಾಯನ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

Translate »