ಕೊಡಗು-ಕೇರಳ ಗಡಿ ತೆರವಿಲ್ಲ
ಕೊಡಗು

ಕೊಡಗು-ಕೇರಳ ಗಡಿ ತೆರವಿಲ್ಲ

April 9, 2020

ಮಡಿಕೇರಿ, ಏ.8- ಕೇರಳ-ಕರ್ನಾಟಕ ಗಡಿ ಬಂದ್ ಮಾಡಿದ ಬಗ್ಗೆ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪು ಕೇರಳ ದಿಂದ ಮಂಗಳೂರು ಆಸ್ಪತ್ರೆಗೆ ತುರ್ತು ಅಗತ್ಯವಿರುವ ರೋಗಿಗಳನ್ನು ಸಾಗಿಸಲು ಮಾತ್ರ ಅನ್ವಯವಾಗುತ್ತದೆ. ಈ ಆದೇಶ ಕೊಡಗು ಮತ್ತು ಕೇರಳ ಹೆದ್ದಾರಿ ಗಡಿ ಬಂದ್‍ಗೆ ಅನ್ವಯಿಸುವುದಿಲ್ಲ ಎಂದು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ.

ಕೊಡಗು ಜಿಲ್ಲಾ ಗಡಿ ಬಂದ್ ಇದೇ ರೀತಿ ಮುಂದುವರಿಯುತ್ತದೆ. ಸದ್ಯದ ಪರಿ ಸ್ಥಿತಿಯಲ್ಲಿ ಕೊಡಗು ಅತ್ಯಂತ ಸುರಕ್ಷಿತ ವಾಗಿದ್ದು, ಯಾವುದೇ ಕಾರಣಕ್ಕೂ ಸೋಂಕು ಶಂಕಿತ ವ್ಯಕ್ತಿಗಳನ್ನು ಕೊಡಗು ಜಿಲ್ಲೆಗೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತಕ್ಕೆ ಸೂಚಿಸಿರುವು ದಾಗಿ ಕೆ.ಜಿ. ಬೋಪಯ್ಯ ಹೇಳಿದ್ದಾರೆ.

ಕರಿಕೆ-ಕೇರಳ, ವಿರಾಜಪೇಟೆ-ಕೇರಳ, ಪೆರುಂಬಾಡಿ ಗಡಿಗಳು ಎಂದಿನಂತೆ ಬಂದ್ ಆಗಿದ್ದು, ಯಾವುದೇ ವಾಹನ ಸಂಚಾರಕ್ಕೆ ಅವಕಾಶ ಇಲ್ಲದಾಗಿದೆ. ಈ ಗಡಿಗಳು ಕೇರಳ ದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವವರೆಗೂ ಬಂದ್ ಆಗುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿದ್ದು, ಜಿಲ್ಲೆಯ ಶಾಸಕರು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕೂಡ ಗಡಿ ಬಂದ್ ಬಗ್ಗೆ ಸರ್ವಾನು ಮತದ ಕಠಿಣ ನಿರ್ಧಾರವನ್ನು ತಳೆದಿದ್ದಾರೆ.

ಇನ್ನು ಮಡಿಕೇರಿ ಸುಳ್ಯ ತೆರಳುವ ರಾಷ್ಟ್ರೀಯ ಹೆದ್ದಾರಿ 275 ರ ಸಂಪಾಜೆ ಗಡಿಯಲ್ಲಿಯೂ ಚೆಕ್ ಪೋಸ್ಟ್ ಇದ್ದು, ಅಗತ್ಯ ಸೇವೆಗಳು, ತರಕಾರಿ, ದಿನಸಿ, ಹಣ್ಣು ಹಂಪಲುಗಳು, ವೈದ್ಯಕೀಯ ಸೇವೆ ಒದಗಿಸುವ ಎಲ್ಲಾ ರೀತಿಯ ವಾಹನಗಳ ಸಾಗಾಟಕ್ಕೆ ಅವಕಾಶ ನೀಡ ಲಾಗುತ್ತಿದೆ. ವೈದ್ಯಕೀಯ ಸೇವೆ ಹೊರತು ಪಡಿಸಿ ಉಳಿದ ವಾಹನಗಳು ಆಡಳಿತ ವ್ಯವಸ್ಥೆ ನೀಡಿರುವ ಅಧಿಕೃತ ಪಾಸ್ ಗಳನ್ನು ತೋರಿಸಬೇಕಿದೆ. ತಪ್ಪಿದಲ್ಲಿ ಅಂತಹ ವಾಹನಗಳ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆ.

ಇನ್ನು ಸಂಪಾಜೆಯ ಒಂದು ಭಾಗ ಭೌಗೋಳಿಕವಾಗಿ ಕೊಡಗು ಜಿಲ್ಲೆಗೆ ಸಂಬಂಧಿಸಿದ್ದರೂ ಕೂಡ ಸುಳ್ಯ, ದಕ್ಷಿಣ ಕನ್ನಡ ಆಡಳಿತ ವ್ಯವಸ್ಥೆಯ ತೀರ್ಮಾನ ಗಳು ಅನ್ವಯವಾಗುತ್ತವೆ. ಹೀಗಾಗಿ ಸಂಪಾಜೆ ಮತ್ತೊಂದು ಭಾಗದಲ್ಲಿ ಬೆಳಗ್ಗೆ 7 ಗಂಟೆಯಿಂದ 2 ಗಂಟೆಯವರೆಗೆ ಜನರಿಗೆ ದಿನಸಿ, ತರಕಾರಿ, ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಅತ್ತ ಕಡೆಗೆ ತೆರಳುವ ಸಂಪಾಜೆ ಗ್ರಾಮಸ್ಥರಿಗೆ ಚೆಕ್ ಪೋಸ್ಟ್ ಮೂಲಕ ತೆರಳಲು ಮುಕ್ತ ಅವಕಾಶ ನೀಡಿದ್ದು, ಇದು ಕೇವಲ ಬೆಳಗ್ಗೆ 7 ರಿಂದ 2 ಗಂಟೆಯವರೆಗೆ ಮಾತ್ರವೇ ಅನ್ವಯವಾಗುತ್ತದೆ.

Translate »