ಕೊನೆಗೂ ನಡೆದೇ ಹೋಯಿತು ಒಂದು ಹತ್ಯೆ!
ಮೈಸೂರು

ಕೊನೆಗೂ ನಡೆದೇ ಹೋಯಿತು ಒಂದು ಹತ್ಯೆ!

October 13, 2020

ಮೈಸೂರು, ಅ. 12(ಆರ್‍ಕೆ, ಪಿಎಂ)- ಕ್ಷುಲ್ಲಕ ಕಾರಣಕ್ಕೆ ನಿತ್ಯ ಸಣ್ಣಪುಟ್ಟ ಜಗಳಗಳಿಗೆ ಅಖಾಡವಾಗುತ್ತಿದ್ದ ಮೈಸೂರು-ನಂಜನ ಗೂಡು ಹೆದ್ದಾರಿಯ ಕೆ.ಎನ್.ಹುಂಡಿ ಬಳಿಯ ಟೋಲ್ ಪ್ಲಾಜಾದಲ್ಲಿ ಭಾನುವಾರ ರಾತ್ರಿ ಒಂದು ಹತ್ಯೆಯೇ ನಡೆದು ಹೋಗಿದೆ.

ಕಾರಿನ ಮಿರರ್‍ಗೆ ಹಾನಿಯಾಯಿತೆಂಬ ಕ್ಷುಲ್ಲಕ ಕಾರಣಕ್ಕೆ ಟೋಲ್ ಪ್ಲಾಜಾದ ಟೋಲ್ ಸಂಗ್ರಹ ಸಿಬ್ಬಂದಿಯೊಬ್ಬನನ್ನು ನಾಲ್ವರು ಯುವಕರ ಗುಂಪು ಹತ್ಯೆ ಮಾಡಿ, ಪರಾರಿ ಯಾಗಿದೆ. ಮೈಸೂರು ತಾಲೂಕಿನ ಕಡಕೊಳ ಗ್ರಾಮದ ಪ್ರಕಾಶ ಎಂಬುವವರ ಪುತ್ರ ಪಿ. ಗಣೇಶ್(23) ಹತ್ಯೆಯಾದ ಯುವಕ. ನಂಜನ ಗೂಡಿನ ಶ್ರೀಕಾಂತ್, ಮೈಸೂರಿನ ದೀಪಕ್ ಸೇರಿದಂತೆ ಇನ್ನಿಬ್ಬರು ಹತ್ಯೆ ಆರೋಪಿ ಗಳಾಗಿದ್ದು, ಅವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಕೆ.ಎನ್.ಹುಂಡಿ ಟೋಲ್ ಪ್ಲಾಜಾದಲ್ಲಿ ನಂಜನಗೂಡು ಕಡೆಯಿಂದ ಬರುವ ವಾಹನ ಗಳಿಂದ ಟೋಲ್ ಸಂಗ್ರಹಿಸುವ ಕೌಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್‍ನೊಂದಿಗೆ ಭಾನುವಾರ ರಾತ್ರಿ 10.55ರ ವೇಳೆಗೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದ ನಾಲ್ವರು ಯುವ ಕರ ಗುಂಪು, ತಮ್ಮ ಕಾರಿನ ಮಿರರ್‍ಗೆ ಹಾನಿ ಯಾಗಿದೆ ಎಂದು ಗಲಾಟೆಗಿಳಿದಿದೆ. ಇದು ವಿಕೋಪಕ್ಕೆ ತಿರುಗಿ ಕೊನೆಗೆ ಯುವಕರ ಗುಂಪು ಗಣೇಶನ ಬಲ ಕುತ್ತಿಗೆಗೆ ಮಾರ ಕಾಸ್ತ್ರದಿಂದ ಇರಿದು ಪರಾರಿಯಾಗಿದೆ. ತೀವ್ರ ರಕ್ತಸ್ರಾವವಾಗಿ ಒದ್ದಾಡುತ್ತಿದ್ದ ಗಣೇಶನನ್ನು ಟೋಲ್ ಪ್ಲಾಜಾದ ಸೂಪರ್‍ವೈಸರ್ ರಾಘ ವೇಂದ್ರ ಹಾಗೂ ಸಿಬ್ಬಂದಿ 108 ಆಂಬುಲೆನ್ಸ್‍ನಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆತಂದು ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬೆಳಿಗ್ಗೆ 7.30ರ ವೇಳೆಗೆ ಗಣೇಶ್ ಕೊನೆಯುಸಿರೆಳೆದನು. ಅ.10ರಂದು ರಾತ್ರಿ 10.30ರಲ್ಲಿ ಮೈಸೂರು ಕಡೆಯಿಂದ ಸ್ವಿಫ್ಟ್ ಕಾರಿನಲ್ಲಿ ಆ ಯುವಕರು ಬಂದಿದ್ದ ಸಂದರ್ಭದಲ್ಲಿ ಅಕಾಸ್ಮಾತಾಗಿ ಗಣೇಶ್‍ನ ಕೈ ತಗುಲಿ ಕಾರಿನ ಬಲಬದಿಯ ಮಿರರ್‍ಗೆ ಹಾನಿಯಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಗಣೇಶನೊಂದಿಗೆ ಯುವಕರು ಜಟಾಪಟಿ ನಡೆಸಿ ಹೋಗಿದ್ದರು. ಭಾನುವಾರ ಮತ್ತೆ ಬಂದು ತಮ್ಮ ಕಾರಿನ ಮಿರರ್ ಹಾನಿಯಾಗಿರುವುದನ್ನು ಸರಿಪಡಿಸಬೇಕೆಂದು ಜಗಳ ತೆಗೆದು ಗಣೇಶನ ಮೇಲೆ ಹಲ್ಲೆ ನಡೆಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಾರಾಣಾಂತಿಕ ಹಲ್ಲೆ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು, ಮಹಜರು ನಡೆಸಿದರಲ್ಲದೆ, ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ಶ್ವಾನದಳ, ಬೆರಳಚ್ಚು ಮುದ್ರೆ ಘಟಕದ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಪರಿಶೀಲಿಸಿದರು. ಶ್ರೀಕಾಂತ್, ದೀಪಕ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಇದೇ ಟೋಲ್‍ನಲ್ಲಿ ಟೋಲ್ ಪಾವತಿ ಸಂಬಂಧ ನಿಯಮಗಳನ್ನು ಗಾಳಿ ತೂರಲಾಗಿದೆ ಎಂದು ಆರೋಪಿಸಿ ಈ ಹಿಂದೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಇನ್ನಿತರೆ ಸಣ್ಣಪುಟ್ಟ ಗಲಾಟೆಗಳು ನಿತ್ಯ ಜರುಗುತ್ತಿದ್ದವು. ಆದರೆ ಈಗ ಕ್ಷುಲ್ಲಕ ವಿಚಾರಕ್ಕೆ ಹತ್ಯೆಯೇ ನಡೆದು ಹೋಗಿದ್ದು, ಇದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.

Translate »