ಇಬ್ಬರು ವಿದ್ಯಾರ್ಥಿಗಳ ಬಲಿ ಪಡೆದ ಚಿರತೆ ಸೆರೆ
ಮೈಸೂರು

ಇಬ್ಬರು ವಿದ್ಯಾರ್ಥಿಗಳ ಬಲಿ ಪಡೆದ ಚಿರತೆ ಸೆರೆ

December 24, 2022

ತಿ.ನರಸೀಪುರ, ಡಿ.23-ಇಬ್ಬರು ವಿದ್ಯಾರ್ಥಿ ಗಳ ಬಲಿ ಪಡೆದು, ಅರಣ್ಯ ಇಲಾಖೆ ಹಾಗೂ ತಾಲೂಕಿನ ಜನತೆ ನಿದ್ದೆಗೆಡಿಸಿದ್ದ ಚಿರತೆ ತಾಲೂಕಿನ ಮದ್ಗಾರಲಿಂಗಯ್ಯನ ಹುಂಡಿ ಗ್ರಾಮದ ಶ್ರೀ ಮಲ್ಲಿಕಾರ್ಜುನಸ್ವಾಮಿ ಬೆಟ್ಟದಲ್ಲಿ ಕೊನೆಗೂ ಸೆರೆ ಸಿಕ್ಕಿದೆ.

ಗುರುವಾರವಷ್ಟೇ ತಾಲೂಕಿನ ಮುತ್ತತ್ತಿ ಗ್ರಾಮದಲ್ಲಿ ಕೋಳಿ ತಿನ್ನಲು ಬಂದು ಚಿರತೆ ಬೋನಿಗೆ ಬಿದ್ದಿತ್ತು. ಮರುದಿನವೇ ವಿದ್ಯಾರ್ಥಿಗಳನ್ನು ಬಲಿ ಪಡೆದಿದ್ದ 8 ವರ್ಷದ ಗಂಡು ಚಿರತೆ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಬಿದ್ದಿದೆ. ಕಳೆದ ಅ.31 ರಂದು ಚಿರತೆ ಉಕ್ಕಲಗೆರೆ ಮಲ್ಲಪ್ಪನಬೆಟ್ಟ ದಲ್ಲಿ ಎಂ.ಎಲ್.ಹುಂಡಿ ಗ್ರಾಮದ ವಿದ್ಯಾರ್ಥಿ ಮಂಜುನಾಥ್ ಮೇಲೆ ದಾಳಿ ನಡೆಸಿ, ಕತ್ತು ಕಚ್ಚಿ ಸೀಳಿ ಕೊಂದು ಹಾಕಿತ್ತು. ಈ ಹಿನ್ನೆಲೆ ಯಲ್ಲಿ ಅರಣ್ಯ ಇಲಾಖೆಯವರು ಚಿರತೆ ಸೆರೆ ಹಿಡಿಯಲು
ತಕ್ಷಣ ಕಾರ್ಯಪ್ರವೃತ್ತರಾಗಿದ್ದರು. ಬೋನುಗಳನ್ನಿಟ್ಟು, ಬೆಟ್ಟದ ಭಾಗದಲ್ಲಿ 36ಕ್ಕೂ ಹೆಚ್ಚಿನ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದರು. ಆದರೆ ಚಿರತೆ ಅರಣ್ಯ ಇಲಾಖೆಯವರ ಕಣ್ಣಿಗೆ ಬೀಳದೆ ಡಿ.1ರಂದು ಮತ್ತೆ ತಾಲೂಕಿನ ಎಸ್.ಕೆಬ್ಬೇಹುಂಡಿ ಗ್ರಾಮದ ವಿದ್ಯಾರ್ಥಿನಿ ಮೇಘನಾಳನ್ನು ಬಲಿ ಪಡೆದಿತ್ತು. ಮೇಘನಾ ತಮ್ಮ ಮನೆಯ ಹಿತ್ತಲಿನಲ್ಲಿ ಪಾತ್ರೆ ತೊಳೆಯುವ ಸಂದರ್ಭ ದಾಳಿ ನಡೆಸಿತ್ತು. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಮೇಘನಾ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಶಾಸಕರ ನೇತೃತ್ವದಲ್ಲಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಅಲ್ಲದೇ ಎಂ.ಎಲ್.ಹುಂಡಿ ಮಠದ ಶ್ರೀ ಗೌರಿಶಂಕರ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ದಲಿತ ಸಂಘಟನೆ, ರೈತ ಸಂಘಟನೆ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ಬಳಿಕ ಅಲರ್ಟ್ ಆದ ಅರಣ್ಯ ಇಲಾಖೆ ವಿಶೇಷ ಪಡೆಯೊಂದಿಗೆ, ಡ್ರೋಣ್ ಕ್ಯಾಮೆರಾ ಬಳಸಿ ವೈಜ್ಞಾನಿಕ ತಂತ್ರಜ್ಞಾನ ಬಳಸಿ ಕಾರ್ಯಾಚರಣೆ ನಡೆಸಿದ್ದರೂ, ಸೆರೆ ಸಿಕ್ಕದ ನರಹಂತಕ ಚಿರತೆ, ಆನಂತರವೂ ಇಬ್ಬರ ಮೇಲೆ ದಾಳಿ ನಡೆಸಿತ್ತು. ಆದರೆ ಕಳೆದ 20 ದಿನಗಳಿಂದ ಬೆಟ್ಟದಲ್ಲಿ ಅಳವಡಿಸಿದ್ದ ಥರ್ಮಲ್ ಡ್ರೋಣ್ ಕ್ಯಾಮರಾದಲ್ಲಿ ಚಿರತೆ ಓಡಾಟ ಗಮನಿಸಿದ್ದ ಇಲಾಖೆಯ ಅಧಿಕಾರಿಗಳು ವಿಶೇಷ ಯೋಜನೆಯೊಂದನ್ನು ರೂಪಿಸಿ, ಚಿರತೆ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಟ್ಟಿಗೆ ಮಾದರಿಯ ಬೋನು ಅಳವಡಿಕೆ!: ಚಿರತೆ ಓಡಾಡುವ ಸ್ಥಳದಲ್ಲಿ ಅನೇಕ ಬೋನುಗಳನ್ನು ಇಟ್ಟರೂ ಸೆರೆ ಸಿಕ್ಕದ ಚಿರತೆಯ ಜಾಣ ನಡೆಯಿಂದ ಹತಾಶರಾಗಿದ್ದ ಅರಣ್ಯ ಸಿಬ್ಬಂದಿ, ಕೊನೆಗೆ ಮಲ್ಲಪ್ಪನ ಬೆಟ್ಟದಲ್ಲಿ ಚಿರತೆ ಸಂಚರಿಸುವ ಭಾಗದಲ್ಲಿ ಕೊಟ್ಟಿಗೆ ಮಾದರಿಯ ಬೋನನ್ನು ಅಳವಡಿಸಿದ್ದರು. ಬೋನಿನಲ್ಲಿ ತಿಪ್ಪೆಯ ಮಾದರಿ, ಮೇಕೆ, ಎಮ್ಮೆಯನ್ನು ಕಟ್ಟಿ, ಹೊಸ ರಣತಂತ್ರ ರೂಪಿಸಿದ್ದರು. ಕೊನೆಗೂ ಇಂದು ಮುಂಜಾನೆ 4 ಗಂಟೆಗೆ ವಿಶೇಷ ಬೋನಿಗೆ ಚಿರತೆ ಬೀಳುವ ಮೂಲಕ ಅರಣ್ಯ ಇಲಾಖೆಯವರ ಕಾರ್ಯಾಚರಣೆ ಯಶಸ್ವಿಯಾಗಿದೆ.

 ಶಾಸಕ ಅಶ್ವಿನ್ ಕುಮಾರ್ ಭೇಟಿ: ಚಿರತೆ ಸೆರೆ ಹಿಡಿಯುವಂತೆ ನಿನ್ನೆಯಷ್ಟೆ ಬೆಳಗಾವಿ ಅಧಿವೇಶದಲ್ಲಿ ಪ್ರಸ್ತಾಪ ಮಾಡಿದ್ದ ಶಾಸಕ ಎಂ.ಅಶ್ವಿನ್ ಕುಮಾರ್ ಚಿರತೆ ಸೆರೆಸಿಕ್ಕ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ನರ ಹಂತಕ ಚಿರತೆ ಸೆರೆ ಸಿಕ್ಕ ಸುದ್ದಿಯಿಂದ ಸಂತಸಗೊಂಡ ಅವರು ಚಿರತೆ ಸೆರೆ ಹಿಡಿಯಲು ಬಳಸಿದ ಕಾರ್ಯತಂತ್ರದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬನ್ನೇರು ಘಟ್ಟಕ್ಕೆ ರವಾನೆ: ಕಳೆದ ರಾತ್ರಿ ಸೆರೆ ಸಿಕ್ಕ ಚಿರತೆಯನ್ನು ಬನ್ನೇರುಘಟ್ಟ ವನ್ಯಧಾಮಕ್ಕೆ ಬಿಗಿ ಭದ್ರತೆಯೊಂದಿಗೆ ಸಾಗಿಸಲಾಯಿತು. ಚಿರತೆ ಸೆರೆಹಿಡಿಯಲು ಕಳೆದ ಎರಡು ತಿಂಗಳಿಂದಲೂ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮದ ಮುಖಂಡ ಅಡುಗೆ ಮಲ್ಲಿಕಾರ್ಜುನ ಸಹಕರಿಸಿದ್ದರು.

ಗ್ರಾಮಸ್ಥರು ನಿರಾತಂಕ: ಚಿರತೆ ಬೋನಿನಲ್ಲಿ ಸೆರೆಯಾಗಿರುವ ವಿಷಯ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಗ್ರಾಮಸ್ಥರು ತಂಡೋಪತಂಡವಾಗಿ ಬೆಟ್ಟದ ಕಡೆ ಧಾವಿಸಿ ಬಂದು ನರಹಂತಕ ಚಿರತೆ ನೋಡಲು ಮುಂದಾದರಾದರೂ, ಅರಣ್ಯ ಇಲಾಖೆ ಸಿಬ್ಬಂದಿ ಅವಕಾಶ ನೀಡಲಿಲ್ಲ. ಸೆರೆ ಸಿಕ್ಕಿರುವ ಚಿರತೆ ಜನರ ಕಂಡರೆ ರೊಚ್ಚಿಗೆದ್ದು, ಬೋನಿಗೆ ಅಪ್ಪಳಿಸಿ ಗಾಯಗೊಳ್ಳಬಹುದಾದ ಸಾಧ್ಯತೆ ಇದ್ದುದ್ದರಿಂದ ಯಾರಿಗೂ ಅವಕಾಶ ನೀಡಲಿಲ್ಲ.

ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆಯ ಸಿಎಫ್ ಡಾ. ಮಾಲತಿ ಪ್ರಿಯಾ, ಡಿಸಿಎಫ್‍ಗಳಾದ ಕೆ.ಕಮಲಾ ಕರಿಕಾಳನ್, ಡಾ. ವಿ.ಕರಿಕಾಳನ್, ಎಸಿಎಫ್ ಲಕ್ಷ್ಮಿಕಾಂತ್, ಆರ್‍ಎಫ್‍ಓ ನದೀಮ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ರಾಜೇಶ್, ಅರಣ್ಯಾಧಿ ಕಾರಿಗಳಾದ ಮಂಜುನಾಥ್, ಉಮೇಶ್, ಮಂಜುನಾಥ್, ಸಿಪಿಐ ಲೋಲಾಕ್ಷಿ ಇದ್ದರು.

Translate »