ರೈತರು ಸಾಲ ಮಾಡದೇ ಆರ್ಥಿಕವಾಗಿ ಸದೃಢವಾಗಿರುವಂತೆ ಯೋಜನೆ ರೂಪಿಸಿದ್ದೇನೆ
ಮಂಡ್ಯ

ರೈತರು ಸಾಲ ಮಾಡದೇ ಆರ್ಥಿಕವಾಗಿ ಸದೃಢವಾಗಿರುವಂತೆ ಯೋಜನೆ ರೂಪಿಸಿದ್ದೇನೆ

December 24, 2022

ಶ್ರೀರಂಗಪಟ್ಟಣ, ಡಿ.23-ನಾಡಿನ ಯುವ ಜನಾಂಗ, ರೈತರು ಹಾಗೂ ಬಡವರ ಏಳಿಗೆಗೆ ಅಗತ್ಯವಿರುವ ಶಾಶ್ವತ ಯೋಜನೆಗಳನ್ನು ಸಾಕಾರಗೊಳಿಸಲು ಜಿಲ್ಲೆಯ ಮತದಾರರು ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಮನವಿ ಮಾಡಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಗ್ರಾಮಕ್ಕೆ ಪಂಚರತ್ನ ರಥಯಾತ್ರೆ ಆಗಮಿಸಿದ ವೇಳೆ ಗ್ರಾಮಸ್ಥರನ್ನು ಉದ್ದೇ ಶಿಸಿ ಮಾತನಾಡಿದ ಅವರು, ಸಂಪೂರ್ಣ ಬಹುಮತದ ಸರ್ಕಾರವನ್ನು ರಚಿಸುವ ಅವಕಾಶವನ್ನು ಜೆಡಿಎಸ್‍ಗೆ ರಾಜ್ಯದ ಜನತೆ ನೀಡಿದರೆ, ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದರು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯ ಗಳಿಸಿದ ಫಲವಾಗಿ ಸಮ್ಮಿಶ್ರ ಸರ್ಕಾರದಲ್ಲಿ ರೈತರ 27 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಯಿತು. 2023ರಲ್ಲಿ ಪೂರ್ಣ ಪ್ರಮಾಣದ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಕೃಷಿಕರ ಬಾಳು ಹಸನಾಗಲು ಸೂಕ್ತ ಯೋಜನೆ ಜಾರಿಗೊಳಿಸುವುದು ನನ್ನ ಮುಂದಿರುವ ಮಹಾ ಉದ್ದೇಶ ಎಂದು ತಿಳಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಉತ್ತಮ ವಾತಾವರಣ ನಿರ್ಮಾ ಣವಾಗಿದೆ. ದೇವದುರ್ಗ ಸೇರಿದಂತೆ 40 ಕ್ಷೇತ್ರಗಳಲ್ಲಿ ಜೆಡಿಎಸ್ ಜಯ ಖಂಡಿತ, ಆ ಭಾಗದ 50 ತಾಲೂಕುಗಳಲ್ಲಿ ರಥ ಯಾತ್ರೆ ಸಂಚರಿಸಲಿದೆ ಎಂದು ಹೇಳಿದರು.

ಭತ್ತ, ಕಬ್ಬು, ತೆಂಗು ಸೇರಿದಂತೆ ವಿವಿಧ ಬೆಳೆ ಬೆಳೆಯುವ ರೈತರ ಸಂಕಷ್ಟ ಹೇಳ ತೀರದಾಗಿದೆ. ರೈತರ ಮನೆ ಬಾಗಿಲಿಗೆ ಖರೀದಿ ವ್ಯವಸ್ಥೆಯನ್ನು ಜಾರಿಗೊಳಿಸಿ ಆ ವರ್ಗವನ್ನು ಶಾಶ್ವತವಾಗಿ ನೆಮ್ಮದಿಯಾಗಿ ರಿಸುವ ಯೋಜನೆ ಜಾರಿಗೊಳಿಸಲು ಬದ್ಧ ಎಂದರು. ಶಾಸಕ ರವೀಂದ್ರ ಶ್ರೀಕಂಠಯ್ಯ ರನ್ನು ಮತ್ತೆ ಗೆಲ್ಲಿಸಿ. ಇವರು ನೇರವಾದಿ, ಕುತಂತ್ರ ರಾಜಕಾರಣಿಯಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕ ರಮೇಶ್ ಬಂಡೀಸಿದ್ದೇಗೌಡರನ್ನು ಕುಟುಕಿದರು.

ಪ್ರತಿ ಎಕರೆಗೆ 10 ಸಾವಿರ ಸಹಾಯಧನ: ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಪ್ರತಿ ಹಂಗಾಮಿನಲ್ಲಿ ರೈತರು ಬಿತ್ತನೆ ಕಾರ್ಯ ಪ್ರಾರಂಭಿಸುವ ಮುನ್ನವೇ, ಪ್ರತಿ ಎಕರೆಗೆ 10 ಸಾವಿರ ರೂ. ಸಹಾಯಧನ ನೀಡುವ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಸಹಾಯ ಧನವು ಪ್ರತಿ ಹಂಗಾಮು ಪ್ರಾರಂಭವಾಗುವ ಮೊದಲೇ ರೈತರ ಕೈ ಸೇರುವಂತೆ ಮಾಡಲಾಗುವುದು. ಇದರಿಂದಾಗಿ ರೈತರು ಯಾವುದೇ ಸಾಲ ಮಾಡದೇ ಕೃಷಿ ಕಾರ್ಯದಲ್ಲಿ ತೊಡಗಲು ಅನುಕೂಲವಾಗುವುದು ಎಂದರು.

ರೈತರ ಸಾಲಮನ್ನಾ ಮಾಡಿದ್ದು ನಿಮ್ಮ ಕುಮಾರಸ್ವಾಮಿ. ಮತ್ತೊಮ್ಮೆ ಪೂರ್ಣ ಬಹುಮತ ದೊಂದಿಗೆ ಸರ್ಕಾರ ರಚನೆಗೆ ಅವಕಾಶ ಕೊಡಿ. ನಾನು ಎರಡು ಬಾರಿ ಮುಖ್ಯಮಂತ್ರಿ ಯಾಗಿ ಸಾಲ ಮನ್ನಾ ಮಾಡಿದ್ದೇನೆ. ಸಾಲ ಮನ್ನಾದಿಂದ ಶಾಶ್ವತ ಪರಿಹಾರಗಳಿಲ್ಲ. ರೈತರು ಸಾಲ ಮಾಡಿಕೊಳ್ಳದ ರೀತಿಯಲ್ಲಿ ಆರ್ಥಿಕವಾಗಿ ಸದೃಢವಾಗಿ ಬದುಕುವ ರೀತಿಯಲ್ಲಿ ಪಂಚರತ್ನ ಯೋಜನೆಯಲ್ಲಿ ಅಳವಡಿಸಿದ್ದೇನೆ. ಈ ಬಗ್ಗೆ ಮಾಹಿತಿಗಳನ್ನು ರಾಜ್ಯದ ಪ್ರತೀ ಮನೆ ಮನೆಗೆ ತಲುಪಿಸುವ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

ಕೋವಿಡ್ ನಿಯಮ ಜಾರಿ ವಿಚಾರ: ಮೊದಲ ಹಂತದಲ್ಲಿ ಕೆಲವು ನಿಯಮಗಳನ್ನು ಕೊಟ್ಟಿದ್ದಾರೆ. ಮುಂದೆ ಯಾವ ರೀತಿ ಬದಲಾವಣೆಯಾಗುತ್ತೋ ಗೊತ್ತಿಲ್ಲ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಲಘುವಾಗಿ ಮಾತನಾಡಲ್ಲ. ಚೀನಾದಲ್ಲಿ ಮತ್ತೆ ದೊಡ್ಡ ಮಟ್ಟದಲ್ಲಿ ಕೋವಿಡ್ ಹಾವಳಿ ಹೆಚ್ಚಾಗಿದೆ. ಹೆಚ್ಚಿನ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು. ರಾಜ್ಯ, ರಾಷ್ಟ್ರದಲ್ಲಿ ಸಮಸ್ಯೆಗಳು ಏನಾಗುತ್ತೆ ನೋಡೋಣ. ನಾವು ಸಹಕಾರ ಕೊಡುತ್ತೇವೆ. ಆದರೆ ರಾಜಕೀಯ ಉದ್ದೇಶಕ್ಕಾಗಿ ಬೇರೆ ರೀತಿಯಲ್ಲಿ ವಿರೋಧ ಪಕ್ಷವನ್ನು ಕಟ್ಟಿಹಾಕುವ ವಾತಾವರಣ ನಿರ್ಮಾಣ ಮಾಡಲು ಹೋದರೆ. ಅದಕ್ಕೆ ನಮ್ಮ ಸಹಮತವಿಲ್ಲ ಎಂದರು. ಬಿಜೆಪಿ ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ, ಧರ್ಮದ ಹೆಸರಿನಲ್ಲಿ ಭಾವನಾತ್ಮಕವಾಗಿ ಜನರನ್ನು ಕೆಣಕಿ ರಾಜಕೀಯವಾಗಿ ಯಶಸ್ಸುಗಳಿಸಲು ಹೊರಟ್ಟಿದ್ದಾರೆ. ಮಂಡ್ಯ ಕರಾವಳಿ ಪ್ರದೇಶ ಅಲ್ಲ, ಮಂಡ್ಯ ಜನತೆ ಶ್ರಮ ಜೀವಿಗಳು. ಕರಾವಳಿ ಪ್ರದೇಶದ ಜೀವನ ಶೈಲಿ, ವಾತಾವರಣವೇ ಬೇರೆ. ಇಲ್ಲಿನ ಜನರು ಬಿಜೆಪಿ ಕುತಂತ್ರಗಳಿಗೆ ತಲೆಬಾಗುವವರಲ್ಲ. ಬಿಜೆಪಿ ಅವರಿಗೆ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದೇ ಮುಳುವಾಗಲಿದೆ. ಪಂಚಮಸಾಲಿ ಸಮು ದಾಯವನ್ನು 2ಎಗೆ ಸೇರಿಸಲು ಹಿಂದುಳಿದ ವರ್ಗಗಳ ವಿರೋಧವಿದೆ. ಯಾವ ಯಾವ ಸಮುದಾಯ ಪರಿಸ್ಥಿತಿ ಏನಾಗಿದೆ. ಆರ್ಥಿಕ, ಶೈಕ್ಷಣಿಕ ಹಾಗೂ ಅವರ ಪ್ರತಿನಿತ್ಯದ ಆದಾಯದ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಮೀಸಲಾತಿ ನಿಗದಿ ಮಾಡಬೇಕು. ಈಗ ಎಲ್ಲಾ ಸಮುದಾಯದಲ್ಲೂ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ ಆರಂಭವಾಗಿದೆ ಪ್ರತಿಯೊಬ್ಬರ ಹಕ್ಕನ್ನು ಕೊಡುವುದು ಸರ್ಕಾರದ ಜವಾಬ್ದಾರಿ. ಕಾಟಾಚಾರಕ್ಕೆ ಏನೋ ಮಾಡಿ ಜನರನ್ನು ಮೆಚ್ಚಿಸುತ್ತೇವೆ ಅಂದರೆ ಮುಂದಿನ ಚುನಾವಣೆಯಲ್ಲಿ ಜನ ಬುದ್ದಿ ಕಲಿಸುತ್ತಾರೆ. ಬಿಜೆಪಿಯ ಒಕ್ಕಲಿಗ ಮಂತ್ರಿಗಳು, ಒಕ್ಕಲಿಗ ಸಮಾಜದ ಬಗ್ಗೆ ಕೂಡ ಮಾತನಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ರವೀಂದ್ರ ನೇರ ಮಾತುಗಾರ: ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ನೇರ ಮಾತಿನ ನಾಯಕ. ಅವರಿಗೆ ಕುತಂತ್ರ ರಾಜಕಾರಣ ಮಾಡುವುದು ತಿಳಿದಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದಾರೆ. ಕಳೆದ ಬಾರಿ 43 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಅವರನ್ನು 80 ಸಾವಿರ ಮತಗಳ ಅಂತರದಿಂದ ಜಯಗಳಿಸಲು ಅಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಜನರ ಋಣ ತೀರಿಸಲು ನಾವಿಬ್ಬರು ಒಟ್ಟಾಗಿ ಕಾರ್ಯ ನಿರ್ವಹಿಸುತ್ತೇವೆ. ಕುತಂತ್ರಿಗಳ ಮಾತಿಗೆ ಮಣೆ ಹಾಕದೆ ರವೀಂದ್ರ ಅವರನ್ನು ಬೆಂಬಲಿಸಬೇಕು ಎಂದು ಹೇಳುವ ಮೂಲಕ ಶಾಸಕ ರವೀಂದ್ರ ಶ್ರೀಕಂಠಯ್ಯ ಪರವಾಗಿ ಮತ ಬೇಟೆ ಆರಂಭಿಸಿದರು. ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಮತದಾರರು ಜೆಡಿಎಸ್ ಬೆಂಬಲಿಸಿ ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದರು.

Translate »