ಜಯಚಾಮರಾಜೇಂದ್ರ ಒಡೆಯರ್ ಸ್ಮರಣೆ; ಪ್ರತಿಮೆ ಶಿಲ್ಪಿಗೆ ಸನ್ಮಾನ
ಮೈಸೂರು

ಜಯಚಾಮರಾಜೇಂದ್ರ ಒಡೆಯರ್ ಸ್ಮರಣೆ; ಪ್ರತಿಮೆ ಶಿಲ್ಪಿಗೆ ಸನ್ಮಾನ

July 19, 2020

ಮೈಸೂರು, ಜು.18(ಎಂಟಿವೈ)- ಮೈಸೂರು ಸಂಸ್ಥಾನದ 25ನೇ ಅರಸ ಶ್ರೀ ಜಯಚಾಮ ರಾಜೇಂದ್ರ ಒಡೆಯರ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಮೈಸೂರಿನ ಚಾಮ ರಾಜೇಂದ್ರ ವೃತ್ತದಲ್ಲಿರುವ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆಗೆ ಶನಿವಾರ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಪುಷ್ಪನಮನ ಸಲ್ಲಿಸಲಾಯಿತು. ಇದೇ ವೇಳೆ, ಪ್ರತಿಮೆ ರೂಪಿಸಿದ ಶಿಲ್ಪಿ ಅರುಣ್ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಶಿಲ್ಪಿ ಅರುಣ್ ಮಾತನಾಡಿ, ನಮ್ಮ ತಾತ ಶಿಲ್ಪಿ ಬಸವಣ್ಣನವರು ಶಿಲ್ಪಕಲೆ ಮತ್ತು ಶಿಲ್ಪವಿನ್ಯಾಸ ವೃತ್ತಿಯನ್ನು ಕುಲಕಸುಬಾಗಿಸಿಕೊಂಡಿದ್ದರು. 1953ರಲ್ಲಿ ಶಿಲ್ಪಕಲೆಯ ಕೆಲಸಗಳೇ ಇಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿದ್ದರಿಂದ ಅವರು ಬಾಂಬೆಗೆ ಹೋಗಲು ಮುಂದಾದರು. ಆಗ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಕರೆದು ಅರಮನೆ ಆವರಣದಲ್ಲಿ ಗಾಯತ್ರಿ ದೇವಾಲಯದ ಕೆತ್ತನೆ ಕಾರ್ಯದ ಕೆಲಸ ನೀಡಿದರು. ತಾತನಿಂದ ನಮ್ಮ ಕುಟುಂಬಕ್ಕೆ ಬಳುವಳಿಯಾಗಿ ಬಂದಿರುವ ಕಲೆಯನ್ನು ನಾನು ಮುಂದುವರೆಸಿದೆ. ಆಗ ಜಯಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆ ಕೆತ್ತನೆ ಮಾಡುವ ಅವಕಾಶ ಸಿಕ್ಕಿತು ಎಂದು ನೆನಪಿಸಿಕೊಂಡರು.

ಇದೇ ವೇಳೆ ಬಿಜೆಪಿ ಮಹಿಳಾ ಘಟಕದ ಮುಖಂಡರಾದ ಲಕ್ಷ್ಮಿದೇವಿ ಮಾತನಾಡಿ, ಸ್ವಾತಂತ್ರ್ಯ ದೊರೆತ ನಂತರ ಭಾರತ ಏಕೀಕರಣ ಸಂದರ್ಭದಲ್ಲಿ ಮೊದಲು ಪ್ರಜಾಪ್ರಭುತ್ವ ರಾಷ್ಟ್ರ ಸ್ಥಾಪನೆಗೆ ಬೆಂಬಲ ನೀಡಿದವರೇ ನಮ್ಮ ಜಯಚಾಮರಾಜೇಂದ್ರ ಒಡೆಯರ್. ಮೈಸೂರು ರಾಜ್ಯದ ಮೊದಲ ರಾಜ್ಯಪಾಲರಾಗಿ, ವಿಶ್ವಹಿಂದೂ ಪರಿಷತ್ ಪ್ರಪ್ರಥಮ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ದೇಶದ ಸಾಂಸ್ಕೃತಿಕ ಹಿರಿಮೆಯಾಗಿ ಮೈಸೂರು ನಗರ ಗುರುತಿಸಿಕೊಳ್ಳಲು ಜಯಚಾಮರಾಜೇಂದ್ರ ಒಡೆಯರ್ ಅವರೇ ಮುಖ್ಯ ಕಾರಣ ಎಂದು ಬಣ್ಣಿಸಿದರು. ಈ ಸಂದರ್ಭ ವಕೀಲ ಗೋಕಲ್ ಗೋವ ರ್ಧನ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಯುವ ಮುಖಂಡರಾದ ಅಜಯ್ ಶಾಸ್ತ್ರಿ, ಪ್ರಶಾಂತ್ ಭಾರ ದ್ವಾಜ್, ಗಗನ್, ಚಕ್ರಪಾಣಿ, ಮಧು, ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

Translate »