ಸ್ನೇಹಿತರಿಂದ ಆರೋಪಿಯ ಸಹೋದರನ ಹತ್ಯೆ
ಮೈಸೂರು

ಸ್ನೇಹಿತರಿಂದ ಆರೋಪಿಯ ಸಹೋದರನ ಹತ್ಯೆ

May 8, 2020

ಮೈಸೂರು, ಮೇ 7-ಮೈಸೂರಿನಲ್ಲಿ `ಗ್ಯಾಂಗ್ ವಾರ್’ ಆತಂಕ ಸೃಷ್ಟಿಯಾಗಿದೆ. 2 ದಿನಗಳ ಹಿಂದೆ ಮೈಸೂರಿನ ಕ್ಯಾತ ಮಾರನಹಳ್ಳಿಯಲ್ಲಿ ಹತ್ಯೆಗೀಡಾದ ಯುವಕನ ಸ್ನೇಹಿತರು ಗುರುವಾರ ರಾತ್ರಿ ಆರೋಪಿಯೋರ್ವನ ಸಹೋದ ರನನ್ನು ಇರಿದು ಹತ್ಯೆ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾರೆ.

ಗಾಯಿತ್ರಿ ಪುರಂನಲ್ಲಿ ಅಭೀಷ್ ಅಲಿ ಯಾಸ್ ಅಭಿ(22) ಎಂಬ ಯುವಕನನ್ನು ಇಂದು ಸಂಜೆ ಹತ್ಯೆ ಮಾಡಿದ ಇರ್ಫಾನ್ ಖಾನ್ ಮತ್ತು ಮಹೇಂದ್ರ ಅಲಿಯಾಸ್ ಬೆಂಕಿ ಮಹೇಂದ್ರ, ತಾವೇ ಉದಯ ಗಿರಿ ಠಾಣೆಯ ಅಪರಾಧ ವಿಭಾಗದ ಪೇದೆಯೋರ್ವರಿಗೆ ಕರೆ ಮಾಡಿ ತಮ್ಮ ಸ್ನೇಹಿತನ ಕೊಲೆಗೆ ಸೇಡು ತೀರಿಸಿ ಕೊಂಡಿರುವುದಾಗಿ ಹೇಳಿದ್ದಾರೆ. ಉದಯ ಗಿರಿ ಪೊಲೀಸರನ್ನು ಕ್ಯಾತಮಾರನಹಳ್ಳಿಯ ಹುಲಿಯಮ್ಮನ ದೇವಸ್ಥಾನದ ಬಳಿಗೆ ಕರೆಸಿಕೊಂಡ ಆರೋಪಿಗಳು, ತಾವು ಹತ್ಯೆ ಮಾಡಿದ ಯುವಕನ ಶವ ಬಿದ್ದಿದ್ದ ಸ್ಥಳಕ್ಕೆ ಕರೆದೊಯ್ದು, ತೋರಿಸಿದ್ದಾರೆ.

ಎರಡು ದಿನಗಳ ಹಿಂದೆ ಹತ್ಯೆಗೀಡಾದ ಸತೀಶ್‍ನನ್ನು ಕೊಲೆ ಮಾಡಿದ್ದ ಆರೋಪಿ ಗಳ ಪೈಕಿ ಕಿರಣ್ ಎಂಬಾತನ ಸಹೋದ ರನೇ ಇಂದು ಹತ್ಯೆಗೀಡಾದವನಾಗಿದ್ದು, ಸಂಜೆ ಈತನನ್ನು ಸತೀಶ್‍ನ ಸ್ನೇಹಿತರಾದ ಇರ್ಫಾನ್ ಖಾನ್ ಮತ್ತು ಮಹೇಂದ್ರ ಗಾಯಿತ್ರಿಪುರಂನ ಚರ್ಚ್ ಸಮೀಪವಿರುವ ವಾಟರ್ ಟ್ಯಾಂಕ್ ಬಳಿ ಹತ್ಯೆ ಮಾಡಿದ್ದಾರೆ. ಲಾಕ್‍ಡೌನ್‍ನಿಂದ ಸಾರ್ವಜನಿಕರ ಓಡಾಟ ವಿಲ್ಲದ ಕಾರಣ ಹತ್ಯೆ ನಡೆದಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ ಎಂದು ಹೇಳಲಾಗಿದೆ. ಸಂಜೆ 7.30ರ ಸುಮಾರಿ ನಲ್ಲಿ ಆರೋಪಿಗಳೇ ಸ್ವತಃ ಪೊಲೀಸರಿಗೆ ಕರೆ ಮಾಡಿ ತಿಳಿಸಿದಾಗಲೇ ಹತ್ಯೆ ವಿಷಯ ಗೊತ್ತಾಗಿದ್ದು. ಈ ಹತ್ಯೆ ಯಾವ ಸಮಯ ದಲ್ಲಿ ನಡೆದಿದೆ ಎಂಬುದು ವಿಚಾರಣೆ ನಂತರ ತಿಳಿಯಬೇಕಾಗಿದೆ. ಈ ಸಂಬಂಧ ನಜರ್‍ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ್ಯೆ ನಡೆದ ಸ್ಥಳವು ನಜರ್‍ಬಾದ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವುದರಿಂದ ಉದಯಗಿರಿ ಪೊಲೀಸರು ರಾತ್ರಿ 9 ಗಂಟೆ ಸುಮಾರಿನಲ್ಲಿ ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ನಜರ್‍ಬಾದ್ ಠಾಣಾ ಇನ್ಸ್‍ಪೆಕ್ಟರ್ ಶ್ರೀಕಾಂತ್, ದೇವ ರಾಜ ಉಪ ವಿಭಾಗದ ಎಸಿಪಿ ಶಶಿಧರ್, ಉದಯಗಿರಿ ಠಾಣೆ ಇನ್ಸ್‍ಪೆಕ್ಟರ್ ಪೂಣಚ್ಚ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತದೇಹ ವನ್ನು ವಶಪಡಿಸಿಕೊಂಡು ಶವಾಗಾರಕ್ಕೆ ರವಾನಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

ಹಿನ್ನೆಲೆ: ಮದ್ಯ ಮಾರಾಟ ಪುನರಾ ರಂಭವಾದ ಮೇ 4ರಂದು ರಾತ್ರಿ ಕ್ಯಾತ ಮಾರನಹಳ್ಳಿಯಲ್ಲಿ ಸತೀಶ್ ಎಂಬಾತ ನನ್ನು ಮಧು, ಕಿರಣ್ ಮತ್ತಿತರರು ಇರಿದು ಹತ್ಯೆ ಮಾಡಿದ್ದರು. ಆ ಸಂದರ್ಭದಲ್ಲಿ ಆರೋಪಿಗಳಾಗಿ ಮಧು ಮತ್ತು ಕಿರಣ್ ಅವರನ್ನು ಮಾತ್ರ ಗುರುತಿಸಲಾಗಿತ್ತು. ಅವರ ಜೊತೆಗಿದ್ದ ಇತರರ ಬಗ್ಗೆ ಆಗ ಮಾಹಿತಿ ಇರದ ಕಾರಣ ಎಫ್‍ಐಆರ್‍ನಲ್ಲಿ ಅವರಿಬ್ಬರ ಹೆಸರಿನ ಜೊತೆ ಇತರರು ಎಂದು ದಾಖಲಿಸಲಾಗಿತ್ತು. ಮಂಗಳವಾರದಂದು ಉದಯಗಿರಿ ಪೊಲೀಸರು ಮಧು ಮತ್ತು ಕಿರಣ್‍ನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಸತೀಶ್ ಬೈಕ್‍ನಲ್ಲಿ ತಮ್ಮನ್ನು ಅಡ್ಡಗಟ್ಟಿ ಗಲಾಟೆ ಮಾಡಿದ್ದರಿಂದ ತಾವು ಕುಡಿದು ಬಂದು ಆತ ಬರುವುದನ್ನೇ ಕಾಯುತ್ತಾ ನಿಂತಿದ್ದು, ಹತ್ಯೆ ಮಾಡಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದರು. ಇತ್ತ ಸತೀಶ್‍ನ ಸ್ನೇಹಿತರಾದ ಇರ್ಫಾನ್ ಖಾನ್ ಮತ್ತು ಮಹೇಂದ್ರ ತಮ್ಮ ಗೆಳೆಯನ ಹತ್ಯೆಗೆ ಪ್ರತೀಕಾರ ತೀರಿಸಿ ಕೊಳ್ಳಲು ಹೊಂಚು ಹಾಕಿ ಆರೋಪಿ ಕಿರಣ್‍ನ ಸಹೋದರ ಅಭೀಷ್‍ನನ್ನು ಇಂದು ಹತ್ಯೆ ಮಾಡಿದ್ದಾರೆ. ಈ ಪ್ರತೀಕಾರದ ಕಿಡಿ ಮುಂದುವರೆದು ಗ್ಯಾಂಗ್ ವಾರ್ ಆಗಿ ಮಾರ್ಪಡುವುದೇ ಎಂಬ ಆತಂಕ ಈಗ ಕ್ಯಾತಮಾರನಹಳ್ಳಿಯಲ್ಲಿ ಮನೆ ಮಾಡಿದೆ.

Translate »