ಏಪ್ರಿಲ್ ಬಳಿಕ ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ
ಮೈಸೂರು

ಏಪ್ರಿಲ್ ಬಳಿಕ ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ

January 18, 2021

ಮೈಸೂರು,ಜ.17(ಆರ್‍ಕೆಬಿ)-ಮುಂದಿನ ಏಪ್ರಿಲ್ ಬಳಿಕ ರಾಜ್ಯದ ಜನತೆ ಹೊಸ ಮುಖ್ಯಮಂತ್ರಿ ಯನ್ನು ಕಾಣುವ ಸಾಧ್ಯತೆಗಳಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಆರ್‍ಎಸ್‍ಎಸ್ ಮೂಲ ಗಳಿಂದ ಬಂದಿರುವ ಮಾಹಿತಿ ಕುರಿತು ಹೇಳುತ್ತಿದ್ದೇನೆ. ಏಪ್ರಿಲ್ ನಂತರ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅಗುವ ಸಾಧ್ಯತೆಗಳಿವೆ. ಯಡಿ ಯೂರಪ್ಪ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇನ್ನೇನು ತೆಗೆಯುತ್ತೇನೆ ಎಂದು ಹೇಳುವುದಕ್ಕೆ ಅಗುತ್ತಾ? ಎಂದು ಪ್ರಶ್ನಿಸಿದರು.

ಯಾವುದೇ ಪಕ್ಷದ ವರಿಷ್ಠರಾದರೂ ತೆಗೆಯುತ್ತೇವೆ ಎಂದು ಹೇಳುವುದಿಲ್ಲ. ಹೈಕಮಾಂಡ್ ತೆಗೆಯುತ್ತೇನೆ ಎಂದರೆ ಸರ್ಕಾರ ನಡೆಯುತ್ತದೆಯೇ, ಕೆಲಸ ಮಾಡುವುದಕ್ಕೆ ಆಗುತ್ತದೆಯೇ. ಹಾಗಾಗಿ ಅವರು ಆ ರೀತಿ ಹೇಳಿರಬಹುದು. ಆದರೆ ನನಗೆ ಬಂದಿರುವ ಮಾಹಿತಿಗಳ ಪ್ರಕಾರ ಏಪ್ರಿಲ್ ನಂತರ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದು ವರಿಯುವ ಸಾಧ್ಯತೆಗಳು ಕಡಿಮೆ ಎಂದರು. ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಿಡಿ ಬ್ಲಾಕ್‍ಮೇಲ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸಿಡಿಯಲ್ಲಿ ಏನೇನು ಇದೆ ಎಂಬುದು ಬಹಿರಂಗವಾಗಬೇಕು. ಹಾಗಾಗಿ ಅದು ತನಿಖೆಯಾಗಬೇಕು. ಯಡಿಯೂರಪ್ಪ ಈ ವಯಸ್ಸಿನಲ್ಲಿ ಏನೇನು ಮಾಡಿದ್ದಾರೋ ಯಾರಿಗೆ ಗೊತ್ತು. ಅದು ಅಸಹ್ಯವಾಗಿ ಬೇರೆ ಇದೆಯಂತಲ್ಲಪ್ಪ. ಅದು ಗೊತ್ತಾಗಬೇಕು ಅಲ್ಲವೇ? ಈ ಬಗ್ಗೆ ತನಿಖೆಯಾಗಬೇಕು ಎಂದು ವ್ಯಂಗ್ಯವಾಗಿ ಹೇಳಿದರು. ಶರತ್ ಬಚ್ಚೇಗೌಡ ಕಾಂಗ್ರೆಸ್ ನಾಯಕರ ಭೇಟಿಯಾಗಿರುವ ಕುರಿತು ತಿಳಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗ್ರಾಪಂ ಚುನಾವಣೆಯಲ್ಲಿ ನಮ್ಮ ಪಕ್ಷ ಮತ್ತು ಶರತ್ ಸೇರಿ ಚುನಾವಣೆ ನಡೆಸಿದ್ದರಿಂದ ಹೊಸಕೋಟೆ ಕ್ಷೇತ್ರದಲ್ಲಿ ಶೇ.70ರಷ್ಟು ಬೆಂಬಲಿತರು ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನನಗೆ ಧನ್ಯವಾದ ಹೇಳಲು ಬಂದಿದ್ದರು. ಅವರು ಪಕ್ಷಕ್ಕೆ ಬರುವ ಬಗ್ಗೆ ಮಾತುಕತೆ ನಡೆಯುತ್ತಿದ್ದು, 15 ದಿನಗಳಲ್ಲಿ ಈ ಬಗ್ಗೆ ತೀರ್ಮಾನವಾಗಲಿದೆ ಎಂದು ತಿಳಿಸಿದರು.

 

 

Translate »