ದಸರಾ ವೇಳೆ ಮಾತ್ರ ಬೆಳಗುವ ದೀಪಗಳು!
ಮೈಸೂರು

ದಸರಾ ವೇಳೆ ಮಾತ್ರ ಬೆಳಗುವ ದೀಪಗಳು!

February 9, 2022

ಮೈಸೂರು, ಫೆ.8(ಜಿಎ)- ಮೈಸೂರು ಅರಮನೆಯ ಸುತ್ತಲೂ ಇರುವ ಪಾರಂಪರಿಕ ಅಲಂಕಾರಿಕ ದೀಪಗಳು ಕೇವಲ ದಸರಾ ಮಹೋತ್ಸವದಲ್ಲಿ ಜಗಮಗಿಸುತ್ತದೆ. ಆದರೆ ಉಳಿದ ದಿನಗಳಲ್ಲಿ ಧೂಳು ಹಿಡಿಯುತ್ತವೆ.

ಮೈಸೂರು ಎಂದರೆ ಪ್ರವಾಸಿಗರ ತಾಣ. ಅಂತಹ ಮೈಸೂ ರಿಗೆ ಬರುವ ಪ್ರವಾಸಿಗರು ಬೆಳಗ್ಗಿನಿಂದ ಚಾಮುಂಡಿಬೆಟ್ಟ, ಮೃಗಾಲಯ, ಕಾರಂಜಿ ಕೆರೆ ಸೇರಿದಂತೆ ಅನೇಕ ಪ್ರವಾಸಿ ತಾಣಗಳನ್ನು ನೋಡಿ ನಂತರ ಸಂಜೆ ಅರಮನೆ ನೋಡಲು ಆಗಮಿಸುತ್ತಾರೆ. ಅದರಲ್ಲಿಯೂ ಪ್ರಮುಖವಾಗಿ ಅರಮನೆ ದೀಪ, ಸುತ್ತಲಿನ ಪಾರಂಪರಿಕ ಅಲಂಕಾರಿಕ ದೀಪಗಳನ್ನು ನೋಡಿ ಸವಿಯುತ್ತಾರೆ. ಅಂತಹ ಅರಮನೆಯ ಸುತ್ತಲೂ ಇರುವ ರಾಜ ಪಥಗಳನ್ನು ಆಕರ್ಷಕವಾಗಿ ಕಾಣಲು ವಿಶೇಷ ವಾದ ಪಾರಂಪರಿಕ ಅಲಂಕಾರಿಕ ದೀಪಗಳನ್ನು 2011ರಲ್ಲಿ ಅಳವಡಿಸಿದೆ. ಆದರೆ ಆ ದೀಪಗಳಿಗೆ ಸೂಕ್ತವಾಗಿ ವೈರಿಂಗ್ ಮಾಡದೇ ಅವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.

ಕೇವಲ ದಸರಾ ಸಂದರ್ಭದಲ್ಲಿ ಪ್ರವಾಸಿಗರನ್ನು ಮತ್ತು ದಸರಾ ಮೆರಗು ಹೆಚ್ಚಲು ಮೇಲು ಭಾಗದಿಂದ ವೈರ್ ಗಳನ್ನು ಅಳವಡಿಸಿ ದೀಪಗಳು ಕಾರ್ಯ ನಿರ್ವಹಿಸುವಂತೆ ಮಾಡಿದ್ದಾರೆ. ಆದ್ದರಿಂದ ಈ ಪಾರಂಪರಿಕ ಅಲಂಕಾರಿಕ ದೀಪಗಳು ದಸರಾ ಸಂದರ್ಭಕ್ಕೆ ಮಾತ್ರ ಸೀಮಿತವಾಗಿವೆ.

ಅಂದಿನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಅವರು ಮೈಸೂರಿನ ರಾಜ ಪಥಗಳ ಬಗ್ಗೆ ವಿಶೇಷವಾಗಿ ಗಮನಹರಿಸಿ ರಾಜಪಥಗಳಿಗೆ ಪಾರಂ ಪರಿಕ ಮಾದರಿಯ ಕಲ್ಲುಗಳನ್ನು ಅಳವಡಿಸುವುದು ಮತ್ತು ಪಾರಂಪರಿಕ ಅಲಂಕಾರಿಕ ದೀಪಗಳನ್ನು ಅಳವಡಿಸುವು ದಕ್ಕೆ 100 ಕೋಟಿಯಲ್ಲಿ ಈ ಯೋಜನೆಯನ್ನು ತಂದಿ ದ್ದರು ಎಂದು ವಾರ್ಡ್ ನಂ 51ರ ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.
ಈ ಯೋಜನೆಯ ಟೆಂಡರ್ ಪಡೆದವರು ಕಾಮಗಾರಿ ಯನ್ನು ಪೂರ್ಣಗೊಳಿಸದೆ ಅರ್ಧಕ್ಕೆ ಕೈಬಿಟ್ಟರು. ಈ ಸಂಬಂಧ ಟೆಂಡರ್‍ದಾರ ಮತ್ತು ಪಾಲಿಕೆ ನಡುವೇ ಕೋರ್ಟ್‍ನಲ್ಲಿ ಕೇಸ್ ನಡೆಯುತ್ತಿದೆ. ದೀಪಗಳಿಗೆ ಓವರ್ ಹೆಡ್ ವೈರಿಂಗ್ ಮಾಡಿದ್ದು, ಅದರಿಂದ ಕೇವಲ 3 ಗಂಟೆಗಳು ಮಾತ್ರ ಈ ದೀಪಗಳನ್ನು ಬಳಸಬಹುದು. ಅದಕ್ಕಿಂತ ಹೆಚ್ಚಿನ ಸಮಯ ಬಳಕೆ ಮಾಡಿದರೆ, ಲೈಟ್‍ಗಳು ಹಾಳಾಗುವ ಸಾಧ್ಯತೆ ಹೆಚ್ಚಿದೆ. ಕೆಲವೇ ದಿನಗಳಲ್ಲಿ ಪಾರಂಪರಿಕ ದೀಪ ಗಳ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

Translate »