ವಾಹನ ತಪಾಸಣೆ ವೇಳೆ ಯುವಕರಿಂದ ಭಾರೀ ಹೈಡ್ರಾಮಾ
ಮೈಸೂರು

ವಾಹನ ತಪಾಸಣೆ ವೇಳೆ ಯುವಕರಿಂದ ಭಾರೀ ಹೈಡ್ರಾಮಾ

February 9, 2022

ಮೈಸೂರು, ಫೆ.8(ಜಿಎ)- ಮೈಸೂರಿನ ಆಯುರ್ವೇದ ಆಸ್ಪತ್ರೆ ವೃತ್ತದಲ್ಲಿ ಮಂಗಳವಾರ ಸಂಚಾರ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹೈಡ್ರಾಮ ನಡೆದಿದ್ದು, ಮೂವರ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ, ಹಲ್ಲೆಗೂ ಮುಂದಾ ಗಿದ್ದಾರೆ ಎಂದು ನರಸಿಂಹರಾಜ ಸಂಚಾರಿ ಪೊಲೀಸರ ದೂರಿನ ನ್ವಯ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ವಿಶ್ವೇಶ್ವರ ನಗರದ ನಿವಾಸಿಗಳಾದ ಆಕಾಶ್, ವಿಕಾಸ್ ಮತ್ತು ಅವಿನಾಶ್ ಎಂಬ ಮೂವರು ಯುವಕರÀ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ನರಸಿಂಹರಾಜ ಸಂಚಾರ ಠಾಣೆ ಪೊಲೀಸರು ಎಂದಿನಂತೆ ಮಂಗಳವಾರ ಸಂಜೆ ಆಯುರ್ವೇದ ಆಸ್ಪತ್ರೆ ವೃತ್ತದ ಬಳಿ ವಾಹನ ತಪಾಸಣೆ ನಡೆಸುತ್ತಿ ದ್ದರು. ಆ ವೇಳೆ ಓಮಿನಿ ವ್ಯಾನ್ ತಡೆದ ಪೊಲೀ ಸರು, ಚಾಲಕನ ಬಳಿ ತೆರಳಿ ವಾಹನಕ್ಕೆ ಸಂಬಂ ಧಿಸಿದ ದಾಖಲೆ ಕೇಳಿದ್ದಾರೆ. ಆಗ ದಾಖಲೆ ಗಳು ಮನೆಯಲ್ಲಿವೆ ಎಂದು ತಿಳಿಸಿದ ಚಾಲಕ, ಡಿಎಲ್ ತೋರಿಸುವುದಕ್ಕೂ ನಿರಾಕರಿಸಿದ್ದಾನೆ.

ಚಾಲಕನ ವರ್ತನೆಯಿಂದ ಆತ ಮದ್ಯಪಾನ ಮಾಡಿರಬಹುದು ಎಂದು ಅನುಮಾನಿಸಿ, ವೈದ್ಯಕೀಯ ತಪಾಸಣೆಗೆಂದು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದಾಗ ಆತ ಪ್ರತಿರೋಧಿಸಿದ್ದಾನೆ. ಅಲ್ಲದೆ ವ್ಯಾನ್‍ನಲ್ಲಿದ್ದ ಆತನ ಕುಟುಂಬ ಸದಸ್ಯರೂ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ವ್ಯಾನ್ ಚಾಲಕ, ಪಿಎಸ್‍ಐ ನಾಗರಾಜ್ ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ.

ವ್ಯಾನ್ ಚಾಲಕ ಹಾಗೂ ಕುಟುಂಬ ಸದಸ್ಯರು ಮತ್ತು ಪೊಲೀಸರ ನಡುವೆ 2 ಗಂಟೆಗಳ ಕಾಲ ಚಟಾಪಟಿ ನಡೆದಿದೆ. ವ್ಯಾನ್ ಚಾಲಕ ರಸ್ತೆಯಲ್ಲೇ ಮಲಗಿ, ಪ್ರತಿಭಟಿಸಿದ್ದರಿಂದ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದರು. ಪೊಲೀಸರು ಹಾಗೂ ಸಾರ್ವಜನಿಕರು ಸತತ ಪ್ರಯತ್ನದಿಂದ ವ್ಯಾನ್‍ನಲ್ಲಿ ಬಂದಿದ್ದವರನ್ನು ಮನವೊಲಿಸಿ, ದೇವರಾಜ ಪೊಲೀಸ್ ಠಾಣೆಗೆ ಕಳುಹಿಸಿದರು.

ವಾಹನ ತಪಾಸಣೆ ನಡೆಸುವ ಸಂದರ್ಭದಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ಸಂಯಮದಿಂದ ವರ್ತಿಸಬೇಕು. ಯಾರೂ ದರ್ಪದಿಂದ ನಡೆದುಕೊಳ್ಳಬಾರದು. ಅಸಂಬದ್ಧ ಮಾತುಗಳನ್ನಾಡ ಬಾರದು. ದಾಖಲೆಗಳಿದ್ದರೂ ಅನಗತ್ಯವಾಗಿ ತಪಾಸಣೆ ವಿಳಂಬ ಮಾಡಬಾರದು. ವಾಹನ ಚಾಲಕರು ಹಾಗೂ ಪೊಲೀಸರು ತಾಳ್ಮೆ ಕಳೆದುಕೊಳ್ಳಬಾರದು. ಹೀಗೆ ಸಾರ್ವಜನಿಕ ಸ್ಥಳದಲ್ಲಿ ಮಾತಿನ ಚಕಮಕಿ ನಡೆಸಿ, ಅಸಹ್ಯವಾಗಿ ನಡೆದುಕೊಳ್ಳಬಾರದು ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು ಮಾತನಾಡಿಕೊಳ್ಳುತ್ತಿದ್ದರು.

Translate »