ಮಳೆಗಾಲ ಆರಂಭ; ಶ್ರೀರಾಂಪುರ 2ನೇ ಹಂತ ನಿವಾಸಿಗಳಲ್ಲಿ ಮನೆಗೆ ನೀರು ನುಗ್ಗುವ ಭೀತಿ
ಮೈಸೂರು

ಮಳೆಗಾಲ ಆರಂಭ; ಶ್ರೀರಾಂಪುರ 2ನೇ ಹಂತ ನಿವಾಸಿಗಳಲ್ಲಿ ಮನೆಗೆ ನೀರು ನುಗ್ಗುವ ಭೀತಿ

April 27, 2020

ಮೈಸೂರು,ಏ.26(ಎಸ್‍ಪಿಎನ್)-ಕಸ-ಕಡ್ಡಿ ತುಂಬಿಕೊಂಡು, ಹುಲ್ಲು ಬೆಳೆದು ನೀರು ಹರಿಯಲಾಗದೇ ಕಟ್ಟಿಕೊಂಡಿರುವ ರಾಜಕಾಲುವೆ ಸ್ವಚ್ಛಗೊಳಿಸುವಂತೆ ಮೈಸೂರಿನ ಶ್ರೀರಾಂಪುರ 2ನೇ ಹಂತ ಹಾಗೂ ಸುತ್ತಲಿನ ನಿವಾಸಿಗಳು ನಗರಪಾಲಿಕೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಶ್ರೀರಾಂಪುರ 2ನೇ ಹಂತ ಹಾಗೂ ಸುತ್ತಲ ಜನತೆಗೆ ಕೋವಿಡ್-19 ಭೀತಿ ಒಂದೆಡೆಯಾದರೆ, ಇನ್ನೊಂದೆಡೆ ಮಳೆಗಾಲ ಆರಂಭವಾಗಿರು ವುದು ಆತಂಕವನ್ನು ಹೆಚ್ಚಿಸಿದೆ. ರಾಜಕಾಲುವೆ ಪಕ್ಕದ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಪ್ರತಿ ಬಾರಿ ಮಳೆ ಬಿದ್ದಾಗಲೂ ಈ ರಾಜಕಾಲುವೆ ಅಕ್ಕ-ಪಕ್ಕದ ಮನೆಗಳಿಗೆ ನೀರು ನುಗ್ಗುವುದು ಮಾಮೂಲಾಗಿದೆ. ಆದರೆ, ಈ ಬಾರಿ ಮಳೆ ನೀರು ನುಗ್ಗಿ, ಸಾಂಕ್ರಾಮಿಕ ರೋಗಗಳು ಹರಡಿದರೆ ಏನು ಗತಿ ಎನ್ನುತ್ತಾರೆ ನಿವಾಸಿ ಉಮೇಶ್.

2 ವರ್ಷ ಹಿಂದಿನ ಮಳೆಗಾಲದಲ್ಲಿ ಬೋಗಾದಿ ಕೆರೆ ಏರಿ ಒಡೆದು, ಮೈಸೂರು ವಿವಿ, ಸರಸ್ವತಿಪುರಂ, ಕುವೆಂಪುನಗರ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಸುರಿದ ಮಳೆ ನೀರು ಇಸ್ಕಾನ್ ದೇವಸ್ಥಾನ ಪಕ್ಕದ ರಾಜಕಾಲುವೆಗೆ ನುಗ್ಗಿಬಂದಿತ್ತು. ಆದರೆ ಚರಂಡಿ ಕಟ್ಟಿಕೊಂಡಿದ್ದ ರಿಂದ ಮಳೆನೀರು ಸರಾಗ ಹರಿಯಲಾಗದೇ ಚಿಕ್ಕಹರದನಹಳ್ಳಿ, ಶ್ರೀರಾಂಪುರಂ 2ನೇ ಹಂತದ ಕೆಲ ಮನೆಗಳಿಗೆ ನೀರು ನುಗ್ಗಿತ್ತು, ದೊಡ್ಡ ಮಟ್ಟದ ಅವಾಂತರ ಸೃಷ್ಟಿಸಿತ್ತು. ಹಾಗಾಗಿ ತಕ್ಷಣವೇ ರಾಜಕಾಲುವೆ ನವೀಕರಿಸುವಂತೆ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿಯ ಮಳೆಗಾಲದಲ್ಲೂ ಮನೆಗಳಿಗೆ ನೀರುನುಗ್ಗದಂತೆ ತಡೆಯಲು ತಕ್ಷಣವೇ ರಾಜಕಾಲುವೆ ಸ್ವಚ್ಛಗೊಳಿಸಬೇಕು ಎಂದು ಪಾಲಿಕೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

Translate »