ಮುಂಜಾನೆಯಿಂದಲೇ ಪಂಚಲಿಂಗ ದರ್ಶನ
ಮೈಸೂರು

ಮುಂಜಾನೆಯಿಂದಲೇ ಪಂಚಲಿಂಗ ದರ್ಶನ

December 14, 2020

ತಲಕಾಡು, ಡಿ.13(ಎಂಟಿವೈ)-ದಕ್ಷಿಣ ಭಾರತದ ಸುಪ್ರಸಿದ್ಧ ಯಾತ್ರಾ ಕ್ಷೇತ್ರವಾಗಿ ರುವ ತಲಕಾಡಿನಲ್ಲಿ ನಾಳೆ (ಡಿ.14) ಮುಂಜಾನೆ 4.30ರಿಂದ 7.30ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಪಂಚಲಿಂಗ ದರ್ಶನ ಮಹೋತ್ಸವ ಜರುಗಲಿದ್ದು, ಕ್ಷೇತ್ರ ದಲ್ಲಿರುವ ಪ್ರಮುಖ 5 ದೇವಾಲಯಗಳಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದೆ. ಇದಕ್ಕಾಗಿ ಜಿಲ್ಲಾಡಳಿತ ಅಗತ್ಯ ಸಿದ್ಧತಾ ಕಾರ್ಯ ಪೂರ್ಣಗೊಳಿಸಿದೆ.

ಒಂದೇ ವರ್ಷದಲ್ಲಿ 5 ಶ್ರಾವಣ ಶನಿವಾರ, 5 ಕಾರ್ತಿಕ ಸೋಮವಾರ ಬಂದರೆ ಆ ವರ್ಷ ತಲಕಾಡಿನಲ್ಲಿ ಪಂಚಲಿಂಗ ದರ್ಶನ ಆಚರಿಸುವ ಪರಂಪರೆ ಇದೆ. 1993ರಲ್ಲಿ 12 ವರ್ಷಕ್ಕೊಮ್ಮೆ ಪಂಚಲಿಂಗ ದರ್ಶನ ನಡೆದಿದ್ದರೆ, ನಂತರದ ವರ್ಷ ಗಳಲ್ಲಿ 7 ವರ್ಷ, 5 ವರ್ಷ, 3 ವರ್ಷ ನಂತರ 7 ವರ್ಷದ ಬಳಿಕ ಈ ಬಾರಿ ಪಂಚಲಿಂಗ ದರ್ಶನ ನಡೆಯುತ್ತಿದೆ. ಕೊರೊನಾ ಹಿನ್ನೆಲೆ ಸರಳ ಹಾಗೂ ಸಾಂಪ್ರದಾಯಿಕ ಆಚರಣೆಗೆ ಸೀಮಿತಗೊಳಿಸಲಾಗಿದ್ದು, ವರ್ಚುಯಲ್ ದರ್ಶನಕ್ಕೆ ಆದ್ಯತೆ ನೀಡಲಾಗಿದೆ.

ಡಿ.10ರಂದು ತಲಕಾಡು ಪಂಚಲಿಂಗ ದರ್ಶನಕ್ಕೆ ಚಾಲನೆ ನೀಡಲಾಗಿತ್ತು. ಕಳೆದ 4 ದಿನಗಳಿಂದ ಪಂಚಲಿಂಗ ದರ್ಶನದ ಅಂಗವಾಗಿ ವಿವಿಧ ವಿಶೇಷ ಪೂಜಾ ಕೈಂಕರ್ಯ ಜರುಗಿದ್ದವು. ಅಮಾವಾಸ್ಯೆ ದಿನವಾದ ನಾಳೆ (ಸೋಮವಾರ) ತಲಕಾಡಿನ 5 ದೇವಾ ಲಯಗಳಲ್ಲೂ ವಿಶೇಷ ಅಭಿಷೇಕದೊಂದಿಗೆ ಪಂಚಲಿಂಗ
ದರ್ಶನ ಜರುಗಲಿದೆ. ಮುಂಜಾನೆ 4.30 ಗಂಟೆಯಿಂದ 7.30 ಗಂಟೆಯವರೆಗೆ ಕುಹು ಯೋಗ ಜ್ಯೇಷ್ಠಾ ನಕ್ಷತ್ರದಲ್ಲಿ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಪಂಚಲಿಂಗ ದರ್ಶನದ ಮಹಾಪೂಜೆ ನೆರವೇರಲಿದೆ. ತಲಕಾಡಿನಲ್ಲಿರುವ ಅರ್ಕೇಶ್ವರ, ಪಾತಾಳೇಶ್ವರ, ಮರಳೇಶ್ವರ, ಮಲ್ಲಿಕಾರ್ಜುನಸ್ವಾಮಿ ಹಾಗೂ ವೈದ್ಯನಾಥೇಶ್ವರ ದೇವಾಲಯದಲ್ಲಿ ಮಹಾಪೂಜೆ, ಮಹಾಭಿಷೇಕದೊಂದಿಗೆ ಈ ದೇವಾಲಯಗಳಲ್ಲಿ ಪಂಚಲಿಂಗ ದರ್ಶನ ನಡೆಯಲಿದೆ.

ಪಂಚಲಿಂಗ ದರ್ಶನಕ್ಕಾಗಿ 5 ದೇವಾಲಯಗಳಲ್ಲಿರುವ ಶಿವಲಿಂಗಕ್ಕೆ ಅಭಿಷೇಕ ಮಾಡಲು ಗೋಕರ್ಣದಿಂದ ಅಕ್ರೋಧಕ (ಗಂಗಾಜಲ)ತೀರ್ಥವನ್ನು ತರಲಾಗಿದೆ. ವಿಶೇಷ ಪೂಜೆಯ ನಂತರ ಮೂಲ ವಿಗ್ರಹಗಳಿಗೆ ಹೊಸ ವಸ್ತ್ರ, 2 ರಥಗಳಿಗೆ ಹೊಸ ವಸ್ತ್ರ ಖರೀದಿಸಿ ದೇವಾ ಲಯದಲ್ಲಿಡಲಾಗಿದೆ. ನಾಳೆ ಬೆಳಿಗ್ಗೆ ಪಂಚಲಿಂಗ ದರ್ಶನದ ಬಳಿಕ ತೆಪ್ಪೋತ್ಸವ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸ್ಥಳೀಯ ಶಾಸಕರು ಮುಂಜಾನೆ 4 ಗಂಟೆಗೆ ಪಂಚಲಿಂಗ ದರ್ಶನದಲ್ಲಿ ಪಾಲ್ಗೊಂಡು ದರ್ಶನ ಪಡೆಯಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಅಶ್ವಿನ್‍ಕುಮಾರ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ದೇವಾಲಯದ ಪ್ರಧಾನ ಅರ್ಚಕರು ಭಾನುವಾರ ಸಂಜೆ ತಲಕಾಡಿನಲ್ಲಿ ಕೈಗೊಂಡಿರುವ ಸಿದ್ಧತೆಯನ್ನು ಪರಿಶೀಲಿಸಿದರು. ಕೆಲವು ನ್ಯೂನ್ಯತೆಗಳನ್ನು ಸರಿಪಡಿಸಿ ಯಾವುದೇ ಗೊಂದಲ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ನಿಯಮ ಪಾಲಿಸಿ: ಸಿದ್ಧತೆ ಕಾರ್ಯ ಪರಿಶೀಲಿಸಿದ ಬಳಿಕ ಸಚಿವ ಎಸ್.ಟಿ.ಸೋಮ ಶೇಖರ್ ಮಾತನಾಡಿ, 2013ರಲ್ಲಿ ತಲಕಾಡಿನ ಪಂಚಲಿಂಗ ದರ್ಶನ ನಡೆದಿತ್ತು. 7 ವರ್ಷಗಳ ಬಳಿಕ ಇದೀಗ ಮತ್ತೆ ಪಂಚಲಿಂಗ ದರ್ಶನ ನಡೆಯುತ್ತಿದೆ. ವೈದ್ಯನಾಥೇಶ್ವರ, ಅರ್ಕೇಶ್ವರ ಸೇರಿದಂತೆ ತಲಕಾಡಿನಲ್ಲಿರುವ ಎಲ್ಲಾ ದೇವರಲ್ಲಿ ನಾಡಿಗೆ ಒಳಿತಾಗಲಿ ಹಾಗೂ ಸಂಕಷ್ಟ ನಿವಾರಣೆಯಾಗಿ ಸಕಲರಿಗೂ ಆರೋಗ್ಯ ಕರುಣಿಸಲೆಂದು ಪ್ರಾರ್ಥಿಸುತ್ತೇನೆ. ಕೋವಿಡ್ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕ ಆಚರಣೆಗಷ್ಟೇ ಪಂಚಲಿಂಗ ದರ್ಶನವನ್ನು ನಡೆಸಲಾಗುತ್ತಿದೆ. ಸ್ಥಳೀಯ ಗ್ರಾಮಗಳ ದಿನಕ್ಕೆ 1 ಸಾವಿರ ಮಂದಿಗಷ್ಟೇ ಪಂಚಲಿಂಗ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಡಿ.10ರಿಂದ ವಿವಿಧ ವಿಶೇಷ ಪೂಜಾ ಕೈಂಕರ್ಯಗಳು ಯಶಸ್ವಿಯಾಗಿ ಜರುಗಿವೆ. ದೇವಾಲಯಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಸರ್ ಬಳಸುವ ಮೂಲಕ ಕೊರೊನಾ ಹರಡುವಿಕೆ ತಡೆಗಟ್ಟಲು ಸಹಕರಿಸುವಂತೆ ಕೋರಿದರು.

Translate »